ADVERTISEMENT

ಅಕ್ರಮ ಅಂಗಡಿ ತೆರವು: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 10:05 IST
Last Updated 11 ಜನವರಿ 2012, 10:05 IST

ಚಿಂತಾಮಣಿ: ಸರ್ಕಾರಿ ಜಮೀನಿನಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಯತ್ನಿಸಿದಾಗ ಅಡ್ಡಿ ಮಾಡಿದ ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ನಗರದ ಕೋಲಾರ ರಸ್ತೆಯ ಅರಳಿಕಟ್ಟೆ ಮುಂಭಾಗದ ಸರ್ಕಾರಿ ಜಮೀನಿನಲ್ಲಿ ಇಟ್ಟಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವು ಗೊಳಿಸಲು ಮಂಗಳವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರೊಂದಿಗೆ ಮುಂದಾದರು. ಮಾಲೀಕರು ಇದನ್ನು ವಿರೋಧಿಸಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ಅಧಿಕಾರಿಗಳು ಜೆಸಿಬಿ ನೆರವಿನಿಂದ ಅಕ್ರಮವಾಗಿ ಇಟ್ಟಿದ್ದ ಅಂಗಡಿಗಳನ್ನು ತೆರವುಗೊಳಿಸಿದರು. ಪೊಲೀಸರು 3 ಜನರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಕೆಲವು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಸಾಮಾನುಗಳನ್ನು ಬೇರೆಡೆ ಸಾಗಿಸಿದರು.

ತಹಶೀಲ್ದಾರ್ ಕೃಷ್ಣಮೂರ್ತಿ, ಎಎಸ್‌ಪಿ ರಮೇಶ್‌ಬಾನೂತ್, ಲೋ ಕೋಪಯೋಗಿ ಇಲಾಖೆ ಅಧಿಕಾರಿ ಗಳು ಕಾರ್ಯಾಚರಣೆ ಉಸ್ತುವಾರಿ ನೋಡಿ ಕೊಂಡರು. ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಿ ಅಹಿತಕರ ಘಟನೆ ಜರುಗ ದಂತೆ ನೋಡಿಕೊಳ್ಳಲಾಯಿತು.

ಕೆಲವರು ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಿ ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಅಂಗಡಿ ನಡೆಸುವವರಿಗೆ ನೋಟಿಸ್ ನೀಡಿ ತೆರವು ಕಾರ್ಯಕ್ರಕ್ಕೆ ಪ್ರಯತ್ನಿಸಿದ್ದರೂ ಕೆಲವರ ಒತ್ತಡದಿಂದ ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಉಪವಿಭಾಗಾಧಿಕಾರಿ ಸತೀಶ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲನೆ ನಡೆಸಿದರು. ಅಧಿಕಾರಿಗಳು ಮನ್ಸೂ ಚನೆ ನೀಡದೆ ಬಡವರ ಅಂಗಡಿಗಳನ್ನು ತೆರವುಗೊಳಿಸಿ ದ್ದಾರೆಎಂದು ಅಂಗಡಿಗಳ ಮಾಲೀಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.