ADVERTISEMENT

ಸೌಲಭ್ಯ ಮರೀಚಿಕೆ: ದಯನೀಯ ಸ್ಥಿತಿಯಲ್ಲಿ ಬದುಕು

ಬಾಗೇಪಲ್ಲಿಯ ಅಡವಿಕೊತ್ತೂರು ಅಕ್ಷರಶಃ ಅಡವಿ: ಚಿರತೆ, ಕರಡಿ ಕಾಟ ಹೆಚ್ಚು

ಪಿ.ಎಸ್.ರಾಜೇಶ್
Published 13 ಸೆಪ್ಟೆಂಬರ್ 2022, 6:35 IST
Last Updated 13 ಸೆಪ್ಟೆಂಬರ್ 2022, 6:35 IST
ಬಾಗೇಪಲ್ಲಿ ತಾಲ್ಲೂಕಿನ ಅಡವಿಕೊತ್ತೂರು ಗ್ರಾಮದ ವೃದ್ಧೆ ಹುಸೇನ್ ಬೀ ಅವರ ಮನೆ
ಬಾಗೇಪಲ್ಲಿ ತಾಲ್ಲೂಕಿನ ಅಡವಿಕೊತ್ತೂರು ಗ್ರಾಮದ ವೃದ್ಧೆ ಹುಸೇನ್ ಬೀ ಅವರ ಮನೆ   

ಬಾಗೇಪಲ್ಲಿ: 50 ವರ್ಷಗಳಿಂದ ಜನರು ಗುಡಿಸಲುಗಳಲ್ಲಿ ವಾಸ, ಸ್ವಂತ ಸೂರು, ರಸ್ತೆ, ಚರಂಡಿ ಇಲ್ಲ. ಕಾಲುದಾರಿ ರಸ್ತೆ, ಕೃಷಿ ಕೂಲಿಕಾರ್ಮಿಕರೇ ಹೆಚ್ಚು, ಅಂಗನವಾಡಿ, ಸರ್ಕಾರಿ ಶಾಲೆ ಇಲ್ಲ. ಕಾಡುಪ್ರಾಣಿಗಳ ಭಯದಲ್ಲೇ ವಾಸ, ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಕಾಡಿನ ಮಧ್ಯದಲ್ಲಿನ ಈ ಅಡವಿಕೊತ್ತೂರು ಗ್ರಾಮಕ್ಕೆ 75ರ ಸ್ವಾತಂತ್ರ್ಯ ಮಹೋತ್ಸವ ಆಚರಿಸುತ್ತಿದ್ದರೂ ಕನಿಷ್ಠ ಸರ್ಕಾರಿ ಸೌಲಭ್ಯಗಳು ಸಿಗದೇ, ದಯನೀಯ ಸ್ಥಿತಿಯಲ್ಲಿ ಜನರು ಬದುಕು ಕಟ್ಟಿಕೊಂಡಿದ್ದಾರೆ.

ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ತೋಳ್ಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡವಿಕೊತ್ತೂರು ಗ್ರಾಮ ಇದೆ. ಪಾತಪಾಳ್ಯ-ಕಲ್ಲಿಪಲ್ಲಿ-ಬಿಳ್ಳೂರು ರಸ್ತೆ ಮಾರ್ಗದ ಮಧ್ಯದಲ್ಲಿ ಅಡವಿಕೊತ್ತೂರು ಕ್ರಾಸ್ ಇದೆ. ಕ್ರಾಸ್‌ನಿಂದ ಗ್ರಾಮಕ್ಕೆ ಸಂಚರಿಸಲು ರಸ್ತೆ ಮಾರ್ಗ ಇಲ್ಲ. ಕಾಲುದಾರಿಯಲ್ಲಿ ಸಂಚರಿಸಬೇಕು.

2011ರ ಸೆಪ್ಟಂಬರ್‌ನಲ್ಲಿ ಅಂದಿನ ಉಪಲೋಕಾಯುಕ್ತ ಗುರುರಾಜ್‍ ಅವರು, ಅಧಿಕಾರಿಗಳ ಜತೆ ಗ್ರಾಮದ ಜನರಿಗೆ ಸರ್ಕಾರಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಖುದ್ದು ವೀಕ್ಷಿಸಲು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮನೆ, ನಿವೇಶನ, ಬೀದಿದೀಪ, ರಸ್ತೆ, ಚರಂಡಿಗಳನ್ನು ಮಾಡುವಂತೆ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇಂದಿಗೆ 11 ವರ್ಷ ಕಳೆದರೂ, ಗ್ರಾಮಕ್ಕೆ ಕನಿಷ್ಠ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು, ಜಿಲ್ಲಾ, ತಾಲ್ಲೂಕು ಆಡಳಿತದ ಅಧಿಕಾರಿ ವರ್ಗ ವಿಫಲವಾಗಿದೆ.

