ADVERTISEMENT

ನಂಜರಾಯಪಟ್ಟಣ: ಆನೆ– ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಯಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:25 IST
Last Updated 23 ಆಗಸ್ಟ್ 2025, 6:25 IST
ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹಕ್ಕೆ ಆಗ್ರಹಿಸಿ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ವಲಯ ಅರಣ್ಯಾಧಿಕಾರಿಗೆ‌ ರಕ್ಷಿತ್ ಮಾತನಾಡಿದರು
ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹಕ್ಕೆ ಆಗ್ರಹಿಸಿ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ವಲಯ ಅರಣ್ಯಾಧಿಕಾರಿಗೆ‌ ರಕ್ಷಿತ್ ಮಾತನಾಡಿದರು   

ಕುಶಾಲನಗರ: ಉತ್ತರ ಕೊಡಗಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕದೆ ಹೋದರೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಎಚ್ಚರಿಕೆ ನೀಡಿದರು.

ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರು ಹೋರಾಟ ಸಮಿತಿ ಹಾಗೂ ವಲಯ ಅರಣ್ಯಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವನ್ಯಜೀವಿಗಳ ಉಪಟಳದ ಬಗ್ಗೆ ವಿವರಿಸಿದ ಅವರು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ರೂಪಿಸಲು 11 ಮಂದಿ ಒಳಗೊಂಡ ಹೋರಾಟ ಸಮಿತಿ ಈಗಾಗಲೆ ರಚಿಸಲಾಗಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರು, ರೈತ ಮುಖಂಡರ ಗಮನ ಸೆಳೆದು, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ.

ADVERTISEMENT

ಕೇವಲ ಕಾಡಾನೆ ಹಾವಳಿ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ, ಕಾಡಾನೆ ಹೊರತುಪಡಿಸಿ ಕಾಡು ಹಂದಿ, ಮುಳ್ಳುಹಂದಿ, ನವಿಲು, ಮಂಗ, ಕೆಂಜರಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ. ಇವುಗಳ ನಡುವೆ ಹುಲಿ ಕಾಟ ಕೂಡ ಹೆಚ್ಚಾಗಿದೆ. ಸೋಲಾರ್ ಫೆನ್ಸಿಂಗ್, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಅವೈಜ್ಞಾನಿಕವಾಗಿದ್ದು, ಪರಿಣಾಮಕಾರಿಯಾಗಿಲ್ಲ ಎಂದು‌ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನಂತೆ ಕಾಡಾನೆ ಓಡಿಸಲು ಇಲಾಖೆಯಿಂದ ಪಟಾಕಿ ಕೂಡ ವಿತರಿಸುತ್ತಿಲ್ಲ. ಅರಣ್ಯಕ್ಕೆ ಗ್ರಾಮಸ್ಥರು ಪ್ರವೇಶಿಸುವುದಿಲ್ಲ. ಅಂತೆಯೇ ವನ್ಯಜೀವಿಗಳು ಗ್ರಾಮದೊಳಗೆ ಪ್ರವೇಶಿಸದಂತೆ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

ಹಾನಿಗೊಳಗಾದ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕಿದೆ,‌ ಸಕಾಲದಲ್ಲಿ ವಿತರಿಸಬೇಕಿದೆ. ಸಮಿತಿಯೊಂದಿಗೆ ವನ್ಯಜೀವಿ ಹಾವಳಿ ಪ್ರದೇಶಗಳ ಸ್ಥಳ ಪರಿಶೀಲನೆಗೆ ಮುಂದಾಗಬೇಕಿದೆ ಎಂದು ಕೋರಿದರು.

ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ಗ್ರಾಮಸ್ಥರ ಪ್ರಶ್ನೆಗಳು, ಬೇಡಿಕೆಗಳನ್ನು ಆಲಿಸಿ ಮಾತನಾಡಿ, ಆನೆ ಅತ್ಯಂತ ಬುದ್ದಿವಂತ ಜೀವಿ. ಆನೆಗಳ ಸಂತತಿ ಹೆಚ್ಚಾದಂತೆ ಉಪಟಳ ಕೂಡ ಹೆಚ್ಚಾಗುತ್ತಿದೆ. ಕೆಲವು ಆನೆಗಳು‌ ಮಾತ್ರ ನಾಡಿಗೆ ಲಗ್ಗೆಯಿಡುವ ಪರಿಪಾಠ ಬೆಳೆಸಿಕೊಂಡಿದೆ. ಇವೆಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಾಲ್ನಡಿಗೆ ಮೂಲಕ ಸಂಚರಿಸಿ‌, ಸಮಸ್ಯೆ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಸಮಸ್ಯೆ ಇತ್ಯರ್ಥಕ್ಕೆ‌ ಕೂಡ ಕಾಲಾವಕಾಶದ ಅಗತ್ಯವಿದೆ. ಶಾಶ್ವತ ಪರಿಹಾರ ಕಷ್ಟಸಾಧ್ಯ. ಕಾನೂನಿನ ಚೌಕಟ್ಟಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಕ್ರಮವಹಿಸಲಿದೆ ಎಂದು ರಕ್ಷಿತ್ ತಿಳಿಸಿದರು.

ರೈತರು ಹಾಗೂ ಬೆಳೆಗಾರರು ಅರಣ್ಯಾಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಮುಂದಿನ ಒಂದು ತಿಂಗಳ ಒಳಗಾಗಿ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ, ಸಮಿತಿ ವತಿಯಿಂದ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಗ್ರಾ.ಪಂ. ಸದಸ್ಯರಾದ ಕೆ.ವಿ.ಪ್ರೇಮಾನಂದ, ಮಾಜಿ ಸದಸ್ಯ ಸುಮೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಚಿನ್ ನಿಂಬಾಳ್ಕರ್, ಡಿ.ಜಿ.ಜಗದೀಶ್, ಹೋರಾಟ ಸಮಿತಿ ಸದಸ್ಯರಾದ ಉಮೇಶ್, ವಿ.ಕೆ.ಸಚಿನ್, ಕೆಮ್ಮಾರನಾ ಲೋಕನಾಥ್, ಐಯಂಡ್ರ ಬಾಲಕೃಷ್ಣ, ನವೀನ್, ಬ್ರಿಜೇಶ್, ಡಾಲು, ಪ್ರಸನ್ನ ಕುಮಾರ್, ಮಾವಾಜಿ ರವಿ, ಸಿದ್ದ, ಪ್ರೇಮಾನಂದ, ಬೆಳ್ಳಿಯಪ್ಪ, ಚೇತನ್ ಸೇರಿದಂತೆ ರೈತರು, ಬೆಳೆಗಾರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.