ADVERTISEMENT

ಪ್ರಾಧಿಕಾರದ ಕಚೇರಿ ಮೇಲೆ ಎಸಿಬಿ ದಾಳಿ: ಇಬ್ಬರ ಬಂಧನ

ಭೂಪರಿವರ್ತನೆಗೊಂಡ ನಿವೇಶನಗಳಿಗೆ ಬಿಡುಗಡೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 12:26 IST
Last Updated 17 ಅಕ್ಟೋಬರ್ 2019, 12:26 IST
ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು
ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಭೂಪರಿವರ್ತನೆಗೊಂಡ ನಿವೇಶನಗಳಿಗೆ ಬಿಡುಗಡೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ನಗರ ಯೋಜಕ ಸದಸ್ಯ ಹಾಗೂ ಲಂಚದ ಹಣ ಸ್ವೀಕರಿಸುತ್ತಿದ್ದ ಖಾಸಗಿ ಎಂಜಿನಿಯರ್‌ನನ್ನು ಬಂಧಿಸಿದರು.

ಬೆಂಗಳೂರಿನ ಹೆಗಡೆ ನಗರದ ನಿವಾಸಿ, ರಿಯಲ್ ಎಸ್ಟೆಟ್ ಉದ್ಯಮಿ ರಾಮಾಂಜನಪ್ಪ ಅವರು ನೀಡಿದ ದೂರಿನ ಮೆರೆಗೆ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಎಚ್.ಆರ್.ಕೃಷ್ಣಪ್ಪ ಹಾಗೂ ಹಣ ಸ್ವೀಕರಿಸುತ್ತಿದ್ದ ಖಾಸಗಿ ಎಂಜಿನಿಯರ್ ಅಚ್ಯುತ್ ಕುಮಾರ್ ಅವರನ್ನು ವಶಕ್ಕೆ ಪಡೆದರು.

‘ರಾಮಾಂಜನಪ್ಪ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಕುಪ್ಪಳ್ಳಿ ಗ್ರಾಮದ ಬಳಿ ಹೊಸ ಬಡಾವಣೆ ನಿರ್ಮಿಸಿದ್ದಾರೆ. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಆ ಬಡಾವಣೆಯ ಶೇ 60 ನಿವೇಶನಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಉಳಿದ ಶೇ 40ರಷ್ಟು ನಿವೇಶನಗಳ ಬಿಡುಗಡೆಗೆ ಅನುಮತಿಸಲು ಕೃಷ್ಣಪ್ಪ ಅವರು ₹8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಗಿ ನಮಗೆ ದೂರು ಬಂದಿತ್ತು’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ADVERTISEMENT

‘ಕೃಷ್ಣಪ್ಪ ಅವರ ಬೇಡಿಕೆಯಂತೆ ರಾಮಾಂಜನಪ್ಪ ಅವರು ಮೊದಲ ಕಂತಾಗಿ ₹3 ಲಕ್ಷ ನೀಡಲು ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಬಂದಿದ್ದರು. ಈ ವೇಳೆ ಕೃಷ್ಣಪ್ಪ ಅವರ ಸೂಚನೆಯಂತೆ ಅಚ್ಯುತ್ ಕುಮಾರ್ ಎಂಬುವರು ಆ ಹಣ ಸ್ವೀಕರಿಸುವಾಗ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.