ADVERTISEMENT

ಇಂದು ಪ್ರೇಮಿಗಳ ದಿನ: ಕಾಡಿನ ಹಾದಿಯಲ್ಲಿ ಪ್ರೀತ್ಸೋಣ ಬಾ!

ಪ್ರೇಮಕ್ಕೂ ಒಂದು ದಿನ: ಮಿಲನದ ಸಂಭ್ರಮದಲ್ಲಿ ಜೀವ ಪ್ರಭೇದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 6:22 IST
Last Updated 14 ಫೆಬ್ರುವರಿ 2024, 6:22 IST
ಯಳಂದೂರು ತಾಲ್ಲೂಕಿನ ಸುತ್ತಮುತ್ತಲ ಪರಿಸರದಲ್ಲಿ ವನ್ಯ ಜೀವಿಗಳ ಪ್ರೇಮದ ಅಭಿಲಾಷೆಯನ್ನು ಬಿಂಬಿಸುವ ಚಿತ್ರಗಳು. 
ಚಿತ್ರ: ನವೀನ್ ಜಗಲಿ
ಯಳಂದೂರು ತಾಲ್ಲೂಕಿನ ಸುತ್ತಮುತ್ತಲ ಪರಿಸರದಲ್ಲಿ ವನ್ಯ ಜೀವಿಗಳ ಪ್ರೇಮದ ಅಭಿಲಾಷೆಯನ್ನು ಬಿಂಬಿಸುವ ಚಿತ್ರಗಳು.  ಚಿತ್ರ: ನವೀನ್ ಜಗಲಿ   

ಯಳಂದೂರು: ಜೀವ ವಿಕಾಸದ ಹಾದಿಯಲ್ಲಿ ಪ್ರೀತಿಯ ಒರತೆ ಭೂರಮೆಯ ಸಕಲ ಜೀವಿಗಳನ್ನು ಪೊರೆಯುತ್ತಲೇ ಇದೆ. ಮನುಕುಲ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಕೀಟಗಳೂ ಕೂಡ  ತಮ್ಮದೇ ರೀತಿಯಲ್ಲಿ ಒಲವನ್ನು ವ್ಯಕ್ತಪಡಿಸುತ್ತವೆ. 

ಜೈವಿಕ ಪ್ರಪಂಚದ ಅಣುರೇಣು ತೃಣಕಾಷ್ಠದಲ್ಲೂ ಪ್ರೀತಿ, ಪ್ರೇಮದ ಉತ್ಸಾಹ ಮತ್ತು ಉಲ್ಲಾಸ ಪ್ರತಿಫಲಿಸುತ್ತದೆ. ಪ್ರಾಣಿ ಸಂಕುಲ ಕೂಡ ಬದುಕಿನುದ್ದಕ್ಕೂ ಪ್ರೇಮದ ಕಾಣಿಕೆ ಉಣಬಡಿಸಿ ಮನುಕುಲಕ್ಕೆ ಸಾಮರಸ್ಯದ ‘ಪ್ರೇಮದ ಪಾಠ’ವನ್ನು ಹೇಳುವ ಗುರುವೂ ಆಗಿದೆ.  

ಕಾನನದಲ್ಲಿ ಖಗ-ಮೃಗಗಳು ಪ್ರೀತಿಯ ಹುಟುಕಾಟದಲ್ಲಿ ಮೈಮರೆಯುತ್ತವೆ. ಸಂಗಾತಿಗಾಗಿ ಶಕ್ತಿಯನ್ನೂ ಪ್ರದರ್ಶಿಸುತ್ತವೆ!

