ADVERTISEMENT

2020| ಚಾಮರಾಜನಗರದಲ್ಲಿ ಈ ವರ್ಷ ನಡೆದಿದ್ದಿಷ್ಟು...

ಸೂರ್ಯನಾರಾಯಣ ವಿ
Published 31 ಡಿಸೆಂಬರ್ 2020, 3:11 IST
Last Updated 31 ಡಿಸೆಂಬರ್ 2020, 3:11 IST
ಲಾಕ್‌ಡೌನ್‌ ಅವಧಿಯಲ್ಲಿ ಖಾಲಿ ಖಾಲಿಯಾಗಿದ್ದ ರಸ್ತೆ
ಲಾಕ್‌ಡೌನ್‌ ಅವಧಿಯಲ್ಲಿ ಖಾಲಿ ಖಾಲಿಯಾಗಿದ್ದ ರಸ್ತೆ   

ಚಾಮರಾಜನಗರ: 2020ರಲ್ಲಿ ಇಡೀ ಜಗತ್ತನ್ನೇ ಬಾಧಿಸಿದ ಕೋವಿಡ್‌ ಜಿಲ್ಲೆಯನ್ನೂ ಕಾಡಿತು. ವರ್ಷದ ಬಹುಪಾಲು ದಿನಗಳು ಕೋವಿಡ್‌ ಭಯದಲ್ಲೇ ಕಳೆದುಹೋಗಿದೆ. ಜಿಲ್ಲೆಯ ಜನ ಸೋಂಕಿನ ಸವಾಲು ಎದುರಿಸಿಕೊಂಡೇ ದಿನ ದೂಡುತ್ತಲೇ ಬಂದಿದ್ದಾರೆ. 2021ರಲ್ಲೂ ಇದು ಮುಂದುವರಿಯುವ ಲಕ್ಷಣ ಕಾಣಿಸುತ್ತಿದೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಡೀ ರಾಜ್ಯದಲ್ಲಿ ಕೊರೊನಾ ವೈರಸ್‌ ಕಡೆಯದಾಗಿ ಕಾಲಿಟ್ಟ ಜಿಲ್ಲೆ ಚಾಮರಾಜನಗರ. ರಾಜ್ಯದಲ್ಲಿ ಮಾರ್ಚ್‌ನಲ್ಲಿ ಕೋವಿಡ್‌ ಹಾವಳಿ ಆರಂಭಗೊಂಡಿದ್ದರೂ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು ಜೂನ್‌ ತಿಂಗಳ 8ರಂದು. ಲಾಕ್‌ಡೌನ್‌ ಅವಧಿಯ 100 ದಿನಗಳ ಕಾಲ ಜಿಲ್ಲೆ ಕೋವಿಡ್‌ ಮುಕ್ತವಾಗಿತ್ತು. ಜಿಲ್ಲಾಡಳಿತ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕು ಬಾಧಿಸಲಿಲ್ಲ.

ಅನ್‌ಲಾಕ್‌ ಶುರು ಆಗುತ್ತಿದ್ದಂತೆಯೇ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡು, ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಏರುಗತಿಗೆ ಸಾಗಿ ಆ ಬಳಿಕ ಇಳಿಮುಖವಾಯಿತು. ಈಗ ದಿನಕ್ಕೆ 10–15ರ ಆಸುಪಾಸಿನಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ನಾಲ್ವರು ಕೋವಿಡ್ ವಾರಿಯರ್‌ಗಳು, ಮಾಜಿ ಶಾಸಕ ಸಿ.ಗುರುಸ್ವಾಮಿ ಸೇರಿದಂತೆ 111 ಮಂದಿ ಸೋಂಕಿನಿಂದಾಗಿ ಮೃತಪಟ್ಟರು. 20 ಮಂದಿ ಸೋಂಕಿತರು ಬೇರೆ ಅನಾರೋಗ್ಯಗಳಿಂದಾಗಿ ಕೊನೆಯುಸಿರೆಳೆದರು. ಮಂಗಳವಾರದವರೆಗೆ (ಡಿ.29) ಜಿಲ್ಲೆಯ 6,741 ಮಂದಿಗೆ ಸೋಂಕು ತಗುಲಿದ್ದು, 6,515 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ಬಲಗೊಂಡ ಆರೋಗ್ಯ ಸೇವೆ

ಕೋವಿಡ್‌ನಿಂದಾಗಿ ಕೆಲವು ಜಿಲ್ಲೆ ಯಲ್ಲಿ ಸಕಾರಾತ್ಮಕ ಬೆಳವಣಿಗೆಗಳೂ ನಡೆದಿವೆ. ಆರೋಗ್ಯ ಸೇವೆ ಮತ್ತಷ್ಟು ಸದೃಢವಾಯಿತು. ₹1.79 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಯಾಗಿದೆ. ಜಿಲ್ಲಾಸ್ಪತ್ರೆಗೆ ಏಳು ಹೊಸ ವೆಂಟಿಲೇಟರ್‌ಗಳು ಬಂದಿವೆ. ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿವೆ. ಕೋವಿಡ್ ನೆಪದಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೂ ಹಲವು ಸೌಲಭ್ಯಗಳು ಸಿಕ್ಕಿವೆ.

ಕನ್ನಡದಲ್ಲಿ ಮಂತ್ರ

ಕೋವಿಡ್ ನಡುವೆಯೇ ಜಿಲ್ಲಾಡಳಿತ ಕೈಗೊಂಡ ಕೆಲವು ನಿರ್ಧಾರಗಳು ರಾಜ್ಯದ ಗಮನ ಸೆಳೆಯಿತು. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಿಧಿ ವಿಧಾನಗಳಿಗೆ ಧಕ್ಕೆಯಾಗದಂತೆ ಕನ್ನಡದಲ್ಲಿ ಮಂತ್ರೋಚ್ಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದರು. ಕನ್ನಡ ಮಂತ್ರವನ್ನು ಹೇಳಿಕೊಡುವುದಕ್ಕೆ ಕನ್ನಡ ಪೂಜಾರಿ ಎಂದೇ ಗುರುತಿಸಿಕೊಂಡಿರುವ ಹೀರೆಮಗಳೂರು ಕಣ್ಣನ್ ಅವರಿಂದ ಅರ್ಚಕರಿಗೆ ತರಬೇತಿಯನ್ನೂ ಜಿಲ್ಲಾಡಳಿತ ಕೊಡಿಸಿತು.

ಪ್ರವಾಸೋದ್ಯಮಕ್ಕೆ ಉತ್ತೇಜನ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಚೆಲುವ ಚಾಮರಾಜನಗರ ಎಂಬ ಅಭಿಯಾನವನ್ನು ಜಿಲ್ಲಾಡಳಿತ ಆರಂಭಿಸಿತು. ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿತು. ಪ್ರವಾಸಿ ತಾಣಗಳನ್ನು ಪರಿಚಯಿಸುವ ವಿಡಿಯೊವನ್ನು ಸಿದ್ಧಪಡಿಸಿತ್ತು.

ಜಿಲ್ಲೆಗೆ ಬಂದ ಮುಖ್ಯಮಂತ್ರಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಮೊದಲ ಬಾರಿಗೆ ನವೆಂಬರ್ 25 ರಂದು ಜಿಲ್ಲೆಗೆ ಭೇಟಿ ನೀಡಿದರು. ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯಿಂದ ಮುಖ್ಯಮಂತ್ರಿ ಅವರು ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಬಂದಿಲ್ಲ ಎಂಬ ಆರೋಪಗಳೂ ಕೇಳಿ ಬಂದವು.

ನೈಸರ್ಗಿಕ ಭೂ ವಿಜ್ಞಾನ ಮ್ಯೂಸಿಯಂ

ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯ ಪುರದಲ್ಲಿ ಏಳು ರೀತಿಯ ಖನಿಜ, ಉಪ ಖನಿಜ ಪತ್ತೆಯಾಗಿರುವುದರಿಂದ ಆ ಪ್ರದೇಶದಲ್ಲಿ ನೈಸರ್ಗಿಕ ಭೂ ವಿಜ್ಞಾನ ಮ್ಯೂಸಿಯಂ ಸ್ಥಾಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿತು. ಅದಕ್ಕಾಗಿ ಸ್ಥಳ ಸರ್ವೇ ಮಾಡಿಸಿ, 31 ಎಕರೆ ಜಾಗವನ್ನೂ ಗುರುತಿಸಿತು.

ಕಾಣದ ಕಾಳ್ಗಿಚ್ಚು, ತುಂಬಿದ ಕೆರೆ ಕಟ್ಟೆ

ಜಿಲ್ಲೆಯ ವನ್ಯಧಾಮಗಳಲ್ಲಿ ಈ ವರ್ಷ ಭಾರಿ ಪ್ರಮಾಣದ ಕಾಳ್ಗಿಚ್ಚು ಕಂಡು‌ಬರಲಿಲ್ಲ. ಕಾವೇರಿ ವನ್ಯಧಾಮದಲ್ಲಿ ಅಲ್ಲಲ್ಲಿ ಬೆಂಕಿ‌ ಬಿದ್ದಿದ್ದರೂ, ಹೆಚ್ಚಿನ ಹಾನಿಯಾಗಲಿಲ್ಲ.

ಈ ವರ್ಷ ಪ್ರವಾಹವೂ ಬರಲಿಲ್ಲ. ಬರವೂ ಉಂಟಾಗಲಿಲ್ಲ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಕೆರೆ ಕಟ್ಟೆಗಳು ತುಂಬಿದವು. ರೈತರಿಗೂ ಅನುಕೂಲವಾಗಿ ಉತ್ತಮ ಇಳುವರಿಯೂ ಸಿಕ್ಕಿತು. ವರುಣ ತೋರಿದ ಕೃಪೆಯು ಕೋವಿಡ್‌ನಿಂದಾಗಿ ಸಂಕಷ್ಟ ಅನುಭವಿಸಿದ್ದ ರೈತರನ್ನು ಸ್ವಲ್ಪ ಚೇತರಿಸುವಂತೆ ಮಾಡಿತು.

ಕೊಡಗು ಭಾಗದಲ್ಲಿ ತೀವ್ರ ಮಳೆಯಾಗಿ ಕಾವೇರಿ ನದಿ ಉಕ್ಕಿ ಹರಿಯಲು ಆರಂಭಿಸಿದಾಗ ಕೊಳ್ಳೇಗಾಲ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ ಎದುರಾಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಆತಂಕವೂ ಕರಗಿ ಹೋಯಿತು.

ಪ್ರಬಲಗೊಂಡ ಬಿಜೆಪಿ

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಬಿಜೆಪಿ ಈ ವರ್ಷ ಇನ್ನಷ್ಟು ಪ್ರಬಲವಾದಂತೆ ಕಂಡು ಬಂತು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಿತು. ಯಳಂದೂರು ಪಟ್ಟಣ ಪಂಚಾಯಿತಿ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲೂ ಅಂದರೆ, ಚಾಮರಾಜನಗರ ನಗರಸಭೆ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಹನೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.

ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಬಂಡಾಯ ಸದಸ್ಯರೊಂದಿಗೆ ಕಮಲ ಪಾಳಯ ಮೈತ್ರಿ ಮಾಡಿಕೊಂಡರೆ, ಹನೂರಿನಲ್ಲಿ ಕಾಂಗ್ರೆಸ್ ಸದಸ್ಯರೊಂದಿಗೇ ಮೈತ್ರಿ ಮಾಡಿಕೊಂಡಿತು.

ಕಾಂಗ್ರೆಸ್ ಸದಸ್ಯರ ಬೀದಿ ಕಾಳಗ

ಪಕ್ಷದಲ್ಲಿ ಆಂತರಿಕ ಒಪ್ಪಂದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ‌ಕ್ಕೆ ರಾಜೀನಾಮೆ ನೀಡದೇ ಇದ್ದುದಕ್ಕೆ ಕಾಂಗ್ರೆಸ್ ಸದಸ್ಯರು ಸಾರ್ವಜನಿಕವಾಗಿ ಹೊಡೆದಾಡಿದ ಘಟನೆಗೂ (ಫೆಬ್ರುವರಿ 12) 2020 ಸಾಕ್ಷಿಯಾಯಿತು.ಅಧ್ಯಕ್ಷರಾಗಿದ್ದ ಶಿವಮ್ಮ ಅವರನ್ನು ಭಾವಿ ಅಧ್ಯಕ್ಷೆ ಅಶ್ವಿನಿ ಎಂ. ಹಾಗೂ ಇತರ ಸದಸ್ಯರು ಎಳೆದಾಡಿದರು.

ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಾಂಗ್ರೆಸ್ ಶಾಸಕರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಹಾಗೂ ಸಭೆಗೆ ಕರೆಯುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹಾಗೂ ಇತರರು ಸಚಿವರ ಮುಂದೆಯೇ ಪ್ರತಿಭಟನೆ ನಡೆಸಿದ್ದರು.

ಇನ್ನಿತರ ಪ್ರಮುಖ ಘಟನಾವಳಿಗಳು

ಚಿತ್ರೀಕರಣದಲ್ಲಿ ರಜನೀಕಾಂತ್, ಅಕ್ಷಯ್ ಕುಮಾರ್ ಭಾಗಿ

ಡಿಸ್ಕವರಿ ಚಾನೆಲ್‌ನಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್ ಗ್ರಿಲ್ಸ್ ಅವರೊಂದಿಗೆ ಟಿವಿ ಕಾರ್ಯಕ್ರಮಕ್ಕಾಗಿ ಬಂಡೀಪುರದಲ್ಲಿ‌ ನಡೆದ ಚಿತ್ರೀಕರಣದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು.

ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಎಸ್‌ಐ ಅಮಾನತು

ಅಕ್ರಮ ಮರಳು ಸಾಗಣೆ ಪ್ರಕರಣವನ್ನು ತಿರುಚಿದ್ದಕ್ಕಾಗಿ ಡಿವೈಎಸ್‌ಪಿ ಮೋಹನ್, ಸರ್ಕಲ್ ಇನ್‌ಸ್ಪೆಕ್ಟರ್ ಮಂಜು ಹಾಗೂ ಸಬ್ ಇನ್‌ಸ್ಪೆಕ್ಟರ್ ಸುನಿಲ್ ಹಾಗೂ ಕಾನ್‌ಸ್ಟೆಬಲ್ ನಾಗನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಯಿತು.

ಸದ್ದು ಮಾಡಿದ ಗುಂಡ್ಲುಪೇಟೆ ತ್ರಿವಳಿ ಕೊಲೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಹಸು ಸಾಗಣೆ ವಿಚಾರದಲ್ಲಿ ಎರಡು ತಂಡಗಳ‌ ನಡುವೆ ಮೇ 26 ರಂದು ನಡೆದ ಘರ್ಷಣೆ ಮೂವರ ಕೊಲೆಯಲ್ಲಿ ಅಂತ್ಯವಾಯಿತು.

ಸಾಲೂರು ಮಠಕ್ಕೆ ಹೊಸ ಪೀಠಾಧಿಪತಿ

ಮಹದೇಶ್ವರ ಬೆಟ್ಟದ ಸಾಲೂರು‌ ಮಠಕ್ಕೆ ಈ ವರ್ಷ ಹೊಸ ಪೀಠಾಧಿಪತಿಯನ್ನು ನೇಮಿಸಲಾಯಿತು. ಪೀಠಾಧ್ಯಕ್ಷರಾಗಿದ್ದ ಪಟ್ಟದ ಗುರುಸ್ವಾಮಿ ಅವರ ಅನಾರೋಗ್ಯದ ಕಾರಣದಿಂದನಾಗೇಂದ್ರ ಎಂಬ ವಟುವಿಗೆ ಆಗಸ್ಟ್‌ 8ರಂದು ಪಟ್ಟಾಭಿಷೇಕ ಮಾಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಎಂದು ಮರು ನಾಮಕರಣ ಮಾಡಲಾಯಿತು.

ಸುಳ್ವಾಡಿ ದೇಗುಲ ಪುನರಾರಂಭ

2018ರ ಡಿಸೆಂಬರ್ 14ರಂದು ಹನೂರು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಸ್ಥಾನದಲ್ಲಿ ಸಂಭವಿಸಿದ ವಿಷ ಪ್ರಸಾದದ ನಂತರ ಮುಚ್ಚಲಾಗಿದ್ದ ದೇವಾಲಯವನ್ನು 22 ತಿಂಗಳುಗಳ ನಂತರ ಅಕ್ಟೋಬರ್ 24 ರಂದು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಕಪ್ಪು ಚಿರತೆ ದರ್ಶನ

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಪ್ಪು ಚಿರತೆ ಕಂಡು ಬಂದು ವನ್ಯಜೀವಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.