ಕೊಳ್ಳೇಗಾಲ: ‘ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂದು ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜ್ ಹೇಳಿದರು.
ನಗರದ ಮುಡಿಗುಂಡದ ಆದರ್ಶ ಶಾಲೆಯಲ್ಲಿ ಸೋಮವಾರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಅರಿವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
‘ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅರಿವಿಲ್ಲದೆ ಜನರು ಪ್ರಾಣಿಗಳನ್ನು ಬೇಟೆಯಾಡುವುದು, ಕೊಲ್ಲುವುದು ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮುಂದಾಗುತ್ತಿದ್ದಾರೆ. ಹಾಗಾಗಿ ಅನೇಕರು ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ’ ಎಂದರು.
‘ಇಲ್ಲಿನ ಕೆಲವು ಭಾಗಗಳಲ್ಲಿ ದನಗಳನ್ನು ಕಾಡಿಗೆ ಮೇಯಿಸಲು ಕಳುಹಿಸಿ ಅರಣ್ಯವನ್ನು ನಾಶ ಮಾಡುವುದು ಹಾಗೂ ಅರಣ್ಯ ಸಂಪತ್ತನ್ನು ಲೂಟಿ ಮಾಡುವುದು ನಡೆಯುತ್ತಿದೆ. ತಿಂಗಳ ಹಿಂದೆ ದನ ಮೇಯಿಸುವವರು 5 ಹುಲಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಎಲ್ಲರಿಗೂ ತಿಳಿದಿದೆ’ ಎಂದರು.
‘ಪ್ರತಿಯೊಬ್ಬರೂ ಅರಣ್ಯವನ್ನು ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಆಗುವುದರಲ್ಲಿ ಅನುಮಾನವೇ ಇಲ್ಲ. ಕೆಲವು ಮೌಢ್ಯಗಳ ಹೆಸರಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು, ಕೊಲ್ಲುವುದು ಅಪರಾಧ. ವಿದ್ಯಾರ್ಥಿಗಳು ಈ ಎಲ್ಲದರ ಬಗ್ಗೆ ಅರಿತುಕೊಳ್ಳಬೇಕು’ ಎಂದರು.
ಹೆಡ್ ಕಾನ್‌ಸ್ಟೆಬಲ್ ಬಸವರಾಜು, ರಾಮಚಂದ್ರ, ಸ್ವಾಮಿ, ಲತಾ, ಬಸವರಾಜು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.