ADVERTISEMENT

ವಂಶಾಭಿವೃದ್ಧಿಗಾಗಿ ತಮ್ಮದೇ ಸಮಯ ಹೊಂದಿಸಿಕೊಳ್ಳುವ ಜೀವಿಗಳು ನೆಲ, ವೃಕ್ಷ, ಸಸ್ಯಗಳ ಮೇಲೆ ರಾಸಾಯನಿಕಗಳನ್ನು ವಿಸರ್ಜಿಸಿ ತಮ್ಮ ಇರುವಿಕೆ ಸಾರುತ್ತವೆ. ಪ್ರೇಮ ಸಲ್ಲಾಪ ನಡೆಸುತ್ತವೆ. ಸಸ್ಯ ಸಂಕುಲವೂ ಹೂ ಅರಳಿಸಿ ಒಲವಿನ ಉಡುಗೊರೆ ಅರ್ಪಿಸುತ್ತವೆ. ಬಳಿ ಬಂದವರನ್ನು ಸ್ವಾಗತಿಸುತ್ತವೆ.

‘ಪಕ್ಷಿಗಳು ಶಬ್ಧ, ವರ್ತನೆಗಳ ಮೂಲಕ ಸಂಗಾತಿಯನ್ನು ಸೆಳೆಯುತ್ತವೆ. ಆನೆಗಳು ದೂರದಿಂದಲೇ ಗ್ರಹಿಸುವ ಸಾಮರ್ಥ್ಯ ಪಡೆದಿವೆ. ಕ್ರಿಮಿ, ಕೀಟಗಳು ಸದಾ ಜೋಡಿ ಜೀವಗಳಾದರೆ, ಜಿಂಕೆ, ಚಿರತೆ, ಕರಡಿ ತಮ್ಮ ಕಟುಂಬಕ್ಕೆ ಜೀವವನ್ನೇ ಮುಡುಪಾಗಿ ಇಟ್ಟು ಪ್ರೀತಿಯ ಹಣತೆ ಹಚ್ಚುತ್ತವೆ. ಗೆದ್ದಲು, ಇರುವೆ, ಜೇನು ಕುಟುಂಬಗಳು ಬದುಕಿನುದ್ದಕ್ಕೂ ಸಹ-ಸಂಬಂಧದ ಮಹತ್ವವನ್ನು ಅರಿತು ಬಾಳುತ್ತವೆ. ಇವು ಪ್ರೀತಿಸುವ ಯುವ ಮನಸ್ಸುಗಳಿಗೆ ಮಾದರಿ ನಡೆಯಾಗಬೇಕು’ ಎನ್ನುತ್ತಾರೆ ಚಿಂತಕ ಅಂಬಳೆ ನಾಗೇಶ್.

ಷರತ್ತಿಲ್ಲದ ಪ್ರೀತಿ: ಬೆಕ್ಕು, ನಾಯಿ, ಗಿಣಿ, ಮೊಲ, ಪಾರಿವಾಳ ಮನೆ ಮಾಲೀಕರನ್ನು ಗಾಡವಾಗಿ ಪ್ರೀತಿಸುತ್ತವೆ. ಅವುಗಳ ವ್ಯಕ್ತಿತ್ವದಲ್ಲಿ ಸಂವೇದನೆ ಮತ್ತು ಆದ್ಯತೆಗಳು ಗಾಢವಾಗಿ ಇರುವುದೇ ಕಾರಣ. ಇವು ಆಯಾ ಮನೆ ಮಕ್ಕಳು ಮತ್ತು ಆಹಾರ ನೀಡುವವರ ಜೊತೆ ಪ್ರೀತಿಯ ಭಾಷೆಯಲ್ಲಿ ಸಂವಹನ ನಡೆಸುತ್ತವೆ. ಮನೆಯ ಕಷ್ಟ-ಸುಖಗಳ ಸಂದರ್ಭದಲ್ಲಿ ಭಾಗಿಯಾಗುತ್ತವೆ. ಮನುಷ್ಯನ ಭಾವನೆಗಳಿಗೆ ಸ್ಪಂದಿಸುತ್ತ ಜೀವಪರ ಆಲೋಚನೆಗೆ ಹಚ್ಚುತ್ತವೆ. ಸಾಕು ಪ್ರಾಣಿಗಳು ಷರತ್ತಿಲ್ಲದ ಪ್ರೀತಿಯ ರೂಪಕವಾಗಿ ಬದುಕಿನುದ್ದಕ್ಕೂ ಕಾಡುತ್ತವೆ’ ಎನ್ನುತ್ತಾರೆ ಮನೋ ವಿಜ್ಞಾನಿಗಳು.

