
ಚಾಮರಾಜನಗರ: ಪಾರದರ್ಶಕ ಆಡಳಿತ ಹಾಗೂ ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸುವುದು ಜಿಲ್ಲಾಡಳಿತದ ಆದ್ಯ ಕರ್ತವ್ಯ ಎಂದು ನೂತನ ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನಕೇಂದ್ರೀತ ಆಡಳಿತ, ಕಾನೂನು ಸುವ್ಯವಸ್ಥೆ ಪಾಲನೆ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಪ್ರವಾಸೋದ್ಯಮಕ್ಕೆ ಒತ್ತು, ಮಾನವ ಪ್ರಾಣಿ ಸಂಘರ್ಷ ತಡೆ, ಆದಿವಾಸಿಗಳ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಜಿಲ್ಲೆಯು ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಲಾಗುವುದು. ನಿರ್ಗಮಿತ ಜಿಲ್ಲಾಧಿಕಾರಿಗಳ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು.
ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸರ ಸಲಹೆಗಳೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಭರವಸೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮಾತನಾಡಿ, ರಾಜ್ಯಕ್ಕೆ ಮೊದಲ ಹಾಗೂ ಮಾದರಿಯಾದ ಹಲವು ಯೋಜನೆಗಳು ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅನುಷ್ಠಾನಗೊಳಿಸಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಜೊತೆಗೂಡಿ 6 ವರ್ಷದೊಳಗಿನ 35,000 ಅಂಗನವಾಡಿ ಮಕ್ಕಳನ್ನು ತಪಾಸಣೆಗೊಳಪಡಿಸಿ ವಾಕ್ ಹಾಗೂ ಶ್ರವಣ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದರು.
ಪ್ರಾಣಸಖಿ ಕಾರ್ಯಕ್ರಮದ ಮೂಲಕ ಹದಿಹರೆಯದ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ಕಾರ್ಯಕ್ರಮದಡಿ 22,000 ಹೆಣ್ಣುಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಕಾರ್ಪೊರೆಟ್ ಕಂಪೆನಿಗಳ ಸಿಎಸ್‌ಆರ್ ನಿಧಿ ಸಂಗ್ರಹಿಸಿ ಶೌಚಾಲಯಗಳ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ, ಕೌಶಲ ತರಬೇತಿ ಸಹಿತ ಜನಪರ ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಸಿಇಸಿ ಮೋನಾ ರೋತ್ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ, ಶಿಕ್ಷಣ, ನರೇಗಾ ಯೋಜನೆ ಅನುಷ್ಠಾನ ಸಹಿತ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನ ವಿಚಾರದಲ್ಲಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಬೆನ್ನಿಗೆ ನಿಂತಿದ್ದರು’ ಎಂದರು.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಮಾತನಾಡಿ ‘ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಯಶಸ್ವಿಯಾಗಿ ನಡೆಯಲು ನಿರ್ಗಮಿತ ಜಿಲ್ಲಾಧಿಕಾರಿಗಳ ಶ್ರಮ ಹೆಚ್ಚಾಗಿತ್ತು’ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು ಮಾತನಾಡಿ, ‘ಬೆಳಕನ್ನೇ ಕಾಣದ ಸೋಲಿಗರ ಹಾಡಿಗಳಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ ಸಹಿತ ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಿಲ್ಪಾನಾಗ್ ಅವರ ಶ್ರಮ ಶ್ಲಾಘನೀಯ. ರೈತರ ಸಮಸ್ಯೆಗಳಿಗೆ ಸ್ಪಂದನೆ, ಕೆರೆಗಳಿಗೆ ನೀರು ತುಂಬಿಸಲು ಒತ್ತು ಸಹಿತ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ’ ಎಂದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ, ‘ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸಿ ಕಳೆದ ಎರಡೂವರೆ ವರ್ಷ ಸಮರ್ಥವಾಗಿ ಜಿಲ್ಲಾಡಳಿತವನ್ನು ಮುನ್ನಡೆಸಿದ ಶಿಲ್ಪಾನಾಗ್ ಅವರಿಗೆ ವೃತ್ತಿ ಬದುಕಿನಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ’ ಎಂದು ಆಶಿಸಿದರು.
ರೈತ ಮುಖಂಡ ಹೊನ್ನೂರು ಬಸವಣ್ಣ ಮಾತನಾಡಿ, ‘ರೈತರ ಸಮಸ್ಯೆಗಳಿಗೆ, ಹೋರಾಟಗಳಿಗೆ ಸದಾ ಕಿವಿಯಾಗಿ ಸ್ಪಂದಿಸುತ್ತಿದ್ದರು. ಜಿಲ್ಲಾಮಟ್ಟದಲ್ಲಿ ಸಾಧ್ಯವಾಗದಿದ್ದರೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುತ್ತಿದ್ದರು. ಗೋಮಾಳಗಳ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ’ ಎಂದರು.
ರೈತ ಮುಖಂಡ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ‘ನಿರ್ಗಮಿತ ಜಿಲ್ಲಾಧಿಕಾರಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಹೋರಾಟ, ಪ್ರತಿಭಟನೆಗಳು ನಡೆದಾಗ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹರಿಸಿದ್ದಾರೆ. ನೂತನ ಜಿಲ್ಲಾಧಿಕಾರಿ ಕೂಡ ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.
ಎಸ್‌ಪಿ ಎಂ.ಮುತ್ತುರಾಜ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶೃತಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
‘ಅಧಿಕಾರ ಸ್ವೀಕಾರ’ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪಾ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧಿಕಾರ ಹಸ್ತಾಂತರ ಮಾಡಿ ಶುಭ ಕೋರಿದರು. ಬಳಿಕ ನೂತನ ಜಿಲ್ಲಾಧಿಕಾರಿ ಹಲವು ಇಲಾಖೆಗಳಿಗೆ ಭೇಟಿನೀಡಿ ಅಧಿಕಾರಿಗಳನ್ನು ಪರಿಚಯಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಿವಿಮಾತು ಹೇಳಿದರು.
‘ಹೂಮಳೆಗರೆದ ಸಿಬ್ಬಂದಿ’ ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಹಾಗೂ ನೂತನ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಮಳೆಗರೆದರು. ರೈತರು ಪ್ರಗತಿಪರರು ಕನ್ನಡ ಪರ ಸಂಘಟನೆಗಳ ಮುಖಂಡರು ಸನ್ಮಾನ ಮಾಡಿದರು. ಜಿಲ್ಲಾಧಿಕಾರಿಯೊಟ್ಟಿಗೆ ಕಾರ್ಯ ನಿರ್ವಹಿಸಿದ್ದ ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಎಸ್‌ಪಿ ಪದ್ಮಿನಿ ಸಾಹು ಉಪ ವಿಭಾಗಾಧಿಕಾರಿ ಮಹೇಶ್ ವಿಡಿಯೋ ಮೂಲಕ ಶುಭ ಕೋರಿದರು.
‘ವೃದ್ಧೆಗೆ ಪಡಿತರ ಚೀಟಿ’ ಅನಾರೋಗ್ಯದ ಕಾರಣದಿಂದ ಪಡಿತರ ಪಡೆದಿರಲಿಲ್ಲ. ಇದೇ ಕಾರಣ ನೀಡಿ ಪಡಿತರ ಚೀಟಿ ರದ್ದು ಮಾಡಲಾಗಿದೆ. ಭಾಗ್ಯಲಕ್ಷ್ಮೀ ಹಣವೂ ಸಿಗುತ್ತಿಲ್ಲ. ಊಟಕ್ಕೂ ತೊಂದರೆಯಾಗಿದೆ ದಯವಿಟ್ಟು ಪಡಿತರ ಚೀಟಿ ಕೊಡಿಸಿ ಎಂದು ಕಾಗಲವಾಡಿಯ ವೃದ್ಧೆ ರಾಜಮ್ಮ ಜಿಲ್ಲಾಧಿಕಾರಿ ಶ್ರೀರೂಪಾ ಬಳಿ ಕಣ್ಣೀರು ಹಾಕಿದರು. ವೃದ್ಧೆಯ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರನ್ನು ಕರೆಸಿ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ಅಧಿಕಾರ ಸ್ವೀಕರಿಸಿದ ಕೂಡಲೇ ಸಮಸ್ಯೆಗೆ ಸ್ಪಂದಿಸದ ಜಿಲ್ಲಾಧಿಕಾರಿ ನಡೆಗೆ ಮೆಚ್ಚುಗೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.