ADVERTISEMENT

ಹುಲಿ ಸೆರೆ ಹಿಡಿಯಲು ವಿಫಲರಾದ ಅರಣ್ಯಾಧಿಕಾರಿಗಳನ್ನು ಬೋನಿನೊಳಗೆ ಕೂಡಿ ಹಾಕಿದರು!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 13:50 IST
Last Updated 9 ಸೆಪ್ಟೆಂಬರ್ 2025, 13:50 IST
   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಸೆರೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಸಿಟ್ಟಿಗೆದ್ದ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ರೈತರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಬೋನಿನೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ ಪ್ರಸಂಗ ಮಂಗಳವಾರ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಸೆರೆ ಹಿಡಿಯಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನೇ ಬೋನಿನೊಳಗೆ ಕೂಡಿ ಹಾಕಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಲಾಪುರ ಗ್ರಾಮದ ರೈತ ಗಂಗಪ್ಪನವರ ಜಮೀನಿನ ಸುತ್ತಮುತ್ತ ಹುಲಿ ಹಾಗೂ ಚಿರತೆಗಳ ಉಪಟಳ ಹೆಚ್ಚಾಗಿದ್ದು ಜಾನುವಾರು ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ರೈತರ ಒತ್ತಾಯಕ್ಕೆ ಮಣಿದು ಹುಲಿ ಸೆರೆಗೆ ನೆಪಕ್ಕೆ ಬೋನು ಇರಿಸಿರುವ ಅಧಿಕಾರಿಗಳು ಇತ್ತ ಸುಳಿದಿಲ್ಲ. ಮೂರು ದಿನಗಳ ಹಿಂದೆ ಹುಲಿ ದಾಳಿಗೆ ಕರುವೊಂದು ಸತ್ತರೂ ಸ್ಥಳಕ್ಕೆ ಬಂದಿರಲಿಲ್ಲ.

ADVERTISEMENT

ಹಾಗಾಗಿ, ಬೊಮ್ಮಲಾಪುರ ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೋನಿನೊಳಗೆ ಕೂಡಿಹಾಕಬೇಕಾಯಿತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕೂಂಬಿಂಗ್: ಅಧಿಕಾರಿಗಳಿಗೆ ದಿಗ್ಬಂಧನ ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆ ಗುಂಡ್ಲುಪೇಟೆ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ಎಸಿಎಫ್ ನವೀನ್ ಕುಮಾರ್ ಸ್ಥಳಕ್ಕೆ ಭೇಟಿನೀಡಿ ರೈತರ ಮನವೊಲಿಸಲು ಯತ್ನಿಸಿದರು. ಸಾಕಾನೆ ಬಳಸಿ ಹುಲಿ ಸೆರೆಗೆ ಕೂಂಬಿಂಗ್ ಮಾಡುವುದಾಗಿ ಭರವಸೆ ನೀಡಿದ ಬಳಿಕ ಅಧಿಕಾರಿಗಳನ್ನು ಬಿಡುಗಡೆಗೊಳಿಸಲಾಯಿತು.

ರೈತ ಸಂಘಟನೆ ಆಕ್ರೋಶ: ಹುಲಿ ಸೆರೆಗೆ ಕ್ರಮ ವಹಿಸದಿದ್ದರೆ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದ್ದಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.