
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಯರಕನಗದ್ದೆ ಕಾಲೋನಿಯಲ್ಲಿ 1960ರ ದಶಕದಲ್ಲಿ ಸೋಲಿಗರಿಗೆ ಸರ್ವೇ ನಂಬರ್ 4ರಲ್ಲಿ ನೀಡಿರುವ 4.32 ಎಕರೆ ಭೂಮಿಯ ಪಹಣಿ ರದ್ದುಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬುಡಕಟ್ಟು ಅಭಿವೃದ್ಧಿ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
1963ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಅರಣ್ಯ ಸಚಿವ ಬಿ.ರಾಚಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಯಶೋಧರ ದಾಸಪ್ಪ ಅವರ ನೇತೃತ್ವದಲ್ಲಿ ಯರಕನಗದ್ದೆ ಕಾಲೋನಿಯಲ್ಲಿ 25 ಬುಡಕಟ್ಟು ಜನರಿಗೆ ಭೂಮಿ ಮಂಜೂರಾತಿ ಹಕ್ಕುಪತ್ರ ನೀಡಲಾಗಿತ್ತು. ಈ ಸಂದರ್ಭ ಸರ್ವೇ ನಂಬರ್ 1, 2, 3 ಮತ್ತು 4 ಎಂದು ವಿಭಾಗಿಸಿ ಸ.ನಂ 4ರಲ್ಲಿದ್ದ ಭೂಮಿಯನ್ನು ಕಂದಾಯ ಇಲಾಖೆಯು ಗಿರಿವಾಸಿಗಳಿಗೆ ಹಕ್ಕುಪತ್ರ ವಿತರಿಸಿತ್ತು.
ನಂತರ ಗಿರಿಜನರು ಭೂಮಿಗೆ ಸಂಬಂಧಿಸಿದ ಕಂದಾಯ ಪಾವತಿಸಿ, ಪಟ್ಟಾ ಪುಸ್ತಕ, ಪಹಣಿ ಪಡೆದು 60 ವರ್ಷಗಳಿಂದ ಸರ್ವೆ ನಂಬರ್ 4ರಲ್ಲಿರುವ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ನೆರವು ಪಡೆದು ಜೀವನ ನಡೆಸುತ್ತಿದ್ದಾರೆ ಎಂದು ಸೀಗೆಬೆಟ್ಟ ಪೋಡಿನ ಬಿ.ಜಡೆಯಗೌಡ ಹಾಗೂ ತಮ್ಮಡಿ ಬಸವೇಗೌಡ ಹೇಳಿದರು.
ಬಹಳಷ್ಟು ಸೋಲಿಗರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. 25 ಆದಿವಾಸಿಗಳು ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದಿದ್ದಾರೆ. ಆದರೆ, ಅಧಿಕಾರಿಗಳು ಇಲಾಖೆಗಳಿಂದ ಮಂಜೂರಾದ ವಿವರಗಳ ಬಗ್ಗೆ ದಾಖಲೆ ಇಲ್ಲ ಎಂಬ ನೆಪವೊಡ್ಡಿ ಒಕ್ಕಲೆಬ್ಬಿಸಲು ವಿಚಾರಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಸಂಘದ ಸದಸ್ಯರು ದೂರಿದ್ದಾರೆ.
ಸರ್ವೇ ನಂಬರ್ 1, 2, 3 ಮಾತ್ರ ಸರಿ ಇದ್ದು, ಸರ್ವೆ ನಂಬರ್ 4ರಲ್ಲಿ 4.32 ಎಕೆರೆ ಜಡೆಯಗೌಡ ಹೆಸರಿನಲ್ಲಿ ಖಾತೆ, ಪಹಣಿ ಇದ್ದರೂ ಮೂಲ ದಾಖಲಾತಿ ಸಲ್ಲಿಸಿಲ್ಲ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕಚೇರಿಯಿಂದ ಸೋಲಿಗರಿಗೆ ನೋಟಿಸ್ ನೀಡಲಾಗಿದ್ದು ಡಿ.18ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸರ್ಕಾರದ ಈ ಕ್ರಮದಿಂದ ಆದಿವಾಸಿ ಕಟುಂಬಗಳಿಗೆ ಸಂಕಷ್ಟ ಎದುರಾಗಿದೆ.
ಇತರೆ ಸಮುದಾಯಗಳು ವಾಸವಿರುವ ಸರ್ವೇ ನಂಬರ್ 1, 2, 3 ಮಾತ್ರ ಸರಿ ಇದ್ದು, ಸರ್ವೆ ನಂಬರ್ 4ರಲ್ಲಿ ನೆಲೆಸಿರುವ ಮೂಲ ನಿವಾಸಿಗಳ ದಾಖಲಾತಿ ಸರಿ ಇಲ್ಲ ಎಂದು ಹೇಳುವ ಮುಲಕ ಭೂಮಂಜೂರಾತಿ ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ. ಶಾಸಕರು, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸಭೆಗಳಲ್ಲಿ ಒಕ್ಕಲೆಬ್ಬಿಸದಂತೆ ಮನವಿ ಮಾಡಲಾಗಿದೆ. ಇಷ್ಟಾದರೂ ಭೂಮಿ ಕಸಿಯುವ ಪ್ರಯತ್ನ ನಡೆಸಿದರೆ ಜಿಲ್ಲಾ ಕೇಂದ್ರದಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಿ.ಮಾದೇಗೌಡ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.