ADVERTISEMENT

ಗುಡಿಬಂಡೆ: ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡ ಆಧಾರ್ ಕೇಂದ್ರ

ಹೊರ ತಾಲ್ಲೂಕುಗಳಿಗೆ ಎಡತಾಕುತ್ತಿರುವ ಗುಡಿಬಂಡೆ ಜನರು

​ಪ್ರಜಾವಾಣಿ ವಾರ್ತೆ
Published 27 ಮೇ 2025, 6:20 IST
Last Updated 27 ಮೇ 2025, 6:20 IST
ಗುಡಿಬಂಡೆ ತಾಲ್ಲೂಕು ಕಚೇರಿ 
ಗುಡಿಬಂಡೆ ತಾಲ್ಲೂಕು ಕಚೇರಿ     

ಗುಡಿಬಂಡೆ: ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿರುವ ಆಧಾರ್ ಸೇವಾ ಕೇಂದ್ರ ಸುಮಾರು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ.

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್‌ಗೆ ಮೊಬೈಲ್ ನಂಬರ್ ಜೋಡಣೆ ಮಾಡಿಸುವುದು, ಆಧಾರ್ ಅಪ್‌ಡೇಟ್‌ ಕಡ್ಡಾಯವಾಗಿದೆ. ಆದರೆ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ.

ದೂರದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಅಥವಾ ‌ಗೌರಿಬಿದನೂರು ಕಡೆಗೆ ಜನರು ಹೋಗಬೇಕಾದ ಪರಿಸ್ಥಿತಿ ಇದೆ.

ADVERTISEMENT

ನಿಯಮದಂತೆ ಈ ಹಿಂದೆ ಎಲ್ಲಾ ನಾಡಕಚೇರಿ, ತಾಲ್ಲೂಕು ಕಚೇರಿ ಅಥವಾ ಅಂಚೆ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ತೆರೆದು ತಿದ್ದುಪಡಿ ಕಾರ್ಯನಡೆಸಬೇಕು. ಆದರೆ ಈಗ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ.

ವೃದ್ಧರು, ಅಂಗವಿಕಲರಿಗೆ ತೊಂದರೆ: ಗುಡಿಬಂಡೆ ಕರ್ನಾಟಕ ಗ್ರಾಮೀಣ ಬ್ಯಾಂಕ್, ತಾಲ್ಲೂಕು ಹಾಗೂ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಂಡಿರುವುದರಿಂದ ವಯಸ್ಕರು, ಅಂಗವಿಕಲರು ತೊಂದರೆ ಅನುಭವಿಸುವಂತಾಗಿದೆ.

ಆಧಾರ್ ಕಾರ್ಡ್ ಸಮಸ್ಯೆ ಒಂದು ಕಡೆಯಾದರೆ ಇನ್ನೊಂದು ಕಡೆ ಪಡಿತರ ಚೀಟಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಮಾಡಿಸಲು ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರವೂ ಇಲ್ಲ.

ದೂರದ ಹಂಪಸಂದ್ರ, ಉಲ್ಲೋಡು, ವರ್ಲಕೊಂಡ ಗ್ರಾಮ ಓನ್ ಕೇಂದ್ರಗಳಿಗೆ ಹೋಗಬೇಕು. ಕರ್ನಾಟಕ ಓನ್ ಕೇಂದ್ರ ಹಾಗೂ ಆಧಾರ್ ಕಾರ್ಡ್ ಸೇವಾ ಕೇಂದ್ರಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.

ಗುಡಿಬಂಡೆ ಕರ್ನಾಟಕ ಓನ್ ಕೇಂದ್ರವನ್ನು ನಿಯಮಾನುಸಾರ ಸ್ಥಳೀಯ ನಿವಾಸಿಗಳಿಗೆ ನೀಡಬೇಕು. ಆದರೆ ಯಾವುದೇ ಕಂಪ್ಯೂಟರ್ ಕೇಂದ್ರ ಇಲ್ಲದ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಓನ್ ಕೇಂದ್ರ ನೀಡಲಾಗಿದೆ ಎನ್ನುವ ಮಾತಿದೆ.

ಆದರೆ ಇದುವರೆಗೆ ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರ ಕಾರ್ಯಾರಂಭವಾಗಿಲ್ಲ.  

ಆಧಾರ್ ಹಾಗೂ ಪಡಿತರ ಚೀಟಿ ಮಾಡಿಸಲು ಬೇರೆ ತಾಲ್ಲೂಕಿಗೆ ಹೋದಾಗ ಹೆಚ್ಚಿನ ಜನರಿದ್ದರೆ ಕಾದು-ಕಾದು ವಾಪಸಾಗಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಸರ್ವರ್ ಸಮಸ್ಯೆ ಎದುರಾಗುತ್ತದೆ.

ಇದರಿಂದ ಜನಸಾಮಾನ್ಯರ ಸಮಯ ಹಾಗೂ ಹಣ ಎರಡೂ ಕೂಡ ವ್ಯರ್ಥವಾಗುತ್ತಿದೆ. ಎಲ್ಲ ಬ್ಯಾಂಕ್ ಹಾಗೂ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಆಧಾರ್ ಅನಿವಾರ್ಯ. 

‘ತಾಲ್ಲೂಕು ಕೇಂದ್ರ ಗುಡಿಬಂಡೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಆಧಾರ್ ಕೇಂದ್ರ ಸ್ಥಗಿತವಾಗಿದೆ. ಬಾಗೇಪಲ್ಲಿ, ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿದೆ. ಅಲ್ಲಿ ಹೋದರೂ ಕೂಡ ಸರ್ವರ್ ಸಮಸ್ಯೆ ಎದುರಾಗುತ್ತದೆ. ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟಣದ ಗೋಪಿ ಆಗ್ರಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.