ಯಳಂದೂರು: ರಾಷ್ಟ್ರೀಯ ಪ್ರಾಣಿ ಹುಲಿಯು ಸಂಸ್ಕೃತಿ, ಪುರಾಣ, ಇತಿಹಾಸಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ ವಿಷಪ್ರಾಶನ, ಕಳ್ಳಬೇಟೆ, ಮಾನವ ಪ್ರಾಣಿ ಸಂಘರ್ಷ ಸಹಿತ ಇತರೆ ಕಾರಣಗಳಿಗೆ ಹುಲಿಗಳ ಸಂತತಿ ಅಪಾಯದಲ್ಲಿರುವುದು ಆತಂಕ ಸೃಷ್ಟಿಸಿದೆ.
ತಾಲ್ಲೂಕಿನ ಬಿಳಿಗಿರಿರಂಗನಾಥ ವನ್ಯಧಾಮ ವ್ಯಾಘ್ರ ಪ್ರಭೇದಗಳ ಅಳಿವು ಉಳಿವಿನ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿಯೂ ಗುರುತಿಸಿಕೊಂಡಿದೆ. ಕಾನನದ ವಾತಾವರಣ ಹುಲಿ, ಚಿರತೆಗಳ ಜೀವ ವಿಕಸನಕ್ಕೆ ಪೂರಕವಾಗಿದೆ. ಅಪೂರ್ವ ವನ್ಯಜೀವಿ ಮತ್ತು ಪರಿಸರ ವ್ಯವಸ್ಥೆಯ ಭಾಗವಾಗಿರುವ ಅರಣ್ಯ ವನ್ಯಜೀವಿ ಸಂಕುಲಗಳ ಅಳಿವು ಉಳಿವಿನಲ್ಲಿ ಪ್ರಧಾನ ಪಾತ್ರ ವಹಿಸಿವೆ.
'ಅತ್ಯಂತ ಶಕ್ತಿಶಾಲಿ ಮತ್ತು ಭವ್ಯ ಜೀವಿಯಾಗಿರುವ ಹುಲಿಗಳನ್ನು ಪೂಜಿಸುವ ಪರಂಪರೆ ಜಿಲ್ಲೆಯಲ್ಲಿದ್ದರೂ ಹುಲಿ-ಮಾನವ ಸಂಘರ್ಷ ನಿಂತಿಲ್ಲ. ವಿಷಪ್ರಾಶನ, ಕಳ್ಳಬೇಟೆ ಸಹಿತ ಹಲವು ಕಾರಣಗಳಿಗೆ ಹುಲಿಗಳ ಸಂಖ್ಯೆ ಕುಸಿಯುತ್ತ ಸಾಗುತ್ತಿದ್ದು ಪರಿಸರ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗಿದೆ’ ಎನ್ನುತ್ತಾರೆ ಏಟ್ರೀ ಸಂಶೋಧಕ ಸಿ.ಮಾದೇಗೌಡ.
'ಹುಲಿಗಳ ಹೆಚ್ಚಳದಿಂದ ಕಾನನದ ರಕ್ಷಣೆ ಸುಲಭವಾಗಲಿದೆ. ಅರಣ್ಯ ಸಮತೋಲನಕ್ಕೂ ಹುಲಿಗಳು ಕೊಡುಗೆ ನೀಡುತ್ತವೆ. ಹುಲಿಗಳ ಉಪಸ್ಥಿತಿ ಆರೋಗ್ಯಕರ ನಿಸರ್ಗ ವ್ಯವಸ್ಥೆ ಹಾಗೂ ಜೀವ ವೈವಿಧ್ಯತೆಯ ಸಮೃದ್ಧತೆಯ ಸೂಚಕವಾಗಿದೆ. ಹುಲಿಯು ಕಾಡು ಇಂಗಾಲವನ್ನು ಹೀರಿಕೊಂಡು, ಜೀವಾನಿಲವನ್ನು ಹೆಚ್ಚಿಸಿ, ಜಲ ಭದ್ರತೆ ರೂಪಿಸುವಲ್ಲಿ ಸಹಕಾರಿ’ ಎನ್ನುತ್ತಾರೆ ವಿವೇಕಾನಂದ ಟ್ರಸ್ಟ್‌ನ ಮುಖ್ಯಸ್ಥ ಹಾಗೂ ಪರಿಸರವಾದಿ ಕೊಮಾರನಪುರ ಮಲ್ಲೇಶಪ್ಪ.
