ADVERTISEMENT

ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ಗೆಲುವು

ಶಿಡ್ಲಘಟ್ಟ ಪುರಸಭೆ ಚುನಾವಣೆಯಲ್ಲಿ ಹೈ ಡ್ರಾಮಾ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 6:13 IST
Last Updated 18 ಮಾರ್ಚ್ 2014, 6:13 IST

ಶಿಡ್ಲಘಟ್ಟ: ಪಟ್ಟಣದಲ್ಲಿ ಸೋಮವಾರ ನಡೆದ ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಜೆಡಿಎಸ್ ಸದಸ್ಯರೊಂದಿಗೆ ಪುರಸಭೆ ಆವರಣಕ್ಕೆ ಬಂದ ಸದಸ್ಯೆ ವಹೀದಾ, ಏಕಾಏಕಿ ಕಾಂಗ್ರೆಸ್‌ ಮುಖಂಡರಿದ್ದ ಗುಂಪಿ­ನೆಡೆಗೆ ಓಡಿದ್ದು ಹಲವು ಊಹಾ­ಪೋಹಗಳನ್ನು ಹುಟ್ಟುಹಾಕಿತು.

ಇಲ್ಲಿನ ಪುರಸಭೆಗೆ ಹದಿನೇಳನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಮುಷ್ಠರಿ ತನ್ವೀರ್‌ ಅಧ್ಯಕ್ಷೆಯಾಗಿ, ಎಂಟನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ಸುಮಿತ್ರಾ ರಮೇಶ್‌ ಉಪಾಧ್ಯಕ್ಷೆಯಾಗಿ ಆಯ್ಕೆ­ಯಾದರು.

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸ­ಲಾಗಿತ್ತು. ಪರಿಶಿಷ್ಟ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್‌ ಸುಮಿತ್ರಾ ರಮೇಶ್‌ ಬಹುಮತದ ಕೊರತೆ­ಯಿ­ದ್ದರೂ ಉಪಾಧ್ಯಕ್ಷೆ ಆಗುವುದು ಬಹು­ತೇಕ ಖಚಿತವಾಗಿತ್ತು.

27 ಮಂದಿ ಸದಸ್ಯ ಬಲದ ಪುರ­ಸಭೆಯಲ್ಲಿ ಕಾಂಗ್ರೆಸ್‌ 14, ಜೆಡಿಎಸ್‌ 11, ಬಿಜೆಪಿ 1 ಹಾಗೂ ಪಕ್ಷೇತರ ಅಭ್ಯರ್ಥಿ ಒಬ್ಬರು ಇದ್ದಾರೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್‌ನಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲ­ವಿತ್ತು. 

ಕೆಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರೊಂದಿಗೆ ಕಾಂಗ್ರೆಸ್‌ನ 13 ಸದ­ಸ್ಯರು ಮಿನಿಬಸ್‌ನಲ್ಲಿ ಬಂದಿಳಿದರು. ನಂತರ ಶಾಸಕ ಎಂ.ರಾಜಣ್ಣ ಅವ­ರೊಂದಿಗೆ ಜೆಡಿಎಸ್‌ನ 11 ಸದಸ್ಯರು, ಬಿಜೆಪಿಯ ಒಬ್ಬ ಸದಸ್ಯ, ಪಕ್ಷೇತರ ಸದಸ್ಯ ಹಾಗೂ ಕಾಂಗ್ರೆಸ್‌ನ 26 ನೇ ವಾರ್ಡ್‌ ಸದಸ್ಯೆ ವಹೀದಾ ಆಗಮಿಸಿದರು.

ಜೆಡಿಎಸ್‌ ಸದಸ್ಯರೊಂದಿಗೆ ಆಗಮಿ­ಸಿದ ಕಾಂಗ್ರೆಸ್‌ ಸದಸ್ಯೆ ವಹೀದಾ ನೋಡ­ನೋಡುತ್ತಿದ್ದಂತೆ ಪುರಸಭೆ ಹೊರಗೆ ನಿಂತಿದ್ದ ಕಾಂಗ್ರೆಸ್‌ ಮುಖಂಡರ ಗುಂಪಿನ ಕಡೆಗೆ ಓಡಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಆಕೆಗೆ ಭದ್ರತೆ ನೀಡಿ ಕಚೇರಿಯೊಳಗೆ ಕರೆದೊಯ್ದರು.
ಶಾಸಕರು, ಬಿಜೆಪಿ ಸದಸ್ಯ, ಪಕ್ಷೇತರ ಸದಸ್ಯರ ಮತದೊಂದಿಗೆ ಒಬ್ಬ ಕಾಂಗ್ರೆಸ್‌ ಸದಸ್ಯೆಯನ್ನು ಮನವೊಲಿಸಿದ್ದ ಜೆಡಿಎಸ್‌, ಹದಿನೈದು ಮತ ಪಡೆದು ಅಧ್ಯಕ್ಷ ಸ್ಥಾನ ಏರಲು ಪ್ರಯತ್ನಿಸಿತ್ತು. ಆದರೆ ಜೆಡಿಎಸ್‌ ಕಡೆಗೆ ವಾಲಿದ್ದ ಅಧ್ಯಕ್ಷ ಗಾದಿ, ಸ್ವಲ್ಪ­ದರಲ್ಲೇ ಕಾಂಗ್ರೆಸ್‌ ಪಾಲಾಯಿತು.

ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಡೆಯಿಂದ ಕಾಂಗ್ರೆಸ್‌ ಮುಖಂಡ ತೋಪಡಾ ನಾಗರಾಜ್‌ ಅವರು ಪಕ್ಷೇ­ತರ ಅಭ್ಯರ್ಥಿ ಕಿಶನ್‌ ಜೆಡಿಎಸ್‌ ಬೆಂಬ­ಲಿಸಿದ್ದಕ್ಕೆ ಅವಾಚ್ಯ ಶಬ್ದದಿಂದ ನಿಂದಿ­ಸಿದರು ಎಂಬ ಕಾರಣಕ್ಕೆ ಜೆಡಿಎಸ್‌ ಸದ­ಸ್ಯರು ಕೂಗಾಡಿದ ಘಟನೆ ನಡೆಯಿತು.

ನಾಗರಾಜ್ ಅವರನ್ನು ಬಂಧಿಸಬೇಕು ಎಂದು ಜೆಡಿಎಸ್‌ ಸದಸ್ಯರು ಪೊಲೀಸ­ರನ್ನು ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಕೆ.ಎಚ್‌.­ಮುನಿ­ಯಪ್ಪ, ಚುನಾವಣೆ ನಡೆಯುವ ವೇಳೆ ಕಚೇರಿ ಬಳಿ ಬಂದು ಈ ರೀತಿ ಕೆಟ್ಟದಾಗಿ ಮಾತನಾಡುವುದು, ನಡೆದು­ಕೊಳ್ಳುವುದು ತಪ್ಪು ಎಂದು ಹೇಳಿದರು. ಕೋಪಗೊಂಡಿದ್ದ ಜೆಡಿಎಸ್‌ ಸದಸ್ಯರನ್ನು ಸಮಾಧಾನಗೊಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮುಷ್ಠರಿ ತನ್ವೀರ್‌ ಹಾಗೂ ಜೆಡಿಎಸ್‌ನ ಪ್ರಭಾವತಿ ಸುರೇಶ್‌ ಪೈಪೋಟಿ ನಡೆ­ಸಿದ್ದರು. ಮುಷ್ಠರಿ ತನ್ವೀರ್‌ 15 ಮತ ಪಡೆದು, ಜೆಡಿಎಸ್‌ನ ಪ್ರಭಾವತಿ ಸುರೇಶ್‌ ಅವರನ್ನು 1 ಮತದ ಅಂತರದಿಂದ ಪರಾಭವಗೊಳಿಸಿದರು.

ಚುನಾವಣೆ ಅಧಿಕಾರಿಯಾಗಿದ್ದ ತಹ­ಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ. ಶಾಸಕ ಎಂ.ರಾಜಣ್ಣ, ಪುರಸಭೆ ಮುಖ್ಯಾ­ಧಿಕಾರಿ ರಾಮ್‌ಪ್ರಕಾಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸಮೂರ್ತಿ, ಶಿರ­ಸ್ತೇದಾರ್‌ ಪ್ರಕಾಶ್‌ ಹಾಜರಿದ್ದರು.

‘ಗಲತ್‌ ಕರ್‌ನಕ್ಕೋ, ಗಲತ್‌ ಕರ್‌ನಕ್ಕೋ’

ಶಿಡ್ಲಘಟ್ಟ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವು­ದಕ್ಕೂ ಮುನ್ನ ಕಾಂಗ್ರೆಸ್‌ ಸದಸ್ಯೆ ವಹೀದಾ ಅವರಿಗೆ ಕೆಲವರು ‘ಗಲತ್‌ ಕರ್‌­ನಕ್ಕೋ, ಗಲತ್‌ ಕರ್‌ನಕ್ಕೋ’ ಎಂದು ಬುದ್ಧಿ ಮಾತು ಹೇಳಿದ ಘಟನೆ ಸೋಮವಾರ ನಡೆಯಿತು.

ಕಾಂಗ್ರೆಸ್‌ನಿಂದ ಪ್ರತ್ಯೇಕಗೊಂಡ ವಹೀದಾ ಅವರು ಶಾಸಕ ಎಂ.ರಾಜಣ್ಣ ನೇತೃತ್ವದ ಜೆಡಿಎಸ್‌ ಸದಸ್ಯರಿದ್ದ ವಾಹನದಿಂದ ಕೆಳಗಿಳಿದರು. ಮರುಕ್ಷಣವೇ ಜೆಡಿಎಸ್ ತಂಡದಿಂದ ದೂರಗೊಂಡು ಕಾಂಗ್ರೆಸ್‌ ಮುಖಂಡರ ಗುಂಪಿನತ್ತ ಓಡಿ­ದರು. ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾದ ಜೆಡಿಎಸ್‌ ಸದಸ್ಯರು ಆಕೆಯನ್ನು ಮತ್ತೊಮ್ಮೆ ತಂಡದಲ್ಲಿ ಸೇರಿಸಿಕೊಳ್ಳಲು ಯತ್ನಿಸಿದರು. ಆ ಸಮಯ­ದಲ್ಲೇ ಕೆಲವರು ‘ಗಲತ್‌ ಕರ್‌ನಕ್ಕೋ, ಗಲತ್‌ ಕರುನಕ್ಕೋ’ ಎಂದು ಸೂಕ್ಷ್ಮವಾಗಿ ಹೇಳಿದರು. ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಕಾನ್‌­ಸ್ಟೆಬಲ್‌ ಮಧ್ಯೆಪ್ರವೇಶಿಸಿದರು. ವಹೀದಾ ಅವರನ್ನು ಸುರಕ್ಷಿತವಾಗಿ ಪುರಸಭೆ­ಯೊಳಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT