ಚಾಮರಾಜನಗರ: ನಗರದ ಸಮುದಾಯ ಅಭಿವೃದ್ಧಿ ಸೇವಾ ಕೇಂದ್ರದ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ನಗರೋತ್ಥಾನ ಹಂತ-4ರ ಕಾರ್ಯಕ್ರಮಗಳಡಿ ಉಚಿತ ಹೊಲಿಗೆ ಯಂತ್ರ ಮತ್ತು ಲ್ಯಾಪ್‍ಟಾಪ್ ವಿತರಣೆ ಕಾರ್ಯಕ್ರಮವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
‘ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿದ್ದು ಸದುಪಯೋಗಪಡಿಸಿಕೊಳ್ಳಬೇಕು. ಸ್ವಉದ್ಯೋಗ ತರಬೇತಿ ನೀಡಿ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುತ್ತಿದ್ದು ಹೊಲಿಗೆ ತರಬೇತಿ ಪ್ರಮಾಣ ಪತ್ರ ಪಡೆದಿರುವ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ತಂತ್ರಜ್ಞಾನದ ಪ್ರಭಾವದಲ್ಲಿ ಕಂಪ್ಯೂಟರ್ ಬಳಕೆ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗಲು ಉಚಿತ ಲ್ಯಾಪ್‍ಟಾಪ್‍ಗಳನ್ನು ಸರ್ಕಾರ ವಿತರಿಸುತ್ತಿದೆ. ಅರ್ಹ ವಿದ್ಯಾರ್ಥಿಗಳು ಸೌಲಭ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು.
‘ಅಮೃತ್ ನಗರೋತ್ಥಾನ ಯೋಜನೆಯಡಿ ನಗರಸಭೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಪರಿಶಿಷ್ಟ ಜಾತಿಗೆ 1.86 ಕೋಟಿ, ಪರಿಶಿಷ್ಟ ಪಂಗಡಕ್ಕೆ 75 ಲಕ್ಷ, ಇತರೆ ಹಿಂದುಳಿದ ವರ್ಗಕ್ಕೆ ₹99 ಲಕ್ಷ, ಅಂಗವಿಕಲರಿಗೆ ₹ 85 ಲಕ್ಷ ಬಳಕೆಗೆ ಅನುಮೋದನೆ ಸಿಕ್ಕಿದೆ. ಪ್ರಾಥಮಿಕ ಹಂತದಲ್ಲಿ ಹೊಲಿಗೆ ಯಂತ್ರ ಮತ್ತು ಲ್ಯಾಪ್‍ಟಾಪ್ ವಿತರಿಸಲಾಗುತ್ತಿದೆ’ ಎಂದರು.
‘ನಗರಕ್ಕೆ ಕುಡಿಯುವ ನೀರು ಪೂರೈಸಲು ಮಾಲಂಗಿ ನೀರಾವರಿ ಯೋಜನೆಗೆ ₹ 165 ಕೋಟಿ, ಒಳ ಚರಂಡಿ ಕಾಮಗಾರಿಗೆ ₹ 143 ಕೋಟಿ, ಕ್ರೀಡಾಂಗಣಕ್ಕೆ ₹ 15 ಕೋಟಿ, ಸಂತೇಮರಹಳ್ಳಿ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ನೂತನ ಬಸ್ ನಿಲ್ದಾಣಕ್ಕೆ ₹ 33 ಕೋಟಿ ಅನುದಾನ ಸಿಗುವ ಭರವಸೆ ಇದೆ. ಯಡಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸಿ ನಿವೇಶನಗಳನ್ನು ಹಂಚಲಾಗುವುದು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿದರು. ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಉಪಾಧ್ಯಕ್ಷ ಮಮತಾ, ಸದಸ್ಯರಾದ ಗಾಯತ್ರಿ, ಕುಮುದಾ, ಚಿನ್ನಮ್ಮ, ಸುಧಾ, ಬಸವಣ್ಣ, ನೀಲಮ್ಮ, ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಶಾಂತಲಾ, ಸ್ವಾಮಿ, ಪೌರಾಯುಕ್ತ ರಾಮದಾಸ್, ಜಿಲ್ಲಾ ಮಟ್ಟದ ಯೋಜನಾಧಿಕಾರಿ ಅಲ್ತಾಫ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.