
ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸೋಮವಾರದಿಂದ ಹುಲಿ ಗಣತಿ ಆರಂಭವಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಣತಿಯ 2ನೇ ಹಂತದ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಹುಲಿ ಅಂದಾಜು ಪ್ರಕ್ರಿಯೆ 2026ರ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಕ್ಯಾಮೆರಾ ಟ್ರಾಪ್ ಹಾಗೂ ಹುಲಿಗಳ ಇರುವಿಕೆ, ಸಸ್ಯಾಹಾರಿ ಪ್ರಾಣಿಗಳ ಸಾಂಧ್ರತೆ ಹಾಗೂ ಹಂಚಿಕೆಯನ್ನು ಅಂದಾಜಿಸುವ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರಮುಖ ಪ್ರಕ್ರಿಯೆಯಾದ ಕ್ಯಾಮೆರಾ ಟ್ರಾಪ್ ಸರ್ವೆ ಕಾರ್ಯವನ್ನು ಮೂರು ಹಂತಗಳಲ್ಲಿ 50 ತರಬೇತಿ ಹೊಂದಿರುವ ಸಿಬ್ಬಂದಿಯನ್ನು ಬಳಸಿಕೊಂಡು ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಬಂಡೀಪುರ, ಜಿ.ಎಸ್. ಬೆಟ್ಟ, ಕುಂದುಕೆರೆ ಹಾಗೂ ಗುಂಡ್ಲುಪೇಟೆ ವಲಯಗಳಲ್ಲಿ ನ.25ರಿಂದ ಜ.2ರವರೆಗೆ ನಡೆಸಲಾಗಿದೆ.
ಎರಡನೇ ಹಂತದಲ್ಲಿ ಓಂಕಾರ, ಮೂಲೆಹೊಳೆ, ಎ.ಎಂ.ಗುಡಿ ಹಾಗೂ ಮದ್ದೂರು ವಲಯಗಳಲ್ಲಿ ಜ.8ರಿಂದ ಫೆ.7ರವರೆಗೆ ನಡೆಸಲಾಗುವುದು. 3ನೇ ಹಂತದಲ್ಲಿ ನುಗು, ಹೆಡಿಯಾಲ, ಮೊಳೆಯೂರು, ಎನ್.ಬೇಗೂರು ಹಾಗೂ ಗುಂಡ್ರೆ ವಲಯಗಳಲ್ಲಿ ಫೆ.10ರಿಂದ ಮಾರ್ಚ್ 3ರವರೆಗೆ ಸಮೀಕ್ಷೆ ನಡೆಯಲಿದೆ.
ಕ್ಷೇತ್ರ ಮಟ್ಟದಲ್ಲಿ ಕಲೆ ಹಾಕಿದ ಕ್ಯಾಮೆರಾ ಟ್ರಾಪ್ ಛಾಯಾಚಿತ್ರಗಳನ್ನು ವಿಶ್ಲೇಷಣೆಗಾಗಿ ಬೆಂಗಳೂರಿನಲ್ಲಿರುವ ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶಕ್ಕೆ ಸಲ್ಲಿಸಲಾಗುವುದು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ 114 ಬೀಟ್‌ಗಳಲ್ಲಿ ಏಕಕಾಲದಲ್ಲಿ ಹುಲಿಗಳ ಇರುವಿಕೆ ಸಂಬಂಧ ಪ್ರತ್ಯಕ್ಷ ಹಾಗೂ ಪರೋಕ್ಷ ಗುರುತುಗಳನ್ನು ಕಲೆ ಹಾಕಲಾಗುತ್ತಿದೆ.
‘ಹುಲಿಗಳ ಪ್ರಮುಖ ಆಹಾರವಾಗಿರುವ ಜಿಂಕೆ, ಕಾಡೆಮ್ಮೆ ಹಾಗೂ ಇತರೆ ಸಸ್ಯಾಹಾರಿ ಪ್ರಾಣಿಗಳ ಸಾಂಧ್ರತೆ ಹಾಗೂ ಹಂಚಿಕೆಯ ಅಂದಾಜಿಸುವ ಪ್ರಕ್ರಿಯೆ ನಡೆದಿದೆ. ಆಯ್ದ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗಿರುವ ಲೈನ್ ಟ್ರಾನ್ಸೆಕ್ಸ್‌ಗಳನ್ನು 2 ಬ್ಲಾಕ್‌ಗಳಾಗಿ ವಿಂಗಡಿಸಿ ಸಮೀಕ್ಷೆ ಕೈಗೊಳ್ಳಲಾಗುವುದು. ಕ್ಷೇತ್ರ ಮಟ್ಟದಲ್ಲಿ ಸಂಗ್ರಹಿಸುವ ಮಾಹಿತಿಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಎಂ ಸ್ಟ್ರೈಪ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ’ ಎಂದು ಬಂಡೀಪುರ ಸಿಎಫ್ ಪ್ರಭಾಕರನ್ ತಿಳಿಸಿದರು.
ಅಖಿಲ ಭಾರತ ಹುಲಿ ಅಂದಾಜು 2026ರ ಸಮೀಕ್ಷೆಯಲ್ಲಿ 400 ಕ್ಷೇತ್ರ ಸಿಬ್ಬಂದಿ, 550 ಕ್ಯಾಮೆರಾ ಟ್ರಾಪ್, 90 ಮೊಬೈಲ್ ಉಪಕರಣಗಳು, 70 ರೇಂಜ್ ಫೈಂಡರ್ಸ್ ಹಾಗೂ 50 ಕಾಂಪಾಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಫ್ ತಿಳಿಸಿದ್ದಾರೆ.
ಮೂರು ಹಂತಗಳಲ್ಲಿ ನಡೆಯಲಿದೆ ಹುಲಿ ಗಣತಿ ‘ಸಂಗ್ರಹ ಮಾಹಿತಿ ವನ್ಯಜೀವಿ ತಾಂತ್ರಿಕ ಕೋಶಕ್ಕೆ ಸಲ್ಲಿಕೆ’ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಗಣತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.