ಬಿಆರ್‌ಟಿ ಕಾಡಿನಲ್ಲಿ 2014 ರಿಂದ 2022ರವರೆಗೆ ನಡೆದಿರುವ ಹುಲಿಗಣತಿಯಲ್ಲಿ 44 ಹುಲಿಗಳನ್ನು ಗುರುತಿಸಲಾಗಿದೆ. ನೀಲಗಿರಿ ಸಂಕೀರ್ಣದ ಬಿಳಿಗಿರಿ ಅರಣ್ಯ 574.82 ಚ.ಕಿ.ಮೀ ಹೊಂದಿದ್ದು, ಎಂ.ಎಂ.ಹಿಲ್ಸ್, ಬಂಡೀಪುರ ಹಾಗೂ ಮೈಸೂರು ಭಾಗದ ಅರಣ್ಯಗಳಿಂದಲೂ ಹುಲಿಗಳ ಸಂಚಾರ ಇರುವುದು ಕಂಡುಬಂದಿದೆ.
ಅರಣ್ಯ ಇಲಾಖೆಯ 9.028 ಟ್ರಾಪ್ ನೈಟ್ (ಸ್ವಯಂ ಚಾಲಿತ ಪೋಟೊ ವ್ಯವಸ್ಥೆ)ಕ್ಯಾಮೆರಾಗಳಲ್ಲಿ ಹುಲಿಗಳ 637 ಛಾಯಾಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. 100 ಚ.ಕಿ.ಮೀ ವ್ಯಾಪ್ತಿಯಲ್ಲಿ 4 ಹುಲಿಗಳ ಆವಾಸ ಕಂಡುಬಂದಿದೆ. 1 ಗಂಡು ಹುಲಿಗೆ 2 ಹೆಣ್ಣು ಹುಲಿಗಳು (ಲೈಂಗಿಕಾನುಪಾತ) ಇರುವುದನ್ನು ಗುರುತಿಸಲಾಗಿದೆ ಎನ್ನುತ್ತಾರೆ ಮಲ್ಲೇಶಪ್ಪ
‘ಹುಲಿ ಸಂಖ್ಯೆ ಹೆಚ್ಚಳಕ್ಕೆ ಕ್ರಮ’
‘ಹುಲಿ ಆವಾಸದಲ್ಲಿ ನಿಯಮಿತ ಸಮೀಕ್ಷೆ ಬಲಿ ಪ್ರಾಣಿಗಳ ಹೆಚ್ಚಳಕ್ಕೆ ಹುಲ್ಲುಗಾವಲು ಪ್ರದೇಶ ವೃದ್ಧಿ ಕರೆ ಹೊಂಡಗಳ ಹೂಳೆತ್ತುವಿಕೆ ಲಂಟಾನಾ ತೆರವು ರಾತ್ರಿ ಸಂಚಾರ ನಿಷೇಧ ಪ್ರವಾಸಿಗರು ವಿದ್ಯಾರ್ಥಿಗಳು ಹಾಗೂ ಆದಿವಾಸಿಗಳಿಗೆ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಘ್ರ ಸಂಕುಲಗಳ ರಕ್ಷಣೆಗೆ ಒತ್ತು ನೀಡಲಗಿದೆ ಎನ್ನುತ್ತಾರೆ ಯಳಂದೂರು ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್ ಅಕ್ಷಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.