ಯಳಂದೂರು: ತಾಲ್ಲೂಕಿನಲ್ಲಿ ನಾಟಿ ಪ್ರಕ್ರಿಯೆ ಚುರುಕು ಪಡೆದಿದೆ. ಭತ್ತ, ಜೋಳ, ರಾಗಿ ಬಿತ್ತನೆ ನಡೆದಿದೆ. ಆದರೆ, ಭೂಮಿಗೆ ಸೇರಿದ ಬೀಜ ಮೊಳಕೆ ಕಟ್ಟುವ ಮೊದಲೆ ಪಕ್ಷಿ, ಇಲಿ, ಹೆಗ್ಗಣ ಹಾಗೂ ವನ್ಯಪ್ರಾಣಿಗಳ ಪಾಲಾಗುತ್ತಿದೆ. ಇದರಿಂದ ಪೈರು ಮೊಳಕೆ ಕಟ್ಟುವ ಸಾಧ್ಯತೆ ಕ್ಷೀಣಿಸುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರೈತರು ಗಲಾಟೆ ಮಾಡುವ ಯಾಂತ್ರಿಕೃತ ಸಾಧನಗಳನ್ನು ಬಳಸಿ, ಧ್ವಂಸಕ ಜೀವಿಗಳು ಗದ್ದೆಯತ್ತ ನುಸುಳದಂತೆ ನವೀನ ತಂತ್ರ ರೂಪಿಸಿದ್ದಾರೆ.
ಭತ್ತ ನಾಟಿಗೂ ಮೊದಲು ಸಸಿ ಮಡಿ ತಯಾರಿಸಬೇಕು. ನಂತರ ಬಿತ್ತನೆ ಬೀಜ ಹಾಕಬೇಕು. ಕಾಳು ಮೊಳೆಯಲು ಕನಿಷ್ಠ ವಾರ ಬೇಕು. ಈ ಸಮಯದಲ್ಲಿ ಹಕ್ಕಿಗಳು ಗದ್ದೆಗೆ ಇಳಿದು ಬೀಜವನ್ನು ಭಕ್ಷಿಸುವುದರಿಂದ ಸಸಿಗಳ ಬೆಳವಣಿಗೆ ತಗ್ಗುತ್ತದೆ. ಸಂಜೆ ಹಂದಿ, ಹೆಗ್ಗಣ, ಇಲಿ ದಾಂಗುಡಿ ಇಟ್ಟು ಕಾಳು ನಾಶ ಪಡಿಸುತ್ತವೆ. ಹೊಲಗಳಲ್ಲಿ ಮೆಕ್ಕೆಜೋಳ ತಿನ್ನಲು ನವಿಲು ಇಳಿಯುತ್ತವೆ. ರಾತ್ರಿ ಮೊಲ ಮತ್ತಿತರ ಪ್ರಾಣಿಗಳು ಸಂಚರಿಸಿ ಬೆಳೆಯನ್ನು ಅಪೋಷನ ಪಡೆಯುತ್ತವೆ. ಈ ದಿಸೆಯಲ್ಲಿ ರೈತರು ಜೀವಿಗಳಿಗೆ ತೊಂದರೆಯನ್ನುಂಟುಮಾಡುವ ಎಲೆಕ್ಟ್ರಾನಿಕ್ ಮೈಕ್ ಬಳಸಿ ಬೆಳೆ ರಕ್ಷಿಸುವತ್ತ ಚಿತ್ತ ಹರಿಸಿದ್ದಾರೆ.
‘ಮುಂಜಾನೆ ಮತ್ತು ರಾತ್ರಿ ಬೆಳೆಗಳನ್ನು ವನ್ಯ ಜೀವಿಗಳಿಂದ ರಕ್ಷಿಸಬೇಕು. ಹಕ್ಕಿಗಳು ಎಳೆಯ ಪೈರು ಕತ್ತರಿಸಿದರೆ, ಮುಳ್ಳು ಹಂದಿ ಫಸಲನ್ನು ಮೇಯ್ದು ಹೋಗುತ್ತದೆ. ಇವುಗಳನ್ನು ಹೊಲದ ಕಡೆ ಬರದಂತೆ ತಡೆಯುವುದು ಕಷ್ಟದ ಕೆಲಸ. ಇವುಗಳ ನಿಯಂತ್ರಣಕ್ಕೆ ರೈತರು ನಿದ್ದೆಗೆಟ್ಟು ಕಾಯಬೇಕು. ಜಾಗಟೆ ಬಾರಿಸಬೇಕು, ಪಟಾಕಿ ಸಿಡಿಸಬೇಕು. ಇದರಿಂದ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಪ್ರಾಣ ಹಾನಿಯೂ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸಣ್ಣಗಾತ್ರದ ಮೈಕ್ ಆನ್ ಮಾಡಿ, ನಾಯಿ ಬೊಗಳುವಂತೆ, ಹಂದಿ ಕೂಗುವಂತೆ, ಮನುಷ್ಯರ ಗದ್ದಲದ ಶಬ್ದ ಬರುವಂತೆ ಟ್ಯೂನ್ ಮಾಡಿ ಅಳವಡಿಸಿ ಬೆಳೆ ಉಳಿಸಿದ್ದೇವೆ. ಇದರಿಂದ ಪ್ರಾಣಿ ಪಕ್ಷಿಗಳು ಹೊಲದ ಹತ್ತಿರ ಸುಳಿಯದಂತೆ ಓಡಿ ಹೋಗುತ್ತವೆ’ ಎನ್ನುತ್ತಾರೆ ಅಂಬಳೆ ರೈತ ನಾಗೇಶ್.
‘ಪಕ್ಷಿಗಳಿಗೆ ನಾಯಿ ಗೀಳಿಡುವ ಧ್ವನಿ ಅಂಜಿಕೆ ತಂದರೆ, ಹಂದಿಗಳಿಗೆ ಗನ್ ಶಬ್ದ ಬೆಚ್ಚಿ ಬೀಳಿಸುತ್ತದೆ. ಮೊಲಗಳಿಗೆ ಗಂಟೆ ಶಬ್ದ, ಆನೆ ಎದುರಿಸಲು ಜನರ ಕೂಗಾಟದ ಶಬ್ದ..’ ಸೇರಿದಂತೆ ಹತ್ತಾರು ಗದ್ದಲಗಳಿಂದ ವನ್ಯ ಜೀವಿಗಳು ಪೇರಿ ಕೀಳುತ್ತವೆ. ಇದರಿಂದ ಬೆಳೆ ಉಳಿಸಿಕೊಳ್ಬಬಹುದು’ ಎನ್ನುತ್ತಾರೆ ಕೃಷಿಕ ಮಹೇಶ್.
ವನ್ಯಪ್ರಾಣಿಗಳಿಂದ ಹಗಲು–ರಾತ್ರಿ ಬೆಳೆಗಳ ರಕ್ಷಣೆ ಐನೂರು ರೂಪಾಯಿಯಲ್ಲಿ ಎಲೆಕ್ಟ್ರಾನಿಕ್ ಮೈಕ್ ಸಿದ್ಧ ಹೊಲ ಕಾಯುವ ಕೆಲಸ ಸುಲಭವಾಗಿಸಿಕೊಂಡ ರೈತರು
ಗಲಾಟೆ ಮಾಡುವ ಸಾಧನ ನಾಟಿ ಮಾಡಿದ ಗದ್ದೆ ಮೆಕ್ಕೆಜೋಳದ ತಾಕಿನಲ್ಲಿ ಬೊಂಬು ನಿಲ್ಲಿಸಿ ಇದಕ್ಕೆ ಸಣ್ಣ ಗಾತ್ರದ ಮೈಕ್ (ಗಲಾಟೆ ಮೈಕ್) ಕಟ್ಟಿದ್ದೇವೆ. ಇದರ ಬೆಲೆ ಐನೂರು ರೂಪಾಯಿ ಮಾತ್ರ. ಇದನ್ನು ಸಣ್ಣ ಗಾತ್ರದ ಸೆಲ್ ಬಳಸಿ ಚಾಲು ಮಾಡಬಹುದು. ಅಗತ್ಯಕ್ಕೆ ತಕ್ಕಷ್ಟು ಸೌಂಡ್ (ಟ್ಯೂನ್) ಏರುಪೇರು ಮಾಡಬಹುದು. ಬೇಸಾಯಗಾರರು ಹೊಲಕ್ಕೆ ತೆರಳಿ ಒಮ್ಮೆ ಆನ್ ಮಾಡಿ ಮನೆಗೆ ಹೊರಡಬಹುದು. ದಾಳಿ ಮಾಡುವ ಪ್ರಾಣಿಗಳಿಗೆ ವಿರುದ್ಧವಾದ ಶಬ್ದವನ್ನು ಮೈಕ್ ಸದಾ ಬಿತ್ತರಿಸುತ್ತಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.