ADVERTISEMENT

ಸಾಮಾಜಿಕ ಕಾರ್ಯಕ್ಕೆ ಒದಗಿದ ಜಿಲ್ಲಾ ಖನಿಜ ನಿಧಿ

₹17 ಕೋಟಿ ವೆಚ್ಚದ ಯೋಜನೆಗೆ ಅನುಮತಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ

ಸೂರ್ಯನಾರಾಯಣ ವಿ
Published 30 ಮಾರ್ಚ್ 2021, 19:30 IST
Last Updated 30 ಮಾರ್ಚ್ 2021, 19:30 IST
ಪಿಎಂಕೆಕೆಕೆವೈ ಅಡಿಯಲ್ಲಿ ಜಿಲ್ಲಾಸ್ಪತ್ರೆಗೆ ನೀಡಿದ ವೆಂಟಿಲೇರ್‌
ಪಿಎಂಕೆಕೆಕೆವೈ ಅಡಿಯಲ್ಲಿ ಜಿಲ್ಲಾಸ್ಪತ್ರೆಗೆ ನೀಡಿದ ವೆಂಟಿಲೇರ್‌   

ಚಾಮರಾಜನಗರ: ಕಪ್ಪು ಶಿಲೆಗೆ ಹೆಸರಾಗಿರುವ ಗಡಿ ಜಿಲ್ಲೆಯಲ್ಲಿ ಗಣಿಗಾರಿಕೆ ಸರ್ಕಾರಕ್ಕೆ ಉತ್ತಮ ಆದಾಯವನ್ನೂ ತಂದುಕೊಡುತ್ತಿದೆ. ಪ್ರತಿ ವರ್ಷ ಜಿಲ್ಲೆಯಿಂದ ಸರ್ಕಾರಕ್ಕೆ ₹25 ಕೋಟಿಯಷ್ಟು ರಾಜಧನ ಪಾವತಿಯಾಗುತ್ತದೆ.

ಅಕ್ರಮ ಗಣಿಗಾರಿಕೆಯ ಆರೋಪದ ನಡುವೆಯೇ, ಗಣಿ ಇಲಾಖೆಯು ಜಿಲ್ಲಾ ಖನಿಜ ನಿಧಿಯಲ್ಲಿರುವ (ಡಿಎಂಎಫ್‌) ಹಣದಲ್ಲಿ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಅಭಿವೃದ್ಧಿ ಯೋಜನೆಯ (ಪಿಎಂಕೆಕೆವೈ) ಅಡಿಯಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಮೂರು ವರ್ಷಗಳ ಅವಧಿಗೆ (2019–2020, 2020–2021, 2021–2022) ಅಂದಾಜು ₹17 ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ರೂಪಿಸಿದೆ. ಜಿಲ್ಲಾಡಳಿತವೂ ಇದಕ್ಕೆ ಅನುಮತಿ ನೀಡಿದ್ದು, ಇದರ ಅಡಿಯಲ್ಲಿ ಈಗಾಗಲೇ ಹಲವು ಯೋಜನೆಗಳು ಪ್ರಗತಿಯಲ್ಲಿವೆ.

ADVERTISEMENT

ಕೋವಿಡ್‌ ಸಂದರ್ಭದಲ್ಲಿ ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲಾ ಖನಿಜ ನಿಧಿಯ ₹3.1 ಕೋಟಿಯನ್ನು ಬಳಸಲಾಗಿತ್ತು.

ಗಣಿ ಇಲಾಖೆಯು ಹೊಸದಾಗಿ ರೂಪಿಸಿರುವ ಯೋಜನೆಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹5.45 ಕೋಟಿ, ಆರೋಗ್ಯ ಕ್ಷೇತ್ರಕ್ಕೆ ₹6.12 ಕೋಟಿ, ಗಣಿಬಾಧಿತ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ₹2.75 ಕೋಟಿ, ಕೆರೆಗಳ ಅಭಿವೃದ್ಧಿಗೆ ₹40 ಲಕ್ಷ, ಅಂಗನವಾಡಿ ಕೇಂದ್ರಗಳ ದುರಸ್ತಿಗಾಗಿ ₹45 ಲಕ್ಷ, ನೈಸರ್ಗಿಕ ಭೂ ವಿಜ್ಞಾನ ಮ್ಯೂಸಿಯಂಗೆ ₹50 ಲಕ್ಷ, ಅರಣ್ಯ, ಪರಿಸರ ಸಂರಕ್ಷಣೆಗೆ ₹25 ಲಕ್ಷ ವೆಚ್ಚ ಮಾಡುತ್ತಿದೆ.

ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ರಸ್ತೆ, ಶಾಲೆಗಳ ಅಭಿವೃದ್ಧಿ (ಕಟ್ಟಡ ದುರಸ್ತಿ, ಸ್ಮಾರ್ಟ್‌ ಕ್ಲಾಸ್‌), ಕೆರೆ ಅಭಿವೃದ್ಧಿ ಸೇರಿದಂತೆ ಈಗಾಗಲೇ ಹಲವು ಕೆಲಸಗಳನ್ನು ಇಲಾಖೆ ಮಾಡಿದೆ.

