ಚಿಂತಾಮಣಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.)ಯಲ್ಲಿ ಸಮೃದ್ಧ ಕೃಷಿ ವಿಕಸಿತ ಭಾರತ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ನಗರದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿಮೇಳದಲ್ಲಿ ಜೋಳ, ಸೂರ್ಯಕಾಂತಿ, ಹರಳು, ಕಪ್ಪು ಅರಿಶಿನ ಮತ್ತು ಅರಿಶಿಣ ಬೆಳೆಗಳಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿವಿಧ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ಸಿದ್ಧಪಡಿಸಿ, ರೈತರಿಗೆ ಮಾಹಿತಿ ನೀಡಲಾಗುವುದು. ರೈತ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವಿರುತ್ತದೆ ಎಂದರು.
ಯಂತ್ರೋಪಕರಣಗಳು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳ ವಸ್ತು ಪ್ರದರ್ಶನವಿರುತ್ತದೆ. ರೈತರು ನೇರವಾಗಿ ವೀಕ್ಷಿಸಿ ಅವುಗಳ ಕಾರ್ಯವೈಖರಿಯನ್ನು ತಿಳಿದುಕೊಳ್ಳಬಹುದು. ರೈತರು, ರೈತ ಮಹಿಳೆಯರು, ಕೃಷಿ ಸಖಿಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.