ADVERTISEMENT

ತೋಳ್ಳಪಲ್ಲಿ ಗ್ರಾಮದ ಹುಸೇನ್ ಬೀ, ಪೆದ್ದನರಸಿಂಹಪ್ಪ, ಹನುಮಂತು, ಚಿನ್ನನರಸಿಂಹಲು ಎಂಬುವವರು 50 ವರ್ಷಗಳ ಹಿಂದೆ ತಮ್ಮ ಜಮೀನುಗಳಲ್ಲಿ ಕೆಲಸ ಮಾಡಲು ವಲಸೆ ಬಂದಿದ್ದಾರೆ. ಈ ಗ್ರಾಮದ 80ರ ವಯಸ್ಸಿನ ವೃದ್ಧೆ ಹುಸೇನ್ ಬೀ ಅವರಿಗೆ ಇಂದಿಗೂ ನಿವೇಶನ, ಮನೆ ಇಲ್ಲ.

ಈ ಗ್ರಾಮದಲ್ಲಿ ಇದೀಗ 15 ಮನೆಗಳ ಪೈಕಿ ಪರಿಶಿಷ್ಟ ಪಂಗಡದ ಜನ ವಾಸ ಆಗಿದ್ದಾರೆ. ಅಕ್ಕಪಕ್ಕದ ಊರುಗಳಿಗೆ ಕೃಷಿ, ಕೂಲಿಕೆಲಸ ಮಾಡುತ್ತಿದ್ದಾರೆ. ಬೆಳೆ ಇಡುವ ಜಮೀನು ಹೊಂದಿರುವ ರೈತರಿಗೆ ಬಿತ್ತನೆ ಬೀಜ, ಗೊಬ್ಬರಕ್ಕೆ ಆರ್ಥಿಕ ಶಕ್ತಿ ಇಲ್ಲದೇ ಹೊಲ-ಗದ್ದೆಗಳು ಬೀಡಾಗಿವೆ. ಗ್ರಾಮದಲ್ಲಿನ ಮೂರು ಮಂದಿ ಹೊರತುಪಡಿಸಿದರೆ ಉಳಿದವರು ಇಂದಿಗೂ ಹುಲ್ಲಿನ ಗುಡಿಸಲುಗಳಲ್ಲೇ ವಾಸ ಆಗಿದ್ದಾರೆ. ಮಳೆಯ ನೀರು ಸೋರಿಕೆ ತಪ್ಪಿಸಲು ಹುಲ್ಲಿನ ಮೇಲೆ ಪ್ಲಾಸ್ಟಿಕ್ ಕಟ್ಟಿದ್ದಾರೆ.

ಬಯಲಿನಲ್ಲಿ ಕಟ್ಟಿಗೆ ಉರಿಸಿ ಊಟ ಸಿದ್ಧಪಡಿಸುತ್ತಾರೆ. ಗ್ರಾಮದಲ್ಲಿ ಶೌಚಾಲಯ ಇಲ್ಲ. ಗ್ರಾಮದ ವೃದ್ಧೆ ಗೌರಮ್ಮ, ನರಸಮ್ಮ ಅವರಿಗೆ ವೃದ್ಧಾಪ್ಯ ವೇತನ ನೀಡಿಲ್ಲ. ಬೀದಿ ದೀಪ ಇಲ್ಲದೆ ಕಗ್ಗತ್ತಲಿನಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ.

ಬೆಟ್ಟ-ಗುಡ್ಡಗಳ, ಕಾಡಿನಂಚಿನಲ್ಲಿ ಇರುವ ಈ ಗ್ರಾಮಕ್ಕೆ ಚಿರತೆ, ಕರಡಿ ಕಾಟ ಹೆಚ್ಚಾಗಿದೆ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆ ಇಲ್ಲ. ಗ್ರಾಮದ 4 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು 2 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಾಸ್‍ಗೆ ಹೋಗಿ, ಆಟೊ, ಟ್ಯಾಕ್ಸಿಗೆ ಹಣ ನೀಡಿ ಬಿಳ್ಳೂರು ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ.

ಸೂರು ಕಲ್ಪಿಸಿ: ವೃದ್ಧೆಯ ಅಳಲು: ‘ನನಗೆ 13 ವರ್ಷ ಇದ್ದಾಗಲೇ ಕೆಲಸ ಮಾಡಲು ಬಂದೆವು. ಈ ಗ್ರಾಮ ಆಗಲು ನಾನೇ ಕಾರಣ. ಇದೀಗ ನನಗೆ 60 ವರ್ಷ ಆಗಿದ್ದರೂ, ಗುಡಿಸಲು ಮನೆಯಲ್ಲೇ ವಾಸ. ಸ್ವಂತ ಸೂರಿಗಾಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮುಖಂಡರಿಗೆ ಮನವಿ ಮಾಡಿದರೂ ಇದುವರೆಗೂ ಸ್ವಂತ ಮನೆ ಇಲ್ಲ. ಊಟ-ವಸತಿಗೆ ಪರದಾಟ ಆಗಿದೆ. ಮನೆ, ಊಟ-ವಸತಿ ಕಲ್ಪಿಸಿ’ ಎಂದು ವೃದ್ಧೆ ಹುಸೇನ್ ಬೀ ಕಣ್ಣೀರು ಸುರಿಸಿ ತಮ್ಮ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.