ಚಿಕ್ಕಬಳ್ಳಾಪುರ: `ಇವತ್ತಿನ ದೇಶದ ಸ್ಥಿತಿ ನೋಡಿದರೆ, ತುಂಬಾ ನೋವಾಗುತ್ತದೆ. ನಾವು ಯಾಕಾದರೂ ಬದುಕಿದ್ದೆವೋ ಎಂದು ಅನ್ನಿಸುತ್ತದೆ. ನಮಗೆ ಯಾರೂ ಹೇಳೋರಿಲ್ಲ-ಕೇಳೋರಿಲ್ಲ. ದೇಶವು ರಾಮರಾಜ್ಯವಾಗುತ್ತದೆ ಎಂಬ ಭಾವನೆಯಲ್ಲಿ ಹೋರಾಟ ಮಾಡಿದೆವು. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ದೇಶ ರಾಮರಾಜ್ಯ ಆಗುವುದರ ಬದಲು ರಾವಣರಾಜ್ಯ ಆಗಿದೆ~.
ಹೀಗೆ ಮನದಾಳದ ಸಂಕಟ ತೋಡಿಕೊಂಡವರು ಸ್ವಾತಂತ್ರ್ಯ ಹೋರಾಟಗಾರ ಡಿ.ಎ.ವೆಂಕಟರಾಯರೆಡ್ಡಿ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿ ದೇಶದ ಇಂದಿನ ಸ್ಥಿತಿಗತಿ ಬಗ್ಗೆ ವಿವರಿಸಿದರು.
`ಹೋರಾಟದಲ್ಲಿ ತೊಡಗಿಕೊಂಡಿದ್ದ ನಾವು ದೇಶವನ್ನು ಹೀಗೆ ಕಟ್ಟಬೇಕು, ಹಾಗೆ ಮಾಡಬೇಕು ಎಂದೆಲ್ಲ ಕನಸು ಕಂಡಿದ್ದೆವು. ಆದರೆ ದೇಶದ ಇಂದಿನ ಪರಿಸ್ಥಿತಿ ನೋಡಿದರೆ, ಕನಸು ನನಸಾಗುವುದು ಕಷ್ಟವೆಂದು ಬೇಸರವಾಗುತ್ತದೆ. ಈಗಿನ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನೋಡಿದದರೆ ತುಂಬ ನೋವಾಗುತ್ತದೆ~ ಎಂದು ಅವರು ಹೇಳಿದರು.
`ಸ್ವಾತಂತ್ರ್ಯ ಹೋರಾಟ ಮಾಡಿದ ನಮ್ಮನ್ನು ಯಾರೂ ಗೌರವಿಸುವುದಿಲ್ಲ. ನಮ್ಮ ಮಾತುಗಳನ್ನು ಕೇಳುವ ಸೌಜನ್ಯವನ್ನೂ ಸಹ ಯಾರು ತೋರುವುದಿಲ್ಲ. ಈ ಎಲ್ಲ ಸಂಗತಿಗಳಿಂದ ನಮ್ಮಂತಹರವರಿಗೆ ತುಂಬ ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.
ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೆ.ರಾಮಸ್ವಾಮಿಯವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. `ಇಂದಿನ ಭ್ರಷ್ಟ ವ್ಯವಸ್ಥೆ ನೋಡಿದರೆ, ತುಂಬ ಅಸಹನೀಯ ಅನ್ನಿಸುತ್ತದೆ. ಇಂಥ ದುರ್ಗತಿ ನೋಡಲೆಂದೇ ನಾವು ಇನ್ನೂ ಬದುಕಿದ್ದೇವೆಯೇ ಎಂದು ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.