ADVERTISEMENT

ಮಳೆಗಾಗಿ `ಹುಡುಗರ' ಮದುವೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 8:57 IST
Last Updated 6 ಸೆಪ್ಟೆಂಬರ್ 2013, 8:57 IST
ಮಳೆಗಾಗಿ ಶಿಡ್ಲಘಟ್ಟ ತಾಲ್ಲೂಕಿನ ದೇವೇನಹಳ್ಳಿ ಗ್ರಾಮದಲ್ಲಿ ಹುಡುಗರ ಮದುವೆ ನಡೆಯಿತು.
ಮಳೆಗಾಗಿ ಶಿಡ್ಲಘಟ್ಟ ತಾಲ್ಲೂಕಿನ ದೇವೇನಹಳ್ಳಿ ಗ್ರಾಮದಲ್ಲಿ ಹುಡುಗರ ಮದುವೆ ನಡೆಯಿತು.   

ಶಿಡ್ಲಘಟ್ಟ: ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ವಿಶೇಷ ಮದುವೆಯೊಂದು ನಡೆಯಿತು. ವಧು-ವರರು ಇಬ್ಬರೂ ಹುಡುಗರು.

ಇದಕ್ಕೆ ಕಾರಣ ಕೈಕೊಟ್ಟ ಮಳೆ.  ಈ ಮದುವೆಯಲ್ಲಿ ಅಪಾರ ಗ್ರಾಮಸ್ಥರು ಪಾಲ್ಗೊಂಡು ವಧು-ವರರಿಗೆ ಆಶೀರ್ವದಿಸಿದರು.

ಗಂಡು ಹುಡುಗರ ಮದುವೆ ಅಥವಾ ಚಿತ್ತಾರದ ಚಂದ್ರಮ ಎಂಬ ಮಳೆರಾಯನ ಪೂಜೆ ಸಹ ಜನಪದ ಆಚರಣೆ. ಕಂಬಳಿ ಬೀಸುವುದು, ಗುರ್ಚಿ ಹೊರುವುದು, ತುಂಬಿದ ಕೊಡ ಪೂಜೆ, ಕಪ್ಪೆ ಒನಕೆ ಮೆರವಣಿಗೆ ಮೊದಲಾದವು ಮಳೆಗಾಗಿ ನಡೆಯುವ ಆಚರಣೆಗಳು. ಒಂಬತ್ತು ದಿನಗಳವರೆಗೆ ನಡೆಯುವ ಚಿತ್ತಾರದ ಚಂದ್ರಮ ಆಚರಣೆ ನಂತರ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.

ಮಳೆರಾಯನನ್ನು ಓಲೈಸಲು ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಪ್ರತಿ ಮನೆಗೂ ಹೋಗಿ ಹಿಟ್ಟನ್ನು ಪಡೆಯುತ್ತಾರೆ. ನಂತರ ಗ್ರಾಮ ದೇಗುಲದ ಬಳಿ ತಿಂಗಳ ಮಾಮ ಅಥವಾ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ, ಹೂವುಗಳಿಂದ ಅಲಂಕರಿಸಿ ರೊಟ್ಟಿ ಹಾಗೂ ಅನ್ನವನ್ನಿಟ್ಟು ಪೂಜಿಸುತ್ತಾರೆ.

ನಂತರ ಕೋಲಾಟ, ಹಾಡು ಮುಂತಾದವುಗಳು ನಡೆಯುತ್ತವೆ. ಪ್ರಸಾದ ವಿತರಣೆಯೂ ಮಾಡಲಾಗುತ್ತದೆ. ಈ ರೀತಿ ಎಂಟು ದಿನ ನಡೆಯುತ್ತದೆ. ಒಂಬತ್ತನೇ ದಿನ ಇಬ್ಬರು ಗಂಡು ಮಕ್ಕಳಿಗೆ ಶಾಸ್ತ್ರಬದ್ಧವಾಗಿ ಮದುವೆ ಮಾಡಲಾಗುತ್ತದೆ. ಚಿತ್ತಾರದ ಚಂದ್ರನನ್ನು ನಂತರ ವಿಸರ್ಜಿಸುತ್ತಾರೆ. ಮದುವೆ ಆಯೋಜಿಸಿದ್ದ ದೇವೇನಹಳ್ಳಿಯಲ್ಲಿನ ಕಾವೇರಿ ಮಹಿಳಾ ಸಂಘದ ಸದಸ್ಯೆಯರು ತೆಲುಗು ಪದಗಳನ್ನು ಹಾಡಿದರು. ಚಂದ್ರಾಕಾರದ, ನಕ್ಷತ್ರಗಳಿರುವ ರಂಗೋಲಿಯನ್ನು ಹಾಕಿ ಹೂವುಗಳಿಂದ ಮಾಡಿದ್ದ ಅಲಂಕಾರ ಸುಂದರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.