ADVERTISEMENT

ರೈತರ ಮೇಲಿನ ಗೋಲಿಬಾರ್‌ಗೆ 42 ವರ್ಷ

ಬಾಗೇಪಲ್ಲಿ ಇತಿಹಾಸದಲ್ಲಿ ಅಳಿಯದ ದುರ್ಘಟನೆ

ಪಿ.ಎಸ್.ರಾಜೇಶ್
Published 7 ಆಗಸ್ಟ್ 2022, 6:01 IST
Last Updated 7 ಆಗಸ್ಟ್ 2022, 6:01 IST
ಬಾಗೇಪಲ್ಲಿ ನಿರ್ಮಿಸಿರುವ ಹುತಾತ್ಮರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರ ಸ್ತೂಪ
ಬಾಗೇಪಲ್ಲಿ ನಿರ್ಮಿಸಿರುವ ಹುತಾತ್ಮರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರ ಸ್ತೂಪ   

ಬಾಗೇಪಲ್ಲಿ: ರಾಜ್ಯದ ರೈತ ಹೋರಾಟ ಇತಿಹಾಸದಲ್ಲಿ ನವಲಗುಂದ-ನರಗುಂದದಲ್ಲಿ ನಡೆದ ರೈತ ಹೋರಾಟವು ಇಂದಿಗೂ ಅಚ್ಚಳಿದಿಲ್ಲ.ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಸರ್ಕಾರ ಗೋಲಿಬಾರ್ ನಡೆಸಿತು.

ಆ ಗೋಲಿಬಾರ್ ಖಂಡಿಸಿ ಹಾಗೂ ರೈತರ ಹೋರಾಟ ಬೆಂಬಲಿಸಿ 1980 ಆ.7 ರಂದು ಕಮ್ಯುನಿಸ್ಟರ ನೇತೃತ್ವದಲ್ಲಿ ಬಾಗೇಪಲ್ಲಿಯಲ್ಲಿ ಹೋರಾಟ ನಡೆಯಿತು. ಈ ಹೋರಾದ ವೇಳೆ ಪೊಲೀಸರು ಗೋಲಿಬಾರ್ ನಡೆಸಿದರು. ರೈತರಾದ ದದ್ದಿಮಪ್ಪ ಮತ್ತು ಆದಿನಾರಾಯಣರೆಡ್ಡಿ ಗೋಲಿಬಾರ್‌ಗೆ ಪ್ರಾಣತೆತ್ತರು.

ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ, ಕೃಷಿ ಸರಕುಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು. ಭೂ ಸುಧಾರಣೆ ಹಾಗೂ ಭೂ ಹಂಚಿಕೆ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಕುಟುಂಬದಲ್ಲಿ ಕನಿಷ್ಠ ಒಬ್ಬರಿಗೆ ಕೆಲಸ, ಸ್ವಯಂ ಉದ್ಯೋಗಕ್ಕೆ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಬೀದಿಗಿಳಿದು ಪ್ರತಿಭಟಿಸಿದರು. ಇದೇ ಸಮಯದಲ್ಲಿ 1980ರ ಜುಲೈನಲ್ಲಿ ನರಗುಂದ-ನವಲಗುಂದದಲ್ಲಿ ಹೋರಾಟ ನಡೆಯಿತು. ಈ ಹೋರಾಟ ಬಾಗೇಪಲ್ಲಿಗೂ ಪಸರಿಸಿತು.

ADVERTISEMENT

1980ರ ಆ.1 ರಂದು ತಾಲ್ಲೂಕಿನ ಸಿಪಿಐ ಹಾಗೂ ಸಿಪಿಐ(ಎಂ) ಮುಖಂಡ ಎ.ವಿ.ಅಪ್ಪಸ್ವಾಮಿರೆಡ್ಡಿ, ಎಚ್.ಎಸ್.ರಾಮರಾವ್, ಎನ್.ವಿ.ನಾಗಭೂಷಣಾಚಾರಿ, ಡಿ.ಆರ್.ಜಯರಾಮರೆಡ್ಡಿ, ಡಿ.ಎನ್.ವೆಂಕಟರೆಡ್ಡಿ ಸೇರಿದಂತೆ 36 ರೈತ ನಾಯಕರು ಎ.ವಿ.ಅಪ್ಪಸ್ವಾಮಿರೆಡ್ಡಿ ಮನೆಯಲ್ಲಿ ಸಭೆ ನಡೆಸಿದರು.

ನರಗುಂದ-ನವಲಗುಂದ ರೈತ ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲು ತೀರ್ಮಾನಿಸಿದರು. 1980 ಆ.7 ರಂದು ಪಟ್ಟಣದಲ್ಲಿ ರೈತ ನಾಯಕರು ಕೆಂಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ಅಂದಿನ ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದರು. ರೈತರ ಮೇಲೆ ಗುಂಡು ಹಾರಿಸಿದರು. ಆಗ ರೈತರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಸ್ದಳದಲ್ಲಿಯೇ ಮೃತಪಟ್ಟರು. ರೈತ ನಾಯಕರನ್ನು ಪೊಲೀಸರು ಬಂಧಿಸಿದರು.

‘ನನಗೆ 30 ವರ್ಷ ಆಗಿತು. ಪಟ್ಟಣದಲ್ಲಿ ರೈತ ನಾಯಕರ, ರೈತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿದರು. ರೈತ ದದ್ದಿಮಪ್ಪಗೆ ಗುಂಡು ಬಿದ್ದು ಕುಸಿದರು. ನಾಗಭೂಷಣಾಚಾರಿ, ನಾನು ಆಸ್ಪತ್ರೆಗೆ ಸಾಗಿಸಿದೆವು. ಅಷ್ಟರಲ್ಲಿ ಮೃತಪಟ್ಟಿದ್ದರು’ ಎಂದು ನೆನಪಿಸಿಕೊಳ್ಳುವರು ಹೋರಾಟಗಾರ ಎಚ್.ಎ.ರಾಮಲಿಂಗಪ್ಪ.

‘1960 ರಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಪುಣ್ಣಿಮ ಸಂಗಂ ಹೆಸರಿನಲ್ಲಿ ಕಮ್ಯುನಿಸ್ಟ್ ಹೋರಾಟ ಆರಂಭಗೊಂಡಿದೆ. 1970ರಲ್ಲಿ ಉಳುವವನಿಗೆ ಭೂಮಿ ಹೋರಾಟ, 1980ರಲ್ಲಿ ರೈತರ ಮೇಲೆ ಪೊಲೀಸ್ ಗೋಲಿಬಾರ್ ಸೇರಿದಂತೆ ಹಲವು ಹೋರಾಟಗಳನ್ನು ತಾಲ್ಲೂಕಿನಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ನಡೆಸಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.