ADVERTISEMENT

ಗುಂಡ್ಲುಪೇಟೆ ಅರಣ್ಯದಂಚಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:22 IST
Last Updated 19 ಡಿಸೆಂಬರ್ 2025, 7:22 IST
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಸೆರೆ ಹಿಡಿಯಲಾದ ಹುಲಿ
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಸೆರೆ ಹಿಡಿಯಲಾದ ಹುಲಿ   

ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ನಸುಕಿನಲ್ಲಿ ಸೆರೆ ಹಿಡಿದಿದ್ದಾರೆ. 

ಬೊಮ್ಮಲಾಪುರ ಗ್ರಾಮದ ಸರ್ವೆ ನಂ-124ರಲ್ಲಿ ಸೆರೆ ಹಿಡಿಯಲಾದ ಗಂಡು ಹುಲಿ ಸುಮಾರು ನಾಲ್ಕು ವರ್ಷ ಪ್ರಾಯದ್ದಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ ವಲಯ ವ್ಯಾಪ್ತಿಯ ಬೊಮ್ಮಲಾಪುರ, ಕೆ.ಕೆ. ಹುಂಡಿ, ಶಿವಪುರ, ಕೊಡಸೋಗೆ, ಹುಲ್ಲೇಪುರ, ದೇಪಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಸರಹದ್ದಿನಲ್ಲಿ ಇತ್ತೀಚೆಗೆ ಗ್ರಾಮಸ್ಥರು ಹಾಗೂ ರೈತರಿಗೆ ಉಪಟಳ ನೀಡಿ ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಹುಲಿ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದರು. ಹುಲಿ ಪತ್ತೆಗಾಗಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಹುಲಿಯ ಚಲನವಲನದ ದೃಶ್ಯಗಳು ಸೆರೆಯಾಗಿದ್ದವು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭಾಕರನ್, ಎಸಿಎಫ್ ಸುರೇಶ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕಾಡಾನೆಗಳಾದ ಪ್ರಶಾಂತ, ಕಂಜನ್ ಮತ್ತು ಮಾಸ್ತಿ ಸಹಯೋಗದಿಂದ ಕಾರ್ಯಾಚರಣೆ ಕೈಗೊಂಡು ಗ್ರಾಮದ ಸರ್ವೆ ನಂ 124 ರ ಬೀಳು ಬಿದ್ದ ಜಮೀನಿನಲ್ಲಿ ಡಿ.18ರ ಬೆಳಗಿನ ಜಾವ ಗಂಡು ಹುಲಿಯನ್ನು ಸೆರೆ ಹಿಡಿದಿದ್ದಾರೆ. ಹುಲಿಯು ಆರೋಗ್ಯವಾಗಿದ್ದು, ಸೆರೆ ಹಿಡಿಯುವ ಸಂದರ್ಭ ಉಪಚಾರ ಮತ್ತು ಮೇಲ್ವಿಚಾರಣೆ, ಸುರಕ್ಷತೆ ನೋಡಿಕೊಂಡ ಇಲಾಖಾ ಪಶು ವೈಧ್ಯಾಧಿಕಾರಿಗಳು ಬಂಡೀಪುರಕ್ಕೆ ಸಾಗಿಸಿದ ನಂತರವೂ ಹುಲಿ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ಆರ್.ಶಿವಕುಮಾರ್, ನಿಸಾರ್ ಅಹಮದ್, ವೈರಮುಡಿ, ಪಶು ವೈಧ್ಯಾಧಿಕಾರಿ ಡಾ.ವಾಸಿಂ ಮಿರ್ಜಾ, ಡಾ.ರಮೇಶ್, ಅರಿವಳಿಕೆ ಚುಚ್ಚುಮದ್ದು ತಜ್ಞ ರಂಜನ್, ಉಪವಲಯ ಅರಣ್ಯಾಧಿಕಾರಿ ಜಿ.ಪಿ.ಭರತ್, ಡ್ರೋಣ್ ತಂಡ, ಮೂಲೆಹೊಳೆ, ಮದ್ದೂರು, ಗುಂಡ್ಲುಪೇಟೆ ಬಫರ್‍ಜೋನ್, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು.

ತಹಸೀಲ್ದಾರ್ ಎಂ.ಎಸ್.ತನ್ಮಯ್, ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್, ಪೊಲೀಸ್‌ ಮತ್ತು ಕೆಇಬಿ ಸಿಬ್ಬಂದಿ ಭಾಗವಹಿಸಿದ್ದರು ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ತಿಳಿಸಿದ್ದಾರೆ.

ಹುಲಿ ಅವಿತು ಕುಳಿತುಕೊಳ್ಳಬಹುದಾದ ಕೆರೆ ಮಾಳಗಳು, ಬೀಳು ಬಿದ್ದ ಜಮೀನುಗಳು ಹಾಗೂ ಪೊದೆಗಳ ತೆರವಿಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸುವ ಜತೆಗೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಹೇಳಿದರು.

ಚರ್ಚೆಗೆ ಗ್ರಾಸವಾದ ಆ ಘಟನೆ

ಬಂಡೀಪುರ ಅಭಯಾರಣ್ಯದ ಗುಂಡ್ಲುಪೇಟೆ ಬಫರ್  ವಲಯ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಉಪಟಳ ಹೆಚ್ಚಾದ ಹಿನ್ನೆಲೆ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಅರಣ್ಯ ಇಲಾಖೆ ಜಮೀನೊಂದರಲ್ಲಿ ಬೋನು ಇರಿಸಿತ್ತು. ನಂತರ ಅರಣ್ಯ ಸಿಬ್ಬಂದಿ ಇತ್ತ ಸುಳಿಯುತ್ತಿಲ್ಲ ಎಂದು ಎಂದು ಆರೋಪಿಸಿ ರೈತರು ಅರಣ್ಯ ಸಿಬ್ಬಂದಿಗಳನ್ನು 2025 ಸೆ.9ರಂದು ಬೋನಿಗೆ ಕೂಡಿದ್ದರು. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಹಾಗೂ ರೈತರ ದೂರು ಪ್ರತಿ ದೂರು ದಾಖಲಾಗಿತ್ತು .ಇದರ ಮಧ್ಯೆ ಕೆಲ ದಿನಗಳಿಂದ ಹುಲಿ ಮತ್ತು ಚಿರತೆ ಉಪಟಳ ಅಲ್ಪಮಟ್ಟದಲ್ಲಿ ಕಡಿಮೆಯಾಗುತ್ತು. ಕಳೆದ ಮೂರು ದಿನಗಳ ಹಿಂದೆ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ರೈತರು ಕೂಡ ಬೆಚ್ಚಿಬಿದ್ದು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಎರಡು ತಿಂಗಳ ನಂತರ ಈಗ ಇದೇ ಪ್ರದೇಶದಲ್ಲಿ ಹುಲಿ ಸೆರೆಯಾಗಿರುವುದು ಎಲ್ಲರಲ್ಲೂ ಸಮಾಧಾನ ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.