ADVERTISEMENT

ಗ್ರಾ.ಪಂ ಚುನಾವಣೆ: ಯುವಶಕ್ತಿ ಮುಂದೆ, ಅಭಿವೃದ್ಧಿಯೇ ವಿಷಯ

ಜಿಲ್ಲೆಯಲ್ಲಿ 129 ಗ್ರಾಮ ಪಂಚಾಯಿತಿಗಳಿಗೆ 22, 27ರಂದು ಚುನಾವಣೆ, ಬಿರುಸುಗೊಂಡ ಹಳ್ಳಿ ರಾಜಕೀಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 19:30 IST
Last Updated 6 ಡಿಸೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯ 129 ಗ್ರಾಮ ಪಂಚಾಯಿತಿಗಳ, 823 ಕ್ಷೇತ್ರಗಳ 2,157 ಸದಸ್ಯ ಸ್ಥಾನಗಳಿಗೆ ಇದೇ 22 (ಮೊದಲ ಹಂತ) ಮತ್ತು 27ರಂದು (ಎರಡನೇ ಹಂತ) ಚುನಾವಣೆ ನಡೆಯಲಿದ್ದು, ಗ್ರಾಮೀಣ ಭಾಗಗಳಲ್ಲಿ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಜ್ಜುಗೊಂಡಿದ್ದಾರೆ.

ರಾಜಕೀಯದಲ್ಲಿ ಆಸಕ್ತಿ ಇರುವ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂಬ ಆಸಕ್ತಿ ಇರುವ ಮಂದಿ ಚುನಾವಣೆಗೆ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ. ಗ್ರಾಮದ ಪಂಚಾಯಿತಿ ಕಟ್ಟೆ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಈಗ ಚುನಾವಣೆಯದ್ದೇ ಚರ್ಚೆ. ಕೋವಿಡ್‌ ಆತಂಕದ ನಡುವೆಯೇ ಮುಖಂಡರು ತಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಕಾರ್ಯತಂತ್ರ ಹೆಣೆಯುವುದರಲ್ಲಿ ನಿರತರಾಗಿದ್ದಾರೆ.

ಕೋವಿಡ್‌–19ನ ಹಾವಳಿ ಈ ಬಾರಿಯ ಚುನಾವಣೆಯನ್ನು ಕುತೂಹಲಕಾರಿಯನ್ನಾಗಿ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿರುವ ಯುವ ಜನತೆ ಹಳ್ಳಿ ರಾಜಕೀಯದಲ್ಲಿ ಆಸಕ್ತಿಯನ್ನು ತೋರಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಗ್ರಾಮೀಣ ಭಾಗದ ಜನರು ಅದರಲ್ಲೂ ಹಿರಿಯ ನಾಗರಿಕರು ಅಭಿವೃದ್ಧಿಯನ್ನು ಬಯಸುತ್ತಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿರುವವರು, ಶಿಕ್ಷಣ ಪಡೆದಿರುವವರ ಪರ ಒಲವು ತೋರುತ್ತಿದ್ದಾರೆ. ಯುವ ಸಮೂಹ, ವಯಸ್ಕರೇ ಸ್ಪರ್ಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಇದು ರಾಜಕೀಯ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ನಡೆಯುವ ಚುನಾವಣೆ ಅಲ್ಲದಿದ್ದರೂ, ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಮುಖಂಡರು ಈ ಚುನಾವಣೆಯನ್ನು ಬಳಸಿಕೊಳ್ಳುತ್ತಾರೆ. ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರನ್ನು ಕಣಕ್ಕಿಳಿಸುವುದು ರೂಢಿ.

ಯುವಜನರ ಆಸಕ್ತಿ: ಹೆಚ್ಚು ಯುವಜನರು ಸ್ಪರ್ಧೆಗೆ ಮುಂದಾಗಿರುವುದು ಈ ಚುನಾವಣೆಯ ಪ್ರಮುಖ ಅಂಶ. ನಗರವಾಸಿಗಳಾಗಿದ್ದ ಹಲವು ಯುವ ಜನರು ಕೋವಿಡ್‌ ಕಾರಣದಿಂದ ಕೆಲಸ ಕಳೆದುಕೊಂಡು ಅಥವಾ ನಗರಗಳ ಸಹವಾಸ ಬಿಟ್ಟು ಊರಿಗೆ ಬಂದಿದ್ದಾರೆ. ಇನ್ನು ಮುಂದೆ ಊರಿನಲ್ಲೇ ನೆಲೆಸಲು ನಿರ್ಧರಿಸಿದ್ದಾರೆ. ಇವರೆಲ್ಲ ಈಗ ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ತೋರಿದ್ದು, ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಅಭಿವೃದ್ಧಿಯೇ ವಿಷಯ

ಗ್ರಾಮದ ಅಭಿವೃದ್ಧಿ ವಿಷಯವೇ ಈ ಬಾರಿ ಚುನಾವಣೆಯ ಪ್ರಮುಖ ಅಂಶ. ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರದಬಹುತೇಕ ಗ್ರಾಮಗಳನ್ನು ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳು ಕಾಡುತ್ತಿದ್ದು, ಅಭಿವೃದ್ಧಿಗಾಗಿ ದುಡಿಯುವ ಮಂದಿಯನ್ನು ಆಯ್ಕೆ ಮಾಡಲು ಜನರು ಒಲವು ತೋರಿದ್ದಾರೆ.ಇದುವರೆಗೆ ಆಡಳಿತ ನಡೆಸಿದವರಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಮಾತುಗಳೂ ಕೇಳಿ ಬರುತ್ತಿದೆ.

ಇದರ ಜೊತೆಗೆ ಮೀಸಲಾತಿ, ಜಾತಿ ಆಧರಿತವಾಗಿ ಮತದಾರರನ್ನು ಓಲೈಸುವ ಪ್ರಯತ್ನಗಳೂ ನಡೆಯುತ್ತಿದೆ.

ಮುಖಂಡರು, ಯಜಮಾನರ ತೀರ್ಮಾನ

ಕೆಲವು ಗ್ರಾಮಗಳಲ್ಲಿ ಜಾತಿ ಮುಖಂಡರು ಮತ್ತು ಯಜಮಾನರು ಹೆಸರಿಸಿದ ವ್ಯಕ್ತಿಗಳು ಮಾತ್ರಚುನಾವಣೆಗೆ ಸ್ಪರ್ಧಿಸಬಹುದು. ನಂತರ ಇವರ ವಿರುದ್ಧ ಯಾರು ಸ್ಪರ್ಧೆ ನಡೆಸದಂತೆಫರ್ಮಾನು ಹೊರಡಿಸಲಾಗುತ್ತದೆ. ಒಂದು ವೇಳೆ ಇವರ ವಿರುದ್ಧ ಉಮೇದುವಾರಿಕೆ ಸಲ್ಲಿಸುವವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಇಲ್ಲವೇ ದಂಡ ಹಾಕುವ ಕ್ರಮವೂ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ.ಅವಿರೋಧ ಆಯ್ಕೆ ಆದವರುಕುಲಸ್ಥರಿಗೆ ಇಂತಿಷ್ಟು ಹಣ ಇಲ್ಲವೇ ನಿವೇಶನ ನೀಡಿ ಋಣ ಸಂದಾಯ ಮಾಡುವುದೂ ಇದೆ.

ಮತದಾರರು, ಮುಖಂಡರು ಏನಂತಾರೆ?

ಗ್ರಾಮಗಳಿಗೆ ಇಂದು ನರೇಗಾದಡಿಯಲ್ಲಿ ಹೆಚ್ಚು ಅನುದಾನ ಬರುತ್ತಿದೆ. ಇದನ್ನು ಬಳಸಿ ಕೆಲಸ ಮಾಡುವ ವ್ಯಕ್ತಿ ಬೇಕು. ರಸ್ತೆ, ಚರಂಡಿ, ಬೀದಿದೀಪ ಹಾಗೂ ಮುಖ್ಯವಾಗಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಜತೆಗೆ ಗ್ರಾಮದ ಎಲ್ಲ ಜನರ ಜೊತೆಗೆ ಸೌಹಾರ್ದತೆಯಿಂದ ನಡೆದುಕೊಳ್ಳುವಂತಹ ವ್ಯಕ್ತಿ ಅವಶ್ಯಕತೆ ಇದೆ.

–ಜಯಶಂಕರ್, ಮುಖಂಡ ಸಂತೇಮರಹಳ್ಳಿ

***

ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಸ್ಪರ್ಧೆಗೆ ಯುವ ಜನರಲ್ಲಿ ಆಸಕ್ತಿಹೆಚ್ಚಾಗಿತ್ತು. ಕೆಲವರು ಎರಡನೇ ಬಾರಿ ಆಯ್ಕೆಗೆ ಕಸರತ್ತು ನಡೆಸಿದ್ದಾರೆ.ಗ್ರಾಮಾಭಿವೃದ್ಧಿ ಮತ್ತು ಗ್ರಾಮಸ್ಥರ ನೆರವಿಗೆ ಬರುವ ಉತ್ತಮ ವ್ಯಕ್ತಿಗಳನ್ನು ಆಯ್ಕೆ ‌ಮಾಡಲು ಜನರು ಚಿಂತನೆ ನಡೆಸಿದ್ದಾರೆ.

–ಪ್ರಸಾದ್, ಮುಖಂಡ,ದುಗ್ಗಹಟ್ಟಿ, ಯಳಂದೂರು ತಾಲ್ಲೂಕು

***

ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಅಭ್ಯರ್ಥಿ ನಾಯಕತ್ವ ಗುಣ ಹೊಂದಿರಬೇಕು. ಜನಪರ ಸೇವೆಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವ ವ್ಯಕ್ತಿಗಳಾಗಬೇಕು. ಶಿಕ್ಷಣ ಪಡೆದಿರುವವರನ್ನು ಆಯ್ಕೆ ಮಾಡಲು ಮುಂದಾಗಬೇಕು. ಇದರಿಂದಪಂಚಾಯಿತಿ ಆಡಳಿತ ವ್ಯವಸ್ಥೆ ಸುಧಾರಿಸುತ್ತದೆ. ಅಭಿವೃದ್ಧಿ ಪರ ಚಿಂತನೆಗಳುಮೂಡುತ್ತವೆ.

–ಆರ್.ಸುಚಿತ್ರ, ಮಲಾರಪಾಳ್ಯ, ಯಳಂದೂರು ತಾಲ್ಲೂಕು

***

ಹಿಂದಿನ ಆಡಳಿತದಲ್ಲಿ ಹಲವಾರು ಚುನಾಯಿತ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ಯುವಕರು ಚುಣಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ.

–ಗುರುಪಾದ ಸ್ವಾಮಿ, ಮಹದೇಶ್ವರ ಬೆಟ್ಟದ ಮುಖಂಡ

***

ಹಿಂದಿನ ಸದಸ್ಯರು ಬರೀ ಆಶ್ವಾಸನೆಯಲ್ಲೇ ಕಾಲ ಕಳೆಯುತ್ತಿದ್ದರು. ಈ ಬಾರಿ ವಿದ್ಯಾವಂತ ಮಂದಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆಲವು ಪಂಚಾಯಿತಿಗಳಲ್ಲಿ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದೆ

–ನಾಗೇಂದ್ರ, ಮಹದೇಶ್ವರ ಬೆಟ್ಟ

***

ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವವರು ಸಜ್ಜನರಾಗಿರಬೇಕು. ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಹಾಗೂ ಬೀದಿದೀಪ ಸೇರಿದಂತೆ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಜತೆಗೆ ಈಗಿನ ಪರಿಸ್ಥಿತಿಯಲ್ಲಿ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ಎಲ್ಲರಲ್ಲಿ ವಿಶ್ವಾಸ ಗಳಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಡಬೇಕು.

–ರಮೇಶ್, ತೆಳ್ಳನೂರು, ಚಾಮರಾಜನಗರ ತಾಲ್ಲೂಕು

***

ನಾವು ಇದುವರೆಗೆ ಸಾಕಷ್ಟು ಗ್ರಾಮಪಂಚಾಯಿತಿ ಚುನಾವಣೆ ನೋಡಿದ್ದೇವೆ. ನಮಗೆ ಸೌಲಭ್ಯ ಕೊಡುವುದಾಗಿ ಹೇಳಿ ನಮ್ಮಿಂದ ಗೆದ್ದು ಹೋದ ಜನಪ್ರತಿನಿಧಿಗಳು ಸದಸ್ಯರಾದ ಬಳಿಕ ತಾವು ಕೊಟ್ಟ ಭರವಸೆಯನ್ನೇ ಮರೆತು ಮತ ಹಾಕಿದವರನ್ನು ಮೂಲೆಗುಂಪು ಮಾಡಿದ್ದಾರೆ. ಆದ್ದರಿಂದ ನಮ್ಮ ಗ್ರಾಮದಲ್ಲಿ ಈ ಬಾರಿ ವಿದ್ಯಾವಂತ ಯುವಕರೇ ಚುನಾವಣೆಗೆ ನಿಲ್ಲಲು ಸಿದ್ಧರಾಗಿದ್ದಾರೆ

–ಮರುದ,ಮಾರ್ಟಳ್ಳಿ ಗ್ರಾಮ, ಹನೂರು ತಾಲ್ಲೂಕು

***

ನಾನು ಕಳೆದ ಬಾರಿ ಗೆದ್ದು ಗ್ರಾಮದಲ್ಲಿ ಅನೇಕ ಅಭಿವೃದ್ಧಿಗಳನ್ನು ಮಾಡಿದ್ದೇನೆ. ಆ ಕಾರಣ ಜನರು ನನ್ನನು ಕೈ ಬಿಡುವುದಿಲ್ಲ ಮತ್ತೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.

– ಶಶಿಕುಮಾರಿ,ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ

***

ಅನೇಕ ವರ್ಷಗಳಿಂದ ಗ್ರಾಮದಲ್ಲಿ ಏನೂ ಬದಲಾವಣೆಯಾಗಿಲ್ಲ. ಪಂಚಾಯತಿ ಸದಸ್ಯರಾದವರು ಸಮರ್ಪಕ ರೀತಿಯಲ್ಲಿ ಕೆಲಸ ಮಾಡದೇ ಇದ್ದುದರಿಂದ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣ ಆಗಿಲ್ಲ. ಈ ಬಾರಿ ಹೊಸಬರಿಗೆ ಅವಕಾಶ ನೀಡಲು ಚಿಂತಿಸಿದ್ದೇವೆ

– ನಾಗರಾಜು, ಮೇಲುಕಾಮನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು

***

ಕಳೆದ ಬಾರಿ ಗೆದ್ದವರು ಗ್ರಾಮವನ್ನು ಅಭಿವೃದ್ದಿ ಮಾಡಿಲ್ಲ. ಅವರೇ ಅಭಿವೃದ್ಧಿಯಾಗಿದ್ದಾರೆ. ಆ ಕಾರಣದಿಂದ ನಾವು ಈ ಬಾರಿ ಅಭಿವೃದ್ಧಿ ಮಾಡುವವರಿಗೆ ಮಾತ್ರ ಮತವನ್ನು ಹಾಕಲು ನಿರ್ಧರಿಸಿದ್ದಾರೆ

– ಶಿವು, ಸರಗೂರು, ಕೊಳ್ಳೇಗಾಲ ತಾಲ್ಲೂಕು

ಮೊದಲ ಹಂತ: ಇಂದು ಅಧಿಸೂಚನೆ

ಜಿಲ್ಲೆಯಲ್ಲಿ 22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ (ಡಿ.7) ಅಧಿಸಚನೆ ಹೊರಡಿಸಲಿದ್ದಾರೆ.

ಚಾಮರಾಜನಗರ ತಾಲ್ಲೂಕಿನ 43 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, 1,241 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭವಾಗಲಿದೆ. 11ರಂದು ಸಲ್ಲಿಕೆಗೆ ಕೊನೆಯ ದಿನ. 12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ವಾಪಸ್‌ಗೆ 14ರಂದು ಕೊನೆ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.