
ಯಳಂದೂರು: ಅಸಂಖ್ಯ ಪ್ರೇಮಕಥೆಗಳನ್ನು ಹೇಳುವ ಪ್ರೇಮಿಗಳ ದಿನದ (ಫೆ.14) ಅಂಗವಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಉಡುಗೊರೆಗಳು ಲಗ್ಗೆ ಇಟ್ಟಿವೆ. ಪ್ರೀತಿ, ಒಲುಮೆಯ ಸಂದೇಶ ದಾಟಿಸಲು ಪ್ರೇಮಿಗಳು ಉಡುಗೊರೆಗಳ ಖರೀದಿಯಲ್ಲಿ ತೊಡಗಿದ್ದಾರೆ.
ಆಧುನಿಕ ಕಾಲಘಟ್ಟದಲ್ಲಿ ಪುಷ್ಪಗಳನ್ನು ಕೊಡುವ ಬದಲು ನವನವೀನ ಕಲಾತ್ಮಕ ಉಡುಗೊರೆಗಳನ್ನು ನೀಡುವ ಸಂಸ್ಕೃತಿ ಮುನ್ನಲೆಗೆ ಬಂದಿದ್ದು ಪೇಟೆ ಪಟ್ಟಣಗಳ ಮಾರುಕಟ್ಟೆಯಲ್ಲಿ ಬೆಳ್ಳಿ, ಚಿನ್ನದ ಹೊಳಪಿನ ಹೃದಯ, ಡಾಲರ್‌ಗಳು, ಸರಗಳನ್ನು ಪ್ರೇಮಿಗಳು ಖರೀದಿಸುತ್ತಿದ್ದಾರೆ.
ಪ್ರತಿವರ್ಷ ವ್ಯಾಲೆಂಟೈನ್ಸ್ ದಿನದಂದು ಕೆಂಪು ಗುಲಾಬಿ ಹೂಗಳಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಗ್ರೀಟಿಂಗ್ ಕಾರ್ಡ್, ಪೋಟೋ ಫ್ರೇಮ್, ಚಾಕೊಲೇಟ್ ಹಾಗೂ ಪ್ಯಾಂಟಸಿ ಆಭರಣಗಳ ಖರೀದಿ ಹೆಚ್ಚಾಗಿರುತ್ತಿತ್ತು. ಫೆಬ್ರುವರಿ ಆರಂಭದಿಂದಲೇ ಸೃಜನಾತ್ಮಕ ಹಾಗೂ ಆಕರ್ಷಕ ವಸ್ತುಗಳನ್ನು ಪ್ರೇಮಿಗಳು ಮುಂಗಡ ಕಾದಿರಿಸುತ್ತಿದ್ದರು. ಆನ್‌ಲೈನ್ ಭರಾಟೆ ಹೆಚ್ಚಾದ ಬಳಿಕ ಉಡುಗೊರೆಗಳು ನೇರವಾಗಿ ಪ್ರೇಮಿಗಳ ಕೈಸೇರುತ್ತಿವೆ. ಗಿಪ್ಟ್ ಅಂಗಡಿಗಳಿಗೆ ಬಂದು ಖರೀದಿಸುವವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
‘ಕೆಂಪು ಗುಲಾಬಿಗಳ ಪುಷ್ಪಗುಚ್ಛ, ಕೇಕ್, ಪ್ರೀಮಿಯಂ ಚಾಕೊಲೇಟ್, ಕೀ ಚೈನ್, ಕಸ್ಟಮೈಸ್ಡ್ ಮಗ್, ಪೋಟೋ ಪ್ರೇಮ್, ಕ್ಯಾಂಡಲ್ ಲೈಟ್, ಉಂಗುರ, ಚಾಕೊಲೇಟ್‌ಗಳ ಬೊಕೆಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಕನಿಷ್ಠ 50 ರಿಂದ ₹ 1,250ರವೆಗೆ ಬೆಲೆ ಇದೆ. ಆನ್‌ಲೈನ್‌ಗಿಂತಲೂ ಕಡಿಮೆ ದರದಲ್ಲಿ ಉಡುಗೊರೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಪಟ್ಟಣದ ಬಳೆ ವ್ಯಾಪಾರಿ ಬಂಗಾರು.
ಪ್ರೇಮಿಗಳಿಗೆ ನೀಡುವ ಉಡುಗೆಗಳಲ್ಲಿ ಕಲಾತ್ಮಕತೆ ಬಿಂಬಿಸುವ ಆಕೃತಿಗಳು ಪೇಟೆಗೆ ಲಗ್ಗೆ ಹಾಕಿವೆ. ಸೂಕ್ಷ್ಮ ಕೆತ್ತನೆ ಒಳಗೊಂಡ ಜೋಡಿ ಡಾಲ್‌ಗಳು ಖುಷಿಯನ್ನು ಹೆಚ್ಚಿಸಿದರೆ, ಲವ್ ಬರ್ಡ್ಸ್, ಕೀ ಬಂಚ್, ಮೇಕಪ್ ಬಾಕ್ಸ್ ಹಾಗೂ ಉಂಗುರ, ಓಲೆಗಳಿಗೂ ಬೇಡಿಕೆ ಇದೆ ಎನ್ನುತ್ತಾರೆ ಅವರು.
ಈಚೆಗೆ ಆನ್‌ಲೈನ್ ವಹಿವಾಟು ಹೆಚ್ಚಾಗಿದ್ದು ಇಷ್ಟದ ವಸ್ತುಗಳು ನೇರವಾಗಿ ಪ್ರೇಮಿಗಳ ಕೈಸೇರುತ್ತಿದೆ. ಸಾರ್ವಜನಿಕವಾಗಿ ಉಡುಗೊರೆ ಕೊಡುವ ಬದಲು ಕೊರಿಯಲ್ ಮೂಲಕ ಪ್ರೀತಿಯ ವಸ್ತುಗಳನ್ನು ಕಳುಹಿಸಲಾಗುತ್ತದೆ ಎನ್ನುತ್ತಾರೆ ಯುವ ಪ್ರೇಮಿಗಳು.
ಪ್ರೀತಿಯ ದಿನದ ಹಿನ್ನಲೆ
3ನೇ ಶತಮಾನದಲ್ಲಿ ರೋಮನ್ ಚಕ್ರವರ್ತಿಯು 2ನೇ ಕ್ಲಾಡಿಯಸ್ ಸೈನಿಕರು ವಿವಾಹವಾಗುವುದನ್ನು ನಿರ್ಬಂಧಿಸಿದ್ದ. ಇದನ್ನು ವ್ಯಾಲೆಂಟೈನ್ ಎಂಬ ರೋಮನ್ ಪಾದ್ರಿ ವಿರೋಧಿಸಿ ರಹಸ್ಯವಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದ. ಫೆ.14ರಂದು ಆತನನ್ನು ಗಲ್ಲಿಗೇರಿಸಿದ್ದರಿಂದ ಮರಣದ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತಿದೆ ಎನ್ನಲಾಗಿದೆ. ವ್ಯಾಲೆಂಟೈನ್ ಸಾಯುವ ಮುನ್ನ ಜೂಲಿಯಾಗೆ ಬರೆದ ಕಾರ್ಡ್ ಲವ್ ಕಾರ್ಡ್ ಬಳಕೆಗೆ ನಾಂದಿಯಾಯಿತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.