ADVERTISEMENT

ಹುಲಿ ಸಂರಕ್ಷಿತ ಪ್ರದೇಶ ಮಾಡದಿರಿ: ಗ್ರಾಮಸ್ಥರ ಒತ್ತಾಯ

ಹನೂರು ತಾಲ್ಲೂಕಿನ ಪೊನ್ನಾಚಿ ಪಂಚಾಯತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:36 IST
Last Updated 27 ಸೆಪ್ಟೆಂಬರ್ 2025, 4:36 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಬಾರದು ಎಂದು ಒತ್ತಾಯಿಸಿ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಬಾರದು ಎಂದು ಒತ್ತಾಯಿಸಿ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು   

ಹನೂರು: ‘ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬಾರದು’ ಎಂದು ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಗುರವಾರ ಪ್ರತಿಭಟನೆ ನಡೆಸಿದರು.

ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು, ಮರೂರು ಗ್ರಾಮಸ್ಥರೆಲ್ಲರೂ ಸೇರಿ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪೊನ್ನಾಚಿ ಗ್ರಾಮದ ಮುಖಂಡ ಶಿವಣ್ಣ ಮಾತನಾಡಿ, ‘ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆಯಾದರೆ  ನಮ್ಮ ಜನರ ಜೀವನ ಅತ್ಯಂತ ದುಸ್ತರವಾಗಲಿದೆ. ನಮ್ಮ ಸಾಂಪ್ರದಾಯಿಕ ಆಚರಣೆ, ವಿಚಾರಗಳೆಲ್ಲವೂ  ಮರೆಯಾಗಲಿವೆ. ಜೊತೆಗೆ ಸಮಯದ ಕಟ್ಟುಪಾಡಿನಿಂದ ಹೊರ ಬರಬೇಕಾಗುತ್ತದೆ’ ಎಂದರು.

ADVERTISEMENT

‘ಅರಣ್ಯದಂಚಿನ ಕುಗ್ರಾಮದಲ್ಲಿ ವಾಸ ಮಾಡುತ್ತಿರುವ ನಾವು ಜಾನುವಾರುಗಳನ್ನು ನಂಬಿ ಬದುಕುತ್ತಿದ್ದೇವೆ. ಘೋಷಣೆಯಾದಲ್ಲಿ ಅರಣ್ಯದೊಳಗೆ ಹಸುವಿನ ಹೆಜ್ಜೆ ಇಡಲು ಬಿಡುವುದಿಲ್ಲ, ನಮ್ಮ ಗ್ರಾಮಗಳಿಗೆ ಪ್ರಸ್ತುತ ಕೆಲಸದ ನಿಮಿತ್ತ ನಾವು ಹೋಗಬಹುದು, ಬರಬಹುದು. ಆದರೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದಲ್ಲಿ ನಮ್ಮ ಕೆಲಸ ಕಾರ್ಯಗಳಿಗೆ ಕೂಡ ಸಂಚಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಅಲವತ್ತುಕೊಂಡರು.

‘ಮುಖ್ಯವಾಗಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ, ಕಾಡಂಚಿನ ಪ್ರದೇಶಗಳಲ್ಲಿ ಉಪ ದೇವಾಲಯಗಳು ಇದ್ದು ಅಲ್ಲಿಗೆ ನಿರ್ಬಂಧ ಹಾಕುತ್ತಾರೆ. ಆಗ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬಾರದು’ ಎಂದು ಮನವಿ ಮಾಡಿದರು.

‘ಸರ್ಕಾರದ ಮಟ್ಟಕ್ಕೆ ಅಧಿಕಾರಿಗಳು ಸ್ಥಳೀಯವಾಗಿ ವರದಿ ಪಡೆದು ಕುಗ್ರಾಮಗಳಲ್ಲಿ ಜನರ ಅಭಿಪ್ರಾಯ ಪಡೆದು ಅನಂತರ ಸರ್ಕಾರದ ಮಟ್ಟಕ್ಕೆ ವರದಿ ನೀಡಬೇಕು. ಅದ್ಯಾವ ಕೆಲಸವೂ ಆಗದೆ ಅಧಿಕಾರಿಗಳು ನೇರವಾಗಿ ವರದಿ ನೀಡಿರುವುದು ಅತ್ಯಂತ ಖಂಡನೀಯ. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಬೇಕು, ಈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಯೋಜನೆಗೆ ನಮ್ಮೆಲ್ಲರ ವಿರೋಧ ಇದೆ’ ಎಂದರು.

ಪ್ರತಿಭಟನೆ ವೇಳೆ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಿಂದ ಭದ್ರತೆ ಒದಗಿಸಲಾಗಿತ್ತು.

ವಲಯ ಅರಣ್ಯಾಧಿಕಾರಿ ಅರುಣ್‌ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪೊನ್ನಾಚಿ ಸ್ನೇಹಜೀವಿ ರಾಜ್, ಮಣಿಗಾರ ಪಿ.ಕೆ. ಬಸವರಾಜ್, ಗೌಡ್ರು ಶಿವಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಶಿವಬಸಪ್ಪ, ಪಿ.ಕೆ. ಬಾಲಸುಬ್ರಮಣ್ಯo, ರಂಗಮಾದಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.