ADVERTISEMENT

ಚಿಕ್ಕಬಳ್ಳಾಪುರ | ಝೀಕಾ ಆತಂಕ: 33 ಮಂದಿ ರಕ್ತದ ಮಾದರಿ ಎನ್‌ಐವಿಗೆ ರವಾನೆ

ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಝೀಕಾ ವೈರಸ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:18 IST
Last Updated 2 ನವೆಂಬರ್ 2023, 15:18 IST
ಝೀಕಾ ವೈರಸ್ (ಪ್ರಾತಿನಿಧಿಕ ಚಿತ್ರ)
ಝೀಕಾ ವೈರಸ್ (ಪ್ರಾತಿನಿಧಿಕ ಚಿತ್ರ)   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾದ ಕಾರಣ 33 ಮಂದಿ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ. 

ತಲಕಾಯಲಬೆಟ್ಟ ಹಾಗೂ ಸುತ್ತಲಿನ ವಡ್ಡಹಳ್ಳಿ, ಬಚ್ಚನಹಳ್ಳಿ, ವೆಂಕಟಾಪುರ, ದಿಬ್ಬೂರಹಳ್ಳಿ ಗ್ರಾಮದ 29 ಗರ್ಭಿಣಿಯರು ಮತ್ತು ನಾಲ್ಕು ಮಂದಿ ಜ್ವರ ಪೀಡಿತರ ರಕ್ತದ ಮಾದರಿಗಳನ್ನು ಎನ್‌ಐವಿಗೆ ರವಾನಿಸಲಾಗಿದೆ. 

ಕಳೆದ ಆಗಸ್ಟ್‌ನಲ್ಲಿ ಕೀಟ ವಿಜ್ಞಾನಿಗಳು ಜಿಲ್ಲೆಯಲ್ಲಿ ಸೊಳ್ಳೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ತಲಕಾಯಲಬೆಟ್ಟದಲ್ಲಿ ಸಂಗ್ರಹಿಸಿದ್ದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದಾಗಿ ಅ.24ರಂದು ತಾಲ್ಲೂಕು ಆರೋಗ್ಯ ಇಲಾಖೆಗೆ ಮಾಹಿತಿ ದೊರೆತಿದೆ. 

ADVERTISEMENT

ಝೀಕಾ ವೈರಸ್ ಪತ್ತೆಯಾದ ಬೆನ್ನಲ್ಲಿಯೇ ಈ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇದರ ನಿವಾರಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. 

‘ಜಿಲ್ಲೆಯ ಆರು ಕಡೆಗಳಲ್ಲಿ ಸೊಳ್ಳೆಗಳನ್ನು ಹಿಡಿದುಕೊಂಡು ಹೋಗಿ ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ತ‌ಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆ ಆಗಿದೆ. ಈ ಕಾರಣದಿಂದ ಆ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗರ್ಭಿಣಿಯರು, ಜ್ವರಪೀಡಿತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಾಲ್ಕು ಮಂದಿ ಜ್ವರಪೀಡಿತರು ಆರೋಗ್ಯವಾಗಿ ಇದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್.ಮಹೇಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.