ಪ್ರೀತಿ ಸ್ಫುರಿಸುವ ಪ್ರಾಣಿಗಳು ಸಂಗಾತಿಗಾಗಿ ಶಕ್ತಿ ಪ್ರದ‌ರ್ಶನ ಮನುಕುಲಕ್ಕೂ ಮಾದರಿ ನಡೆ

ಒಲವಿನ ಅಭಿವ್ಯಕ್ತಿಗೆ ಹೃದಯವೇ ‘ಐಕಾನ್’ ಏಕೆ?  

ಮನುಷ್ಯ ಮಿದುಳಿನೊಂದಿಗೆ ಯೋಚಿಸುತ್ತಾನೆ. ಅನುಭವಿಸುತ್ತಾನೆ. ಆರಂಭದ ಸಮಾಜದಲ್ಲಿ ಈ  ಬಗೆಗಿನ ಅರಿವಿರಲಿಲ್ಲ. ದೇಹದ ಕಾರ್ಯದ ಜ್ಞಾನವೂ ತಿಳಿದಿರಲಿಲ್ಲ. ಪ್ರೀತಿಯ ದೇವತೆ ತನ್ನ ಮಗ ಮನ್ಮಥನ ಸಹಾಯದಿಂದ ಹೃದಯಕ್ಕೆ ಬೆಂಕಿ ಹಚ್ಚುತ್ತಾಳೆ ಎಂದು ಭಾವಿಸಲಾಗಿತ್ತು. ಗ್ರೀಕ್ ತತ್ವಜ್ಯಾನಿ  ಹರಿಸ್ಟಾಟಲ್ ‘ಹೃದಯ ಭಾವನೆಗಳನ್ನು ಮಾತ್ರವಲ್ಲದೆ ಮಾನವ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ’ ಎಂದು ನಂಬಿದ್ದನು. 1250ರಲ್ಲಿ ಹೃದಯದ ‘ಐಕಾನ್’ (ಚಿಹ್ನೆ) ಫ್ರೆಂಚ್ ಪ್ರೇಮಕಥೆಗಳಲ್ಲಿ ಚಿತ್ರಿತವಾಯಿತು. ಲಿಯೋನಾರ್ಡೊ ಡಾ ವಿಂಚಿ ಹೃದಯದ ನಿಖರ ರೇಖಾ ಚಿತ್ರ ರಚಿಸಿದ. ಚಿನ್ನದಷ್ಟೇ ಬೆಲೆಬಾಳುವ ಸಿಲ್ಪಿಯಂ ಬೀಜ ಹೃದಯ ಆಕೃತಿಯಲ್ಲಿ ಇದ್ದು ಪ್ರೇಮದ ಸಂಕೇತವಾಗಿ ಬಳಸಲು ಆರಂಭವಾಯಿತು. 1977ರಲ್ಲಿ ನ್ಯೂಯಾರ್ಕ್ ಜಾಹೀರಾತಿನಲ್ಲಿ ಹೃದಯದ ಚಿಹ್ನೆ ಬಳಕೆಯಾಯಿತು. ಇಂದು ಮೊಬೈಲ್ ತಂತ್ರಾಂಶದಲ್ಲಿ ಪ್ರೀತಿ ಪರಿಭಾಷೆಯ ಎಮೋಜಿಗಳು ಯುವ ಪ್ರೇಮಿಗಳ ಮನಗೆದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.