ADVERTISEMENT

ಸಂಸದ ಬಚ್ಚೇಗೌಡ ಹೇಳಿಕೆ ನಂತರ ಕಗ್ಗಂಟಾಯ್ತು ಜಕ್ಕಲಮಡುಗು ನೀರಿನ ಹಂಚಿಕೆ ವಿವಾದ

ಸಂಸದ ಬಿ.ಎನ್.ಬಚ್ಚೇಗೌಡ ಅವರು ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ಸಮಾನ ಮನಸ್ಕ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:19 IST
Last Updated 17 ಅಕ್ಟೋಬರ್ 2019, 6:19 IST
ಸಭೆಯಲ್ಲಿ ನಗರಸಭೆ ಮಾಜಿ ಸದಸ್ಯ ಎಸ್.ಎಂ.ರಫೀಕ್ ಮಾತನಾಡಿದರು.
ಸಭೆಯಲ್ಲಿ ನಗರಸಭೆ ಮಾಜಿ ಸದಸ್ಯ ಎಸ್.ಎಂ.ರಫೀಕ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಈ ಹಿಂದೆ ಸರ್ಕಾರ ಮಾಡಿದ ಆದೇಶದಂತೆ ಜಕ್ಕಲಮಡಗು ಜಲಾಶಯದ ನೀರು ಹಂಚಿಕೆಯಾಗಬೇಕು. ಅದನ್ನು ಬಿಟ್ಟು ಶೇ 50:50ರ ಅನುಪಾತದಲ್ಲಿ ನೀರು ಹಂಚಿಕೆ ಮಾಡಿದರೆ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಬೇಕಾಗುತ್ತದೆ’ ಎಂದು ನಗರಸಭೆ ಮಾಜಿ ಸದಸ್ಯ ಎಸ್.ಎಂ.ರಫೀಕ್ ಹೇಳಿದರು.

ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರಕ್ಕೆ ಜಕ್ಕಲಮಡಗು ಜಲಾಶಯದ ನೀರನ್ನು ಶೇ 50:50ರ ಅನುಪಾತದಲ್ಲಿ ಹರಿಸಲಾಗುತ್ತದೆ ಎಂದು ಇತ್ತೀಚೆಗೆ ಸಂಸದ ಬಿ.ಎನ್.ಬಚ್ಚೇಗೌಡ ಅವರು ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಮಾನ ಮನಸ್ಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಬಚ್ಚೇಗೌಡರು ಜಕ್ಕಲಮಡುಗು ಜಲಾಶಯದ ಇತಿಹಾಸವನ್ನು ಅರಿಯದೇ ದೊಡ್ಡಬಳ್ಳಾಪುರ ನಗರಕ್ಕೆ ಶೇ 50 ರಷ್ಟು ನೀರು ಹರಿಸುವುದಾಗಿ ಹೇಳಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ನೀರಿನ ವಿಚಾರವನ್ನು ರಾಜಕೀಯ ಮಾಡುವುದನ್ನು ಸಂಸದರು ಕೈಬಿಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ನೀರು ಒದಗಿಸುವ ಜಲಾಶಯ, ಪೈಪ್‌ಲೈನ್ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಜನರ ಗಮನಕ್ಕೆ ತರದಂತೆ ದೊಡ್ಡಬಳ್ಳಾಪುರಕ್ಕೆ ಜಕ್ಕಲಮಡಗು ನೀರು ತೆಗೆದುಕೊಂಡು ಹೋಗುವ ಪ್ರಯತ್ನ ತೆರೆಮರೆಯಲ್ಲಿ ನಡೆದಿತ್ತು. ಪಕ್ಷಾತೀತ ಹೋರಾಟದ ಫಲವಾಗಿ ಜಕ್ಕಲಮಡಗು ಚಿಕ್ಕಬಳ್ಳಾಪುರ ಆಸ್ತಿಯಾಗಿ ಉಳಿದಿದೆ’ ಎಂದರು.

‘ಕೆಲ ತಿಂಗಳ ಹಿಂದಷ್ಟೇ ಜಕ್ಕಲಮಡಗು ಜಲಾಶಯ ಬರಿದಾಗಿ ನಗರದ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುವ ಸ್ಥಿತಿ ತಲೆದೋರಿತ್ತು. ಜನರು ನೀರಿಗಾಗಿ ಪ್ರತಿಭಟನೆಗಳನ್ನು ನಡೆಸಿದ ಉದಾಹರಣೆಗಳಿವೆ. ಇತ್ತೀಚೆಗೆ ಸುರಿದ ಮಳೆಗೆ ಜಲಾಶಯ ತುಂಬಿತು ಎಂದು ಜನ ನಿಟ್ಟುಸಿರು ಬಿಡುವಂತಾಗಿದೆ. ನೀರಿನ ಸಮಸ್ಯೆಗೆ ಪರಿಹಾರ ಹುಡುಕಬೇಕಾದವರೇ ಸಮಸ್ಯೆ ಸೃಷ್ಟಿಸಲು ಹೊರಟಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಕ್ಕಲಮಡಗು ಜಲಾಶಯ ಹೂಳು ತೆಗೆಯುವ ಕಾಮಗಾರಿಗಾಗಿ ಸರ್ಕಾರಕ್ಕೆ ₹6 ಕೋಟಿ ಪ್ರಸ್ತಾವ ಸಲ್ಲಿಸಿ ವರ್ಷಗಳೇ ಕಳೆದಿವೆ. ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಜನಪ್ರತಿನಿಧಿಗಳು ದೂರದೃಷ್ಟಿಯ ಯೋಜನೆಗಳನ್ನು ಕಡೆಗಣಿಸುತ್ತಿದ್ದಾರೆ. ಸರ್ಕಾರ ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರನ್ನು ಹರಿಸಿ, ಜಕ್ಕಲಮಡಗು ಜಲಾಶಯದ ಸಂಪೂರ್ಣ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡ ಭಾಸ್ಕರ್ ಮಾತನಾಡಿ, ‘ಈ ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಲಾಶಯ ನೀರನ್ನು ಶೇ 66.66 ರಷ್ಟು ನೀರನ್ನು ಹೊರತು ಪಡಿಸಿ ಹೆಚ್ಚಿನ ನೀರನ್ನು ದೊಡ್ಡಬಳ್ಳಾಪುರಕ್ಕೆ ಪೂರೈಸುವ ಒಪ್ಪಂದವಾಗಿತ್ತು. ನಂತರ ದಿನಗಳಲ್ಲಿ ನಿಯಮ ಬಾಹಿರವಾಗಿ ಶೇ 68:32ರ ಅನುಪಾತದಲ್ಲಿ ನೀರು ಹಂಚಿಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಎಂ.ಪ್ರಕಾಶ್, ಮುನಿಕೃಷ್ಣ, ಶ್ರೀನಾಥ್, ದೇವರಾಜ್, ಚಿಕ್ಕಪ್ಪಯ್ಯ, ಶ್ರೀನಿವಾಸ್, ಮಿಲ್ಟನ್ ವೆಂಕಟೇಶ್, ಮಹೇಶ್, ನರಸಿಂಹ ಮೂರ್ತಿ, ಫೈರೋಜ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.