ADVERTISEMENT

ಮೇವಿನ ಕೊರತೆ: ಬೋಳಾಗುತ್ತಿದೆ ಮರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 8:20 IST
Last Updated 11 ಜುಲೈ 2012, 8:20 IST

ಗೌರಿಬಿದನೂರು: ಬರದಿಂದ ತತ್ತರಿಸಿರುವ ತಾಲ್ಲೂಕಿನ ಡಿ.ಪಾಳ್ಯ ಗ್ರಾಮಸ್ಥರು ತಮ್ಮ ಬದುಕನ್ನು ಕಂಡುಕೊಳ್ಳುವುದರ ಜತೆ ಜಾನುವಾರುಗಳನ್ನು ಸಾಕಲು ಆಗುತ್ತಿಲ್ಲ.ದನ, ಹಸು, ಕರು. ಕುರಿ, ಮೇಕೆಗಳನ್ನು ಸಾಕುವುದು ಕಷ್ಟವಾಗಿದೆ. ಮೇವು ಸಿಗದಾಗಿದ್ದು, ವಿವಿಧ ತಳಿಯ ಮರಗಳ ಸೊಪ್ಪು ಕಡಿದು ಹಾಕುತ್ತಿದ್ದಾರೆ.

ರಸ್ತೆಯುದ್ದಕ್ಕೂ ಇರುವ ಸಾಲುಮರಗಳಿಂದ ಸೊಪ್ಪು ಕಡಿದುಕೊಂಡು ಬಂದು ಜಾನುವಾರು ರಕ್ಷಿಸುತ್ತಿದ್ದಾರೆ.
ಮೇವು ಸಿಗದಿರುವುದರಿಂದ ಜಾನುವಾರುಗಳು ಊರು ಗ್ರಾಮಗಳನ್ನು ಹುಡುಕಿಕೊಂಡು ಹೊರಟಿದ್ದು ರಸ್ತೆಬದಿಗಳಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ಗಿಡಮರಗಳನ್ನು ತಿನ್ನುತ್ತಿವೆ. ಕೆಲ ಕಡೆ ರೈತರೇ ರಸ್ತೆಬದಿಗಳಲ್ಲಿರುವ ಬೇವು, ಅರಳಿ, ಗೋಣಿಮರ, ಇತರ ಸಾಲುಮರಗಳ ರಂಬೆಕೊಂಬೆಗಳನ್ನು ಕಡಿದುಕೊಂಡು ಮನೆಗೆ ಒಯ್ದು ಜಾನುವಾರುಗಳಿಗೆ ತಿನ್ನಿಸುತ್ತಿದ್ದಾರೆ.

ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು ಜೀವನ ನಡೆಸುತ್ತಿರುವ ಗ್ರಾಮಸ್ಥರಿಗೆ ಈಗ ಜಾನುವಾರು ಸಾಕಣೆ ದುಸ್ತರ.ಅಗತ್ಯವಿದ್ದಷ್ಟು ಮೇವು ಹಾಕಲಾಗದೆ ನೀರನ್ನು ಕುಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಹೇಳಿದರು ರೈತ ಬಸವರಾಜ.

`ಜಾನುವಾರು ಸಾಕಲು ನಮಗೆ ಮೇವು ಸಿಗುತ್ತಿಲ್ಲ. ವಿಧಿಯಿಲ್ಲದೆ ರಸ್ತೆಬದಿಗಳಲ್ಲಿರುವ ಮರಗಳನ್ನು ಕಡಿಯಬೇಕಾಗಿದೆ. ಮಳೆ ಬಾರದಿದ್ದರೆ, ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ. ಬರಗಾಲ ಬಂದು ವರ್ಷವೇ ಕಳೆದರೂ ಇಲ್ಲಿ ಎಲ್ಲೂ ಮೇವು ಬ್ಯಾಂಕ್ ತೆರೆಯಲಾಗಿಲ್ಲ.

ಅಗತ್ಯವಿರುವಷ್ಟು ಮೇವು ತಿನ್ನದ ಕಾರಣ ಹಸುಗಳು ಸಾಕಷ್ಟು ಪ್ರಮಾಣದಲ್ಲಿ ಹಾಲನ್ನು ನೀಡುತ್ತಿಲ್ಲ~ ಎಂದು ರೈತ ಬೈರೇಗೌಡ ನೊಂದು ನುಡಿದರು.ಮಳೆ ಬಾರದ ಕಾರಣ ಈಗಾಗಲೇ ಗ್ರಾಮದ ಯುವಕರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವೃದ್ಧರು ಗ್ರಾಮದಲ್ಲೇ ಜಾನುವಾರುಗಳಿಗಾಗಿ ಹಾಗೂ ಚಿಕ್ಕಮಕ್ಕಳಿಗಾಗಿ ಉಳಿಯಬೇಕಾಗಿದೆ.

`ತಾಲ್ಲೂಕಿನಾದ್ಯಂತ ಬರಗಾಲ ವ್ಯಾಪಿಸಿರುವುದು ನಿಜ. ಆದರೆ ಅದನ್ನೇ ನೆಪವಾಗಿಸಿಕೊಂಡು ಗಿಡಮರಗಳನ್ನು ಕಡಿಯುವುದು ಸರಿಯಲ್ಲ. ಹೀಗೆ ಅನಾಯಸವಾಗಿ ಗಿಡಮರಗಳನ್ನು ಕಡಿದು ಹಾಕುತ್ತಿದ್ದರೆ ಅಥವಾ ಜಾನುವಾರುಗಳಿಗೆ ತಿನ್ನಿಸುತ್ತಿದ್ದರೆ, ಹಸಿರಾದ ಪರಿಸರ ಕಾಪಾಡುವುದಾದರೂ ಹೇಗೆ. ಸರ್ಕಾರವೇ ಇದಕ್ಕೆ ಹೊಣೆ~ ಎನ್ನುವುದು ಇಲ್ಲಿನ ಪರಿಸರವಾದಿಗಳ ಅನಿಸಿಕೆ.

ಮೇವಿನ ಕೊರತೆಯಿದ್ದ ಕಡೆಯಲೆಲ್ಲ, ಮೇವನ್ನು ಪೂರೈಸಬೇಕು. ಹೋಬಳಿಗಳ ಮಟ್ಟದಲ್ಲಿ ಮೇವು ಬ್ಯಾಂಕುಗಳನ್ನು ಆರಂಭಿಸಿ, ಮೇವಿನ ಕೊರತೆ ತಲೆದೋರದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯ ಸಹಕಾರದಲ್ಲಿ ಈ ಕಾರ್ಯ ನಡೆಯಬೇಕು. ಗಿಡಮರಗಳನ್ನು ಕಡಿಯುವುದನ್ನು ತಡೆಗಟ್ಟಲು ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು ಪರಿಸರವಾದಿ  ಕೆ.ನಾರಾಯಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.