
ಚಿಕ್ಕಬಳ್ಳಾಪುರ: ನಗರಸಭೆಗೆ ಸೇರಿದ ಮೂಲೆ ನಿವೇಶನವನ್ನು ಪೌರಾಯುಕ್ತರು ಅಕ್ರಮವಾಗಿ ಪರಭಾರೆ ಮಾಡುತ್ತಿರುವುದನ್ನು ಕೂಡಲೇ ರದ್ದುಮಾಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್ ದೂರು ಸಲ್ಲಿಸಿದ್ದಾರೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಮತ್ತು ನಗರ ಯೋಜನಾ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಯ ವಾರ್ಡ್ ಸಂಖ್ಯೆ