ADVERTISEMENT

ಯುಗಾದಿ ಹಾದಿಗೆ ‘ಗೋಸಂಪಿಗೆ’ ಗಾದಿ

ಶಾರ್ವರಿ ಸಂವತ್ಸರದಲ್ಲಿ ಬಣ್ಣದ ಲತೆಗಳ ಆರತಿ ಬೆಳಗುವ ಪ್ರಕೃತಿ

ನಾ.ಮಂಜುನಾಥ ಸ್ವಾಮಿ
Published 21 ಮಾರ್ಚ್ 2020, 19:45 IST
Last Updated 21 ಮಾರ್ಚ್ 2020, 19:45 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ–ಕಾರಾಪುರ ಮಠದ ರಸ್ತೆಯಲ್ಲಿ ಯುಗಾದಿಗೂ ಮೊದಲು ಅರಳಿದ ಹಳದಿ ಗೋಸಂಪಿಗೆ ಚಲುವ ಸೂಸಿದೆ
ಯಳಂದೂರು ತಾಲ್ಲೂಕಿನ ಕಂದಹಳ್ಳಿ–ಕಾರಾಪುರ ಮಠದ ರಸ್ತೆಯಲ್ಲಿ ಯುಗಾದಿಗೂ ಮೊದಲು ಅರಳಿದ ಹಳದಿ ಗೋಸಂಪಿಗೆ ಚಲುವ ಸೂಸಿದೆ   

ಯಳಂದೂರು: ಯುಗಾದಿಯ ಪರ್ವ ಕಾಲದಲ್ಲಿಪರಿಸರದ ಬಣ್ಣ–ಬೆಡಗಿನ ಜೊತೆ ಮನುಕುಲಕ್ಕೆ ಮೋಡಿ ಮಾಡುವ ನೂರಾರು ಪುಷ್ಪಗಳು ಪಲ್ಲವಿಸುತ್ತವೆ.ಹಬ್ಬದ ಚಲುವನ್ನು, ಬೆಡಗಿಯರ ಸೌಂದರ್ಯವನ್ನು ಏಕ ಕಾಲದಲ್ಲಿ ಹೆಚ್ಚಿಸುವ ಹೂಗಳಲ್ಲಿ ‘ಗೋಸಂಪಿಗೆ’ಗೆವಿಶಿಷ್ಟ ಸ್ಥಾನವಿದೆ.

ತಾಲ್ಲೂಕಿನ ಕಂದಹಳ್ಳಿ, ಅಂಬಳೆ, ಬಿಳಿಗಿರಿರಂಗನಬನಗಳಲ್ಲಿ ಅರಳುವ ವಿಶಿಷ್ಟ ಲತೆ ಗೋಸಂಪಿಗೆ. ಇದು ಯುಗಾದಿಗೆ ಶುಭಸೂಚಕ ಮತ್ತು ಸೌಂದರ್ಯದ ಪ್ರತೀಕ. ಬಿಳಿ, ತಿಳಿ ಹಳದಿ, ಕೆಂಪು, ತಿಳಿಗುಲಾಬಿ, ಕೇಸರಿ, ನೇರಳೆ... ಬಣ್ಣಗಳಲ್ಲಿ ಕಂಗೊಳಿಸುತ್ತದೆ.

ವರ್ಣ ಯಾವುದಿದ್ದರೂ, ಎಸಳುಗಳ ನಡುವೆ ಗಾಡ ಹಳದಿ ವರ್ಣ ಇರುತ್ತದೆ ಎಂದು ಹೇಳುತ್ತಾರೆ ಪುಷ್ಪತಜ್ಞರು.

ADVERTISEMENT

ಯುಗಾದಿಯಂದು ಹೊನ್ನೇರು ಕಟ್ಟುವಾಗ ಗೋಸಂಪಿಗೆ ದಳಗಳನ್ನು ಹಾಕುತ್ತಾರೆ. ಘಟ್ಟ ಪ್ರದೇಶಗಳಲ್ಲಿ ವಿಷು ಕಣಿಯ ಜೊತೆ ಗೋಸಂಪಿಗೆ ಗೊಂಚಲು ಕಟ್ಟುತ್ತಾರೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಧುವರರು ಹಳದಿ ವರ್ಣದ ಗೋಸಂಪಿಗೆ ಹಾರ ವಿನಿಮಯ ಮಾಡಿಕೊಳ್ಳುತ್ತಾರೆ.

ಇದರ ವೃಕ್ಷ ಬಾವಿಕಟ್ಟೆ ಬಳಿ ಇದ್ದರೆ ನಾಗರಹಾವು ಹಾದಿ ಬದಲಿಸುತ್ತದೆ ಎಂದು ನಂಬುತ್ತಾರೆ ಸೋಲಿಗರು.ಯುಗಾದಿ ಹಬ್ಬಕ್ಕೂ ಮೊದಲು ಗೆಲ್ಲಿನ ತುದಿಯಲ್ಲಿ ದಪ್ಪ ಎಲೆಗಳ ನಡುವೆ ಹೂ ಗೊಂಚಲು ವಿಕಸಿಸುತ್ತವೆ.

‘ಎಲೆ, ಹೂ, ಟಿಸಿಲನ್ನು ಬೇರ್ಪಡಿಸಿದರೆ ಹಾಲಿನಂತಹ ದ್ರವ ಒಸರುತ್ತದೆ. ಮಕರಂದ ಇಲ್ಲದ ಪುಷ್ಪದ ಸುವಾಸನೆಗೆ ಚಿಟ್ಟೆಗಳು ಆಕರ್ಷಿತವಾಗುತ್ತವೆ. ಇದು ಇವುಗಳ ಪರಾಗಸ್ಪರ್ಶ ಕ್ರಿಯೆಗೆ ಸಹಾಯಕವಾಗುತ್ತದೆ. ಗೋಸಂಪಿಗೆ ಮರದ ಬೇರಿನ ತೊಗಟೆ, ಎಲೆ, ಹೂವು, ಗಿಡದ ಹಾಲನ್ನು ಮನೆ ಮದ್ದಾಗಿಬಳಸುತ್ತಿದ್ದರು. ಜ್ವರ, ಕೆಮ್ಮು, ಮಲಬದ್ಧತೆ, ಅತಿಸಾರ, ಭೇದಿ, ಹಲ್ಲುನೋವು, ಅಸ್ತಮಾ, ಮಧುಮೇಹ ಮತ್ತು ಚರ್ಮ ವ್ಯಾಧಿಗಳಿಗೆ ಉಪಯುಕ್ತ. ಹೂವಿನ ಎಣ್ಣೆಯನ್ನು ಭಯ, ಆತಂಕ, ನಿದ್ರಾಹೀನತೆ, ನಡುಕ ದೂರ ಮಾಡಲು ಆಯುರ್ವೇದಲ್ಲಿ ಬಳಸುವ ಉಲ್ಲೇಖ ಕಂಡುಬಂದಿದೆ’ ಎಂದು ಹೇಳುತ್ತಾರೆ ಏಟ್ರೀ ಸಂಶೋಧಕ ಮಾದೇಗೌಡ.

ದೇಶ–ವಿದೇಶ:ಹವಾಯಿ ದ್ವೀಪದಲ್ಲಿ ಈ ಪುಷ್ಪ ಪ್ರತಿಷ್ಠೆಯ ದ್ಯೋತಕ. ಕಿವಿ ಆಭರಣ, ಅಂಗಿಯ ಮೇಲೆಹೂವಿನ ಚಿತ್ತಾರ ಬಿಡಿಸಿ ಧರಿಸುತ್ತಾರೆ. ಪೋಲಿನೇಶಿಯಾ ಕನ್ನೆಯರು ವಿವಾಹವಾದರೆ ಎಡಬದಿ ಇಟ್ಟುಕೊಳ್ಳುತ್ತಾರೆ.ಇಂಡೊನೇಷ್ಯಾ ಹುಡುಗಿಯರು ಹೇರ್‌ಕ್ಲಿಪ್‌, ಹೇರ್‌ಬ್ಯಾಂಡ್ ಹಾಗೂ ಅಲಂಕಾರಿಕ ಸಾಮಗ್ರಿಗಳಲ್ಲಿ ಗೋಸಂಪಿಗೆ ವಿನ್ಯಾಸ ಇರುವಂತೆ ನೋಡಿಕೊಳ್ಳುತ್ತಾರೆ.

ಭಾರತೀಯರು ಸಮರ್ಪಣೆ ಮತ್ತು ಭಕ್ತಿಯ ಸಂಕೇತವಾಗಿ ಗೋಸಂಪಿಗೆಯನ್ನು ಕಾಣುತ್ತಾರೆ. ಮಾಯನ್ನರಿಗೆ ಹೂವಿನ ಅರಳುವಿಕೆ ಹುಟ್ಟು–ಸಾವಿನ ಸಂಕೇತ. ನಿಕಾರಾಗುವದಲ್ಲಿ ಕೆಂಪು ಸಂಪಿಗೆಯನ್ನು, ಲಾವೋಸ್‌ನಲ್ಲಿ ಹಳದಿ ಸಂಪಿಗೆಯನ್ನು ರಾಷ್ಟ್ರೀಯ ಪುಷ್ಪವಾಗಿಸಿವೆ. ಚೀನಿಯರಿಗೆ ಅಪರೂಪದ ಸಂಕುಲ.

ಅಳಿವಿನಂಚಿನ ಹೂವಿನ ಅಸ್ಮಿತೆ ಉಳಿಸಬೇಕು

ತನ್ನ ಸ್ನಿಗ್ಧ ಚೆಲುವು ಮತ್ತು ಪರಿಮಳ ಸೂಸುತ್ತ ಶತಮಾನಗಳ ಕಾಲ ತನ್ನ ಅಸ್ತಿತ್ವ ಉಳಿಸಿಕೊಂಡ ಗೋಸಂಪಿಗೆಗೀಗಒತ್ತುವರಿ ಮತ್ತು ಅಭಿವೃದ್ಧಿಯ ನಾಗಲೋಟಕ್ಕೆ ಸಿಲುಕಿ ಅಳಿವಿನಂಚು ತಲುಪಿದೆ. ಇಂತಹ ದೈವಿಕ ಮತ್ತು ಸಾಂಸ್ಕೃತಿಕ ಮಹತ್ವದ ವೃಕ್ಷಗಳನ್ನು ಉಳಿಸಬೇಕುಎನ್ನುವುದುಪರಿಸರ ಪ್ರಿಯರ ಒತ್ತಾಸೆಯಾಗಿದೆ.

ಹಲವು ಹೆಸರು: ರಾಜ್ಯದಲ್ಲಿ ಈ ಹೂವನ್ನು ಗೋಸಂಪಿಗೆ, ಮರಎಕ್ಕ, ಭೂತಸಂಪಿಗೆ, ನಾಯಿಸಂಪಿಗೆ, ದೇವಕಣಗಿಲೆ, ಮಂದಿರಗಿಡ, ಪಗೋಡ, ಮರಗಣಿಗಲೆ ಎನ್ನುತ್ತಾರೆ. ಇಂಗ್ಲೀಷಿನಲ್ಲಿ ‘ಪ್ಲುಮೇರಿಯ’ ಹೆಸರಿದೆ.

ವೈಜ್ಞಾನಿಕವಾಗಿ ‘ಫ್ರಾಂಜಿಪಾನಿ’. ‘ಆಪೋಸೈನೇಸಿ’ ಕುಟುಂಬಕ್ಕೆ ಸೇರಿದೆ. ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕಗಳಿಗೆ ಇದು ಸ್ವಂತ. ಆದರೂ, ದಕ್ಷಿಣ ಏಷ್ಯಾದಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.