
ಚಾಮರಾಜನಗರ: ಬೇಗೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‌ಗಳನ್ನು ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ವಿತರಿಸಿದರು.
ಬಳಿಕ ಮಾತನಾಡಿ, ಮಹಿಳಾ ಸಂಘಗಳು ಹಾಗೂ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಹಕಾರ ಸಂಘಗಳ ಕೊಡುಗೆ ದೊಡ್ಡದು. ₹1.3 ಕೋಟಿ ಹಣವನ್ನು ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲವಾಗಿ ಮಂಜೂರು ಮಾಡಲಾಗಿದ್ದು ಕಾಲಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಸಹಕಾರ ಸಂಘಗಳ ಸಾಲ ಸೌಲಭ್ಯ ನಿರ್ಧಿಷ್ಟ ವ್ಯಕ್ತಿಗಳಿಗೆ ದೊರೆಯದೆ ಎಲ್ಲರಿಗೂ ಸಿಗಬೇಕು, ಸಾಮಾಜಿಕ ಸಮಾನತೆಯಡಿ ಸಾಲ ವಿತರಣೆಯಾಗಬೇಕು, ಆದರೆ ಕೆಲವು ಸಹಕಾರ ಸಂಘಗಳಲ್ಲಿ ಎಲ್ಲ ರೈತರಿಗೆ ಸಾಲ ದೊರೆಯುತ್ತಿಲ್ಲ, ಪರಿಣಾಮ ಆರ್ಥಿಕವಾಗಿ ಸಬಲೀಕರಣವಾಗಲು ಅಡ್ಡಿಯಾಗಿದೆ ಎಂದರು.
ತಂದೆ ಸಹಕಾರ ಸಚಿವರಾಗಿದ್ದಾಗ ಅವಧಿಯಲ್ಲಿ ಸಹಕಾರ ಸಂಘಗಳಿಗೆ ಹೆಚ್ಚು ಬಲ ತುಂಬಿದರು. ಅವರ ಹಾದಿಯಲ್ಲೇ ಸಾಗಿದ್ದು ಬೇಗೂರಿನಲ್ಲಿ ಕೃಷಿ ಪತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ 4 ರಿಂದ 5 ಕೋಟಿ ಅನುದಾನ ನೀಡಲಾಗುವುದು. ಎಂಡಿಸಿಸಿ ಬ್ಯಾಂಕಿನ ಶಾಖೆ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್, ಬೇಗೂರು ಬ್ಯಾಂಕಿನ ಅಧ್ಯಕ್ಷ ನಂದೀಶ್, ಕೋಟೆಕೆರೆ ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಸದಾಶಿವಮೂರ್ತಿ, ಮಲ್ಲಿದಾಸ್, ಚಂದ್ರು, ತಮ್ಮಯ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಪುನೀತ್, ಮಾಜಿ ಅಧ್ಯಕ್ಷ ಇಂದಿರಾ, ಸುರೇಶ್, ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಶೆಟ್ಟಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.