
ಚಿಕ್ಕಬಳ್ಳಾಪುರ: ಆಹಾರ, ನೀರು ಮತ್ತು ಗಾಳಿಯನ್ನು ಖರೀದಿಸುತ್ತಿದ್ದೇವೆ. ಬಲಾಢ್ಯರಿಗೆ ಇವುಗಳ ಖರೀದಿ ಸುಲಭ. ಆದರೆ ಬಡವರಿಗೆ ಖರೀದಿ ದುಸ್ತರ ಎಂದು ನಟ ಕಿಶೋರ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ನಡೆದ ‘ಉಸಿರಿಗಾಗಿ ಹಸಿರು’ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಳಿ, ನೀರು ಮತ್ತು ಆಹಾರವನ್ನು ಪ್ಯಾಕೇಜ್ ಮಾಡಿದ್ದೇವೆ. ಇದೆಲ್ಲವನ್ನು ಖರೀದಿ ಮಾಡಬೇಕಾಗುತ್ತದೆ. ಹಣ ಇದ್ದವರಿಗೆ ಮಾತ್ರ ಖರೀದಿ ಎನ್ನುವ ಸ್ಥಿತಿ ಇದೆ. ಬಡವರಿಗೆ ಸಾಯುವ ಸ್ಥಿತಿ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಿತ್ಯ ತಯಾರಾಗುವ ಆಹಾರದಲ್ಲಿ ಶೇ 50ರಷ್ಟು ವ್ಯರ್ಥವಾಗುತ್ತಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವವರು ನಮ್ಮ ನಡುವೆ ಇದ್ದಾರೆ. ಇದರ ನಡುವೆಯೇ ದೊಡ್ಡ ಪ್ರಮಾಣದಲ್ಲಿ ಆಹಾರ ವ್ಯರ್ಥ ಮಾಡುತ್ತಿದ್ದೇವೆ ಎಂದರು.
ನಮ್ಮ ದೇಶ ಸಂಪದ್ಬರಿತವಾಗಿದೆ. ಸಂಪನ್ಮೂಲವೂ ವೈವಿಧ್ಯವಾಗಿದೆ. ಅವುಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದೇವೆ. ಅವುಗಳ ಬೆಲೆಯೇ ಗೊತ್ತಿಲ್ಲ. ಯಾವುದೇ ವಿಚಾರದಲ್ಲಿ ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ಆದರೆ ಜಾಗೃತಿ ಅತಿಮುಖ್ಯ ಎಂದು ಪ್ರತಿಪಾದಿಸಿದರು.
‘ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಕಾಲದಲ್ಲಿ ಪ್ರಕೃತಿ ಈ ಪ್ರಮಾಣದಲ್ಲಿ ಹಾಳಾಗಿರಲಿಲ್ಲ. ಆದರೆ ಈಗ ನಾವು ಬೇಕಾಬಿಟ್ಟಿಯಾಗಿ ಸಂಪನ್ಮೂಲ ಬಳಸುತ್ತಿದ್ದೇವೆ. ಸಂಪನ್ಮೂಲವನ್ನು ಅಗತ್ಯಕ್ಕಿಂತ ಹೆಚ್ಚು ಬಳಸುತ್ತಿದ್ದೇವೆ. ಪರಿಸರ ಹಾಳಾಗುತ್ತಿದೆ’ ಎಂದು ಹೇಳಿದರು.
ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮೇಶ್ ಬಿ. ಮಾತನಾಡಿ, ಉಸಿರಿಗಾಗಿ ಹಸಿರು ಸಂಸ್ಥೆಯು ಶಾಲಾ, ಕಾಲೇಜುಗಳನ್ನು ಮುಖ್ಯವಾಗಿಟ್ಟುಕೊಂಡು ಸಸಿಗಳನ್ನು ನೆಡುತ್ತಿದೆ. ಆ ನೆಟ್ಟ ಸಸಿಗಳನ್ನು ಜವಾಬ್ದಾರಿಯುತವಾಗಿ ಪೋಷಿಸುತ್ತಿದೆ. ಪರಿಸರದ ಬಗ್ಗೆ ಈ ರೀತಿಯ ಬದ್ಧತೆಯ ಕೆಲಸಗಳು ನಡೆಯಬೇಕು ಎಂದು ಆಶಿಸಿದರು.
ಪರಿಸರದ ಬಿಕ್ಕಟ್ಟನ್ನು ಜಗತ್ತು ಎದುರಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ನಮ್ಮೊಳಗೆ ಪರಿಸರಕ್ಕೆ ಸಂಬಂಧಿಸಿದ ಕಾಳಜಿ ಮತ್ತು ಜವಾಬ್ದಾರಿಯನ್ನು ಈ ಕಾರ್ಯಕ್ರಮ ಹೆಚ್ಚು ಮಾಡಿದೆ ಎಂದು ಹೇಳಿದರು.
‘ನಮ್ಮ ಆಸೆ, ಅಗತ್ಯಗಳನ್ನು ಪೂರೈಸಿಕೊಳ್ಳಲು ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚು ಬಳಸುತ್ತೇವೆ. ಪರಿಸರ ಪೂರ್ಣ ಹಾಳು ಮಾಡಿದ್ದೇವೆ. ಜೀವ ವೈವಿಧ್ಯವನ್ನು ಅನಗತ್ಯವಾಗಿ ಬಳಸಿದರೆ ಭವಿಷ್ಯದಲ್ಲಿ ಮನುಷ್ಯ ಕುಲಕ್ಕೆ ಆಪತ್ತು’ ಎಂದು ಕಳವಳ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಗಿಡ ನೆಡುವುದು ಕಾರ್ಯಕ್ರಮಷ್ಟೇ ಆಗಬಾರದು. ಅದು ಸಂಕಲ್ಪ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಲೋಕನಾಥ್ ಎನ್. ಮಾತನಾಡಿ, ‘ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ. ಇದು ಮಾರಕವಾದುದು. ಹಾಲಿನ ಕವರ್ ಸೇರಿದಂತೆ ವಿವಿಧ ರೂಪಗಳಲ್ಲಿ ನಮ್ಮ ಮನೆಗಳನ್ನು ಪ್ಲಾಸ್ಟಿಕ್ ಪ್ರವೇಶಿಸಿದೆ. ಆದರೆ ಅವುಗಳನ್ನು ಯಾವ ರೀತಿಯಲ್ಲಿ ಪುನರ್ ಬಳಕೆ ಮತ್ತು ವಿಲೇವಾರಿ ಮಾಡಬೇಕು ಎನ್ನುವ ಅರಿವು ನಮಗೆ ಇರಬೇಕು’ ಎಂದು ಹೇಳಿದರು.
ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಗಂಗಾಧರ ರೆಡ್ಡಿ ಎನ್. ಮಾತನಾಡಿ, ‘ನಾವು ನೆಟ್ಟ ಸಸಿಗಳ ಪೈಕಿ ಶೇ 70ರಷ್ಟು ಮರವಾಗಿವೆ. ಮಕ್ಕಳು, ಯುವ ಸಮುದಾಯದಲ್ಲಿ ಪರಿಸರ ಕಾಳಜಿಯನ್ನು ಬಿತ್ತಬೇಕು. ಈ ದೃಷ್ಟಿಯಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ಉಸಿರಿಗಾಗಿ ಹಸಿರು ಸಂಸ್ಥೆ ಕಾರ್ಯದರ್ಶಿ ವೆಂಕಟರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.