ಚಾಮರಾಜನಗರ: ‘ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಬಂದ ನಂತರ ಕೋವಿಡ್–19 ಪರೀಕ್ಷೆ ವೇಗ ಪಡೆದಿದ್ದು, ವರದಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಬರದಿ ಬಂದ ತಕ್ಷಣ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ಸೋಮವಾರ ಹೇಳಿದರು.
ಜಿಲ್ಲಾ ಪಂಚಾಯಿತಿಯ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಕೋವಿಡ್–19 ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ ಅವರು, ‘ಜಿಲ್ಲೆಯಲ್ಲಿ ಪ್ರತಿ ದಿನ 750 ಪರೀಕ್ಷೆಗಳನ್ನು ನಡೆಸಲು ಸರ್ಕಾರ ಗುರಿ ನೀಡಿದೆ. 500ರಿಂದ 600ರವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್ಚು ಪರೀಕ್ಷೆಗಳು ನಡೆಯುತ್ತಿರುವುದರಿಂದ 30ರಿಂದ 35 ಪ್ರಕರಣಗಳು ಪ್ರತಿ ದಿನ ವರದಿಯಾಗುತ್ತಿದೆ’ ಎಂದರು.
ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕೊಟ್ಟು ಐದಾರು ದಿನಗಳಾದರೂ ವರದಿ ಬರುತ್ತಿಲ್ಲ ಎಂಬ ಮಾಹಿತಿ ಇದೆಯಲ್ಲಾ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಲೇಖಾ ಅವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್ ಅವರು, ‘ಮೊದಲು ಪರೀಕ್ಷೆ ವರದಿ ಬರುವಾಗ ವಿಳಂಬವಾಗುತ್ತಿದ್ದುದು ನಿಜ. ಆದರೆ, ಈಗ ರ‍್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಪರೀಕ್ಷೆ ನಡೆಸುವುದರಿಂದ ಒಂದು ಗಂಟೆಯಲ್ಲಿ ವರದಿ ಬರುತ್ತಿದೆ’ ಎಂದರು.
ಡಾ.ಎಂ.ಸಿ.ರವಿ ಅವರು ಮಾತನಾಡಿ, ‘ಪರೀಕ್ಷೆ ನಡೆಸಿದ ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಸೋಂಕು ದೃಢಪಟ್ಟರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ’ ಎಂದರು.
ಗುಣಮುಖರಾಗಿ ಮನೆಗೆ ತೆರಳಿದವರಲ್ಲಿ ಮತ್ತೆ ರೋಗ ಲಕ್ಷಣಗಳು ಕಾಣಿಸಿಕೊಂಡಿವೆಯೇ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಹಾಗೂ ಇತರರು ಕೇಳಿದ್ದಕ್ಕೆ, ‘ಇದುವರೆಗೆ ಅಂತಹ ಪ್ರಕರಣಗಳು ವರದಿಯಾಗಿಲ್ಲ. ಸೋಂಕಿತರೆಲ್ಲ ಗರಿಷ್ಠ 10 ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಭಯವಿದೆ. ಅದನ್ನು ಹೋಗಲಾಡಿಸಬೇಕಾಗಿದೆ’ ಎಂದು ಡಾ.ಎಂ.ಸಿ.ರವಿ ಅವರು ಹೇಳಿದರು.
21 ಸಂಪರ್ಕಕ್ಕೆ ಬಾಕಿ:ಸೆಸ್ಕ್‌ನ ಚಾಮರಾಜನಗರ ಉಪವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಕಾರ್ಯನಿರ್ವಾಹಕ ಎಂಜಿನಿಯರ್ ಪೂರ್ಣಚಂದ್ರ ತೇಜಸ್ವಿ ಅವರು, ‘ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ನಮ್ಮ ಉಪವಿಭಾಗ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. 21 ಫಲಾನುಭವಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕೊಡುವುದು ಬಾಕಿ ಇದೆ. 2018–19ನೇ ಸಾಲಿನ ಎಲ್ಲ ಫಲಾನುಭವಿಗಳಿಗೆ ನೀಡಲಾಗಿದೆ. 2019–20ನೇ ಸಾಲಿನಲ್ಲಿ ಏಳು ಫಲಾನುಭವಿಗಳಿಗೆ ಸಂಪರ್ಕ ಕೊಡಬೇಕಿದೆ. ಉಳಿದವೆಲ್ಲವೂ 2020–21ನೇ ಸಾಲಿನವುಗಳು. ಆಗಸ್ಟ್ ವೇಳೆಗೆ ಎಲ್ಲರಿಗೂ ಸಂಪರ್ಕ ನೀಡುತ್ತೇವೆ’ ಎಂದು ಹೇಳಿದರು.
