ಶಿಡ್ಲಘಟ್ಟ: ಕೇಂದ್ರದ ಏರ್ ಕಮಾಂಡರ್ ಸುಧೀರ್ ಯಾದವ್ ಮತ್ತವರ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಆನೂರು ಗ್ರಾಮದ ಮಾದರಿ ಅಂಗನವಾಡಿ, ಡಿಜಿಟಲ್ ಲೈಬ್ರರಿಗೆ ಭೇಟಿ ನೀಡಿತು.
ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ-ಹರಾಜು, ಇ-ತೂಕ ಹಾಗೂ ಇ-ಬಟವಾಡೆ ವ್ಯವಸ್ಥೆ, ಮಾದರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಿಗುವ ಸವಲತ್ತು, ಡಿಜಿಟಲ್ ಲೈಬ್ರರಿಯಲ್ಲಿನ ಓದುಗರಿಗೆ ಸಿಗುತ್ತಿರುವ ಅನುಕೂಲ ಕುರಿತು ಮಾಹಿತಿ ಪಡೆಯಿತು.
ಕೇಂದ್ರ ಸರ್ಕಾರಕ್ಕೆ ಜಿಲ್ಲಾಮಟ್ಟದ ಆಡಳಿತ ವರದಿ ನೀಡಲು ಆಗಮಿಸಿದ್ದ ತಂಡಕ್ಕೆ ಇಲ್ಲಿನ ಮಾರುಕಟ್ಟೆಯಲ್ಲಿ ಇ-ಆಡಳಿತ ವ್ಯವಸ್ಥೆ ಕುರಿತು ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿದರು.
ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುವ ರೇಷ್ಮೆಗೂಡಿನ ಪ್ರಮಾಣಕ್ಕೆ ತಕ್ಕಂತೆ ಜಾಲರಿ ನೀಡಿ ಪ್ರತಿ ಲಾಟಿಗೂ ಸರಣಿ ಕ್ರಮ ಸಂಖ್ಯೆ ನೀಡಲಾಗುತ್ತದೆ. ಇ-ಹರಾಜು ಮೂಲಕ ರೀಲರ್ ತಮಗೆ ಬೇಕಾಗುವ ರೇಷ್ಮೆಗೂಡಿಗೆ ಬಿಡ್ ನೀಡುತ್ತಾರೆ. ಯಾರು ಹೆಚ್ಚಿನ ಬಿಡ್ ನೀಡುತ್ತಾರೋ ಅವರಿಗೆ ಆ ರೇಷ್ಮೆಗೂಡು ಲಾಟು ಸಿಗುತ್ತದೆ. ಒಂದೊಮ್ಮೆ ರೈತನಿಗೆ ಬಿಡ್ ಬೆಲೆ ಸಮಾಧಾನ ತರದಿದ್ದಲ್ಲಿ ಬಿಡ್ ರದ್ದುಪಡಿಸುವ ಅವಕಾಶ ರೈತನಿಗಿದೆ ಎಂದರು.
ಮೊದಲ ಸುತ್ತಿನ ಬಿಡ್ ನಲ್ಲಿ ಹರಾಜು ಆಗದೆ ಉಳಿದ ರೇಷ್ಮೆಗೂಡಿಗೆ ಎರಡನೇ ಬಾರಿ ಹರಾಜಿಗೆ ಅವಕಾಶ ನೀಡಲಾಗುವುದು. ಎರಡು ಬಾರಿ ಹರಾಜಿನಲ್ಲಿಯೂ ರೈತನಿಗೆ ಬೆಲೆ ಸಮಾಧಾನವಾಗದಿದ್ದಲ್ಲಿ ಮರು ದಿನದ ಬಿಡ್‌ಗೆ ಕಾಯಬಹುದು ಅಥವಾ ಬೇರೆ ರೇಷ್ಮೆಗೂಡು ಮಾರುಕಟ್ಟೆಗೆ ಹೋಗಲು ಮುಕ್ತ ಅವಕಾಶ ನೀಡಲಾಗುವುದು.
ಹರಾಜು ಪ್ರಕ್ರಿಯೆ ಮುಗಿದಾದ ಮೇಲೆ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ರೇಷ್ಮೆಗೂಡಿನ ನಿಖರ ತೂಕ ಮಾಡಲಾಗುತ್ತದೆ. ಹರಾಜು ಮುಗಿದ 24 ಗಂಟೆ ಒಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು. ಇದರಿಂದ ರೇಷ್ಮೆಗೂಡಿನ ಗುಣಮಟ್ಟದ ಆಧಾರದಲ್ಲಿ ರೈತರಿಗೆ ಬೆಲೆ ಸಿಗಲಿದೆ. ತಮಗೆ ಬೇಕಾದ ಗುಣಮಟ್ಟದ ರೇಷ್ಮೆಗೂಡು ರೀಲರ್‌ಗಳಿಗೆ ಸಿಗಲಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ್ ಬಿ.ಕೆ.ಶ್ವೇತಾ, ಜಿಲ್ಲಾ ಪಂಚಾಯಿತಿ ನರೇಗಾ ಸಂಯೋಜಕ ಜಿ.ಎನ್.ಮಧು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.