
ಗುಂಡ್ಲುಪೇಟೆ: ಹುಲಿ ಸೆರೆಗೆ ಸಾಕಾನೆ ಮೂಲಕ ನಡೆಸುತ್ತಿದ್ದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ದೂರಿ ತಾಲ್ಲೂಕಿನ ಇಂಗಲವಾಡಿ ಗ್ರಾಮಸ್ಥರು, ರೈತ ಸಂಘಟನೆ ಪ್ರಮುಖರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ರೈತ ಮಾದಪ್ಪ ಎಂಬವರ ಹಸುವನ್ನು ಮೂರು ದಿನಗಳ ಹಿಂದೆ ಲ್ಲಿ ಹುಲಿ ಕೊಂದಿತ್ತು. ರೈತರು ಹಾಗೂ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳು ಸಾಕಾನೆ ‘ಪಾರ್ಥಸಾರಥಿ’ಯನ್ನು ಬಳಸಿ ಒಂದು ದಿನ ಮಾತ್ರ ಹುಲಿ ಸೆರೆ ಕೂಂಬಿಂಗ್ ನಡೆಸಿ, ಸ್ಥಗಿತಗೊಳಿಸಿದ್ದರು.
ಸಾಕಾನೆಯನ್ನು ಒಂದು ಕಡೆ ಕಟ್ಟಿ ಹಾಕಿ ಮೇವು, ನೀರು ಕೊಡಲಾಗುತ್ತಿತ್ತು. ಇದನ್ನು ಗಮನಿಸಿದ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿ, ಸಾಕಾನೆ ಬಳಸಿಕೊಂಡು ನಡೆಸುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ನಿರ್ಲಕ್ಷ್ಯ ತೋರಲಾಗುತ್ತಿದೆ ದೂರಿದರು.
ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸ್ಥಳಕ್ಕೆ ಬಂದು ಗ್ರಾಮಸ್ಥರು ಮತ್ತು ರೈತ ಸಂಘದವರ ಸಮಸ್ಯೆ ಆಲಿಸಿದರು. ‘ತಾಂತ್ರಿಕ ಕಾರಣ ಮತ್ತು ಪಡುಗೂರು ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿರುವುದರಿಂದ ಇಂಗಲವಾಡಿಯಲ್ಲಿ ಕಾರ್ಯಾಚರಣೆಗೆ ವಿರಾಮ ನೀಡಲಾಗಿತ್ತು. ತಕ್ಷಣ ಕಾರ್ಯಾಚರಣೆ ಪ್ರಾರಂಭಿಸುತ್ತೇವೆ’ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ರೈತ ಸಂಘಟನೆ ಜಿಲ್ಲಾ ಮಂಡಳಿ ಸದಸ್ಯ ಮಾಡ್ರಹಳ್ಳಿ ಪಾಪಣ್ಣ ಮುಖಂಡರಾದ ಮಹೇಶ್, ಗಣೇಶ್, ಶಶಿಕುಮಾರ್, ಗುರುರಾಜ್. ಮಾದಪ್ಪ, ಸೋಮೇಶಪ್ಪ, ಸುನಿಲ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.