ಗಣಿಗಳಿಂದ ಸರ್ಕಾರಕ್ಕೆ ಪಾವತಿಯಾಗುವ ರಾಜಧನದಲ್ಲಿ ಶೇ 18ರಷ್ಟು ಮೊತ್ತ ಜಿಲ್ಲಾ ಖನಿಜ ನಿಧಿಗೆ ಮೀಸಲಾಗಿರುತ್ತದೆ. ಈ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಬೇಕು ಎಂಬುದು ನಿಯಮ.

ಶತಮಾನ ಕಂಡ ಶಾಲೆ ಅಭಿವೃದ್ಧಿ: ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ಪ‍ರಿಕಲ್ಪನೆಯಲ್ಲಿ ರೂಪುಗೊಂಡಿರುವ ಶತಮಾನಕಂಡ ಸರ್ಕಾರಿ ಶಾಲೆಗಳ ಅಭಿವೃದ್ಧಿ ಯೋಜನೆಗೆ ಖನಿಜ ನಿಧಿಯ ಹಣ ಬಳಕೆಯಾಗಲಿದೆ. ಮೊದಲ ಹಂತದಲ್ಲಿ ಆರು ಸರ್ಕಾರಿ ಶಾಲೆಗಳನ್ನು (ಹರದನಹಳ್ಳಿ, ಹರವೆ, ಸಂತೇಮರಹಳ್ಳಿ, ಕೊತ್ತಲವಾಡಿ, ಮುಕ್ಕಡಹಳ್ಳಿ ಮತ್ತು ಹಸಗೂಲಿ) ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಂಡು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.

‘ಇದಲ್ಲದೆ ಏಳು ಶಾಲೆಗಳಿಗೆ ಹೆಚ್ಚುವರಿ ಕಟ್ಟಡ, ವಿಜ್ಞಾನ ಲ್ಯಾಬ್‌, ಆರು ಶಾಲೆಗಳಿಗೆ ಗ್ರಂಥಾಲಯ, ಆರು ಶಾಲೆಗಳಿಗೆ ಶುದ್ಧ ನೀರಿನ ಘಟಕ, ಆರು ಶಾಲೆಗಳಿಗೆ ಸೋಲಾರ್‌, ಆರು ಶಾಲೆಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ, ಆರು ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿಗಳ ನಿರ್ಮಾಣ, 33 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ₹5.45 ಕೋಟಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಒತ್ತು

ಜಿಲ್ಲೆಯ ಆರೋಗ್ಯ ಸೇವೆಗೆ ಇನ್ನಷ್ಟು ಮೂಲಸೌಕರ್ಯಗಳನ್ನು ಒದಗಿಸಲೂ ಇಲಾಖೆ ಯೋಜನೆ ರೂಪಿಸಿದೆ.

ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮಗ್ರ ಅಭಿವೃದ್ಧಿಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ಇತರ ನಾಗರಿಕ ಸೌಲಭ್ಯದ ಕಾಮಗಾರಿಗಳು, ವೈದ್ಯಕೀಯ ಸಲಕರಣಗಳನ್ನು ಗಣಿ ಇಲಾಖೆ ಒದಗಿಸಲಿದೆ. ಕೋವಿಡ್‌ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ವೆಂಟಿಲೇಟರ್‌ಗಳನ್ನು ಒದಗಿಸಿದ್ದ ಗಣಿ ಇಲಾಖೆ, ಇನ್ನೂ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ವೆಂಟಿಲೇಟರ್‌ ಪೂರೈಸಲಿದೆ.

ಭೋಗಾಪುರ ಮತ್ತು ಬಡಗಲಪುರ ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ₹2.75 ಕೋಟಿ ಯೋಜನೆ ರೂಪಿಸಲಾಗಿದೆ.

‘ಇವುಗಳ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ವೀರನಪುರ ಕೆರೆ ಅಭಿವೃದ್ಧಿಗೆ ₹40ಲಕ್ಷ, ಗಿಡಗಳನ್ನು ಬೆಳೆಸಲು ಸಾಮಾಜಿಕ ಅರಣ್ಯ ವಿಭಾಗಕ್ಕೆ ₹15 ಲಕ್ಷ, ಬೋನುಗಳ ಖರೀದಿಗಾಗಿ ಅರಣ್ಯ ಇಲಾಖೆಗೆ ₹10 ಲಕ್ಷ, ನಾಲ್ಕು ಅಂಗನವಾಡಿಗಳ ಕೇಂದ್ರಗಳ ಅಭಿವೃದ್ಧಿಗೆ ₹45 ಲಕ್ಷ. ಕೃಷಿ ಕ್ಷೇತ್ರಕ್ಕೆ ₹30, ಕೌಶಲ ತರಬೇತಿಗಾಗಿ ₹14 ಲಕ್ಷ ನೀಡಲು ಅನುಮತಿ ಸಿಕ್ಕಿದೆ’ ಎಂದು ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.