ADVERTISEMENT

ಚಾಮರಾಜನಗರ: 7 ಬಸ್‌ಗಳ ಸಂಚಾರ, ಟ್ರೈನಿಗಳಿಗೆ ನೋಟಿಸ್‌

ಸಾರಿಗೆ ಮುಷ್ಕರದ 2ನೇ ದಿನ: ವಿದ್ಯಾರ್ಥಿಗಳಿಗೆ ತೊಂದರೆ, ಮನೆ ತೆರವುಗಳಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:52 IST
Last Updated 8 ಏಪ್ರಿಲ್ 2021, 13:52 IST
ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಗುರುವಾರವೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳುವ ಬಸ್‌ಗಾಗಿ ಕಾದುಕುಳಿತಿದ್ದರು
ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಗುರುವಾರವೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳುವ ಬಸ್‌ಗಾಗಿ ಕಾದುಕುಳಿತಿದ್ದರು   

ಚಾಮರಾಜನಗರ: 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರವೂ ಮುಂದುವರಿದಿರುವ ನಡುವೆಯೇ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗೀಯ ಘಟಕದಿಂದ ಏಳು ಬಸ್‌ಗಳು ಕಾರ್ಯಾಚರಿಸಿವೆ.

15 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಚಾಮರಾಜನಗರ–ಮೈಸೂರು, ಚಾಮರಾಜನಗರ–ನಂಜನಗೂಡು, ಚಾಮರಾಜನಗರ– ಕೊಳ್ಳೇಗಾಲ, ಚಾಮರಾಜನಗರ– ಗುಂಡ್ಲುಪೇಟೆ, ಕೊಳ್ಳೇಗಾಲ–ಹನೂರು ಮತ್ತು ಕೊಳ್ಳೇಗಾಲ–ರಾಮಾಪುರ ಮಾರ್ಗಗಳಲ್ಲಿ ಬಸ್ ಸಂಚರಿಸಿವೆ.

ಇದಲ್ಲದೇ, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಟ್ರೈನಿ ನೌಕರರಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ನೌಕರರ ವಸತಿ ಗೃಹಗಳಲ್ಲಿ ತಿಳಿವಳಿಕೆ ಪತ್ರಗಳನ್ನು ಅಂಟಿಸಿರುವ ಅಧಿಕಾರಿಗಳು, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ. ಇಲ್ಲದಿದ್ದರೆ, ಮನೆ ಹಂಚಿಕೆ ರದ್ದು ಮಾಡಿ, ಮನೆ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ADVERTISEMENT

‘ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಏಳು ಬಸ್‌ಗಳು ಸಂಚರಿಸಿವೆ. ನಮ್ಮಲ್ಲಿ 241 ಟ್ರೈನಿ ನೌಕರರಿದ್ದು ಎಲ್ಲರಿಗೂ ನೋಟಿಸ್‌ ಜಾರಿ ಮಾಡಿದ್ದೇವೆ. ಕರ್ತವ್ಯದಿಂದ ದೂರ ಉಳಿದಿರುವ ನೌಕರರಿಗೆ ತಿಳಿವಳಿಕೆ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ’ ಎಂದು ಕೆಎಸ್ಆರ್‌ಟಿಸಿ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದುವರಿದ ಸಂಕಷ್ಟ: ಪೂರ್ಣಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯದೇ ಇದ್ದುದರಿಂದ ಸಾರ್ವಜನಿಕರು ಅದರಲ್ಲೂ ಶಾಲಾ ಮಕ್ಕಳು ತೀವ್ರ ಕಿರಿ ಕಿರಿ ಅನುಭವಿಸಿದರು.

ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‌ಗಳು, ಆಟೊ, ಕ್ಯಾಬ್‌ಗಳ ಮೊರೆ ಹೋಗಬೇಕಾಯಿತು.

‘ಖಾಸಗಿ ಬಸ್‌ಗಳು ಇದ್ದುದರಿಂದ ಸಾರಿಗೆ ಬಸ್‌ಗಳು ಇಲ್ಲದಿದ್ದರೂ, ಯಾವುದೇ ಸಮಸ್ಯೆ ಉದ್ಘವವಾಗಲಿಲ್ಲ. ಜನರ ಓಡಾಟಕ್ಕೆ ತೊಂದರೆಯಾಗಿಲ್ಲ. ನಮ್ಮ ಊರಿಗೆ ಯಾವಾಗಲಿನಂತೆ ಖಾಸಗಿ ಬಸ್‌ಗಳು ಬಂದಿವೆ’ ಎಂದು ನಂಜದೇವನಪುರದ ಮಹದೇವು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿಕೆಟ್‌ ದರವನ್ನೂ ಅವರು ಹೆಚ್ಚಿಸಿಲ್ಲ. ಯಾವಾಗಲೂ ಎಷ್ಟು ತೆಗೆದುಕೊಳ್ಳುತ್ತಾರೋ ಅಷ್ಟೇ ಪಡೆದಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದರೆ, ಬಸ್‌ ಪಾಸ್‌ ಹೊಂದಿರುವ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಖಾಸಗಿ ಬಸ್‌ಗಳಲ್ಲಿ ಬಸ್‌ ಪಾಸ್‌ಗೆ ಅವಕಾಶ ಇಲ್ಲದಿರುವುದರಿಂದ ಖಾಸಗಿ ಬಸ್‌ಗಳಲ್ಲಿ ಅಥವಾ ಆಟೊ, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ದುಡ್ಡು ತೆತ್ತು ಪ್ರಯಾಣಿಸಬೇಕಾಯಿತು.

‘ವಿದ್ಯಾರ್ಥಿಗಳಿಗೆ ಎರಡು ದಿನಗಳಿಂದ ತೀವ್ರ ತೊಂದರೆಯಾಗುತ್ತಿದೆ. ಬಸ್‌ ಪಾಸ್‌ ಇದ್ದರೂ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಖಾಸಗಿ ಬಸ್‌ಗಳು, ಆಟೊಗಳಿಗೆ ದುಡ್ಡು ಕೊಟ್ಟು ಕಾಲೇಜಿಗೆ ಹೋಗುತ್ತಿದ್ದೇವೆ. ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಇಲ್ಲ. ಇದರಿಂದಲೂ ತೊಂದರೆಯಾಗುತ್ತಿದೆ’ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿ ಶಿವಪುರದ ಚೇತನ್‌ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಕೊಳ್ಳೇಗಾಲದಿಂದ ಮೈಸೂರಿಗೆ ಸಂಚರಿಸುವ ಕೆಲವು ಬಸ್‌ಗಳಲ್ಲಿ ಕೆಎಸ್‌ಆರ್‌ಟಿಸಿ ದರಕ್ಕಿಂತ ₹5 ಹೆಚ್ಚು ದರ ತೆಗೆದುಕೊಳ್ಳಲಾಗುತ್ತಿತ್ತು ಎಂದು ಕೆಲವು ಪ್ರಯಾಣಿಕರು ಆರೋಪಿಸಿದ್ದಾರೆ.

150 ಖಾಸಗಿ ಬಸ್‌ಗಳ ಸಂಚಾರ

ಜಿಲ್ಲೆಯಾದ್ಯಂತ ಗುರುವಾರ ಖಾಸಗಿ ಬಸ್‌ಗಳು ಎಂದಿನಂತೆ ಸೇವೆ ಒದಗಿಸಿವೆ. ನಿಗದಿತ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಸೇರಿದಂತೆ ಸುಮಾರು 150 ಬಸ್‌ಗಳು ಕಾರ್ಯಾಚರಿಸಿವೆ.

‘ಎಲ್ಲ ಮಾರ್ಗಗಳಲ್ಲಿ 90ರಿಂದ 100 ಬಸ್‌ಗಳು ಸಂಚರಿಸಿವೆ. ಗುರುವಾರ ಕೂಡ 45 ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ಬಸ್‌ಗಳು ಪ್ರಮುಖ ನಗರ, ಪಟ್ಟಣಗಳ ನಡುವೆ ಓಡಾಟ ನಡೆಸಿವೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸೇವೆ ಒದಗಿಸಿದ್ದೇವೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಉಪಾಧ್ಯಕ್ಷ ವಿಜಯಕೃಷ್ಣ ಹಾಗೂ ಕಾರ್ಯದರ್ಶಿ ತ್ಯಾಗರಾಜು‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚು ಟಿಕೆಟ್‌ ದರ ಪಡೆಯಲಾಗುತ್ತಿದೆ ಎಂಬ ಆರೋಪ ನಿರಾಕರಿಸಿರುವ ಸಂಘದ ಮತ್ತೊಬ್ಬ ಕಾರ್ಯದರ್ಶಿ ಮುರಳಿ ಕೃಷ್ಣ ಅವರು, ‘ಕೆಎಸ್‌ಆರ್‌ಟಿಸಿ ಟಿಕೆಟ್‌ ದರದಲ್ಲೇ ಸೇವೆ ಒದಗಿಸಿದ್ದೇವೆ. ಪ್ರತಿ ದಿನ ಪ್ರಯಾಣಿಸುವವರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿಯನ್ನೂ ನೀಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.