ವಿದ್ಯುತ್ ಪರಿವರ್ತಕಗಳ ಸಮಸ್ಯೆಯ ಬಗ್ಗೆಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷ ಕೆ.ಪಿ.ಸದಾಶಿವ ಮೂರ್ತಿ ಅವರು ಪ್ರಸ್ತಾಪಿಸಿದಾಗ ‘ನಮ್ಮಲ್ಲಿ ಈಗ 70 ಪರಿವರ್ತಕಗಳು ಹೆಚ್ಚುವರಿಯಾಗಿವೆ. ದೂರು ಬಂದರೆ 48 ಗಂಟೆಗಳಲ್ಲಿ ಹೊಸ ಪರಿವರ್ತಕ ಅಳವಡಿಸುತ್ತೇವೆ’ ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದರು.
ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ,ಸಾಮಾಜಿಕ ನ್ಯಾಯ ಸ್ಥಾಯಿಸಮಿತಿಗೆ ಅಧ್ಯಕ್ಷ ರಮೇಶ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಭತ್ತ ಬಿತ್ತನೆಗೆ ಸಿದ್ಧತೆ
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ ಅವರು ಬಿತ್ತನೆ, ಬೆಳೆ ವಿಮೆ, ಕೃಷಿ ಸಮ್ಮಾನ್ ಯೋಜನೆ ಹಣ ಪಾವತಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಬಿತ್ತನೆ ಚೆನ್ನಾಗಿ ನಡೆಯುತ್ತಿದೆ. ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಅವಧಿಯಲ್ಲಿ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, 73,088 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಶೇಕಡವಾರು ಲೆಕ್ಕದಲ್ಲಿ ಶೇ 61ರಷ್ಟು ಬಿತ್ತನೆಯಾಗಿದೆ. ಸೂರ್ಯಕಾಂತಿ, ನೆಲಗಡಲೆ ಜಾಸ್ತಿ ಬಿತ್ತನೆ ಆಗಿದೆ’ ಎಂದು ಹೇಳಿದರು.
‘ಸದ್ಯ ರಾಗಿ, ಮುಸುಕಿನ ಜೋಳವನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. ಕಬಿನಿ ನೀರನ್ನು ಕಾಲುವೆಗೆ ಹರಿಸಲು ತೀರ್ಮಾನಿಸಿರುವುದರಿಂದ ಕೊಳ್ಳೇಗಾಲ ಹಾಗೂ ಯಳಂದೂರು ಭಾಗಗಳಲ್ಲಿ ರೈತರು ಭತ್ತದ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದರು.
‘ರಸಗೊಬ್ಬರ ಕೊರತೆ ಇಲ್ಲ. ಈ ವರ್ಷ 7000 ಟನ್‌ಗಳಷ್ಟು ಅಗತ್ಯವಿದೆ. 6,500 ಟನ್ ದಾಸ್ತಾನು ಇದೆ. ಇನ್ನೂ 400 ಟನ್ ಬರಲಿದೆ. ಇದುವರೆಗೆ 630 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ’ ಎಂದು ಚಂದ್ರಕಲಾ ಅವರು ಮಾಹಿತಿ ನೀಡಿದರು.
‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 1.04 ಲಕ್ಷ ರೈತರಿಗೆ ಮೊದಲ ಕಂತು ₹25.05 ಕೋಟಿ ಪಾವತಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಕಳೆದ ವರ್ಷದ ಐದು ಕಂತುಗಳು ಬಂದಿಲ್ಲ. 2018–19ರ ಮುಂಗಾರು ಹಂಗಾಮಿನಲ್ಲಿ 25,826 ಮಂದಿ ಬೆಳೆ ವಿಮೆ ಮಾಡಿಸಿಕೊಂಡಿದ್ದು ನೆರೆ ಹಾವಳಿಯಿಂದ ತತ್ತರಿಸಿರುವ 64 ರೈತರಿಗೆ ₹34 ಲಕ್ಷ ಬಂದಿದೆ. ಉಳಿದವರಿಗೆ ಇನ್ನು ಒಂದು ವಾರದಲ್ಲಿ ಬರಲಿದೆ. 2019–20ರ ಹಿಂಗಾರಿನಲ್ಲಿ 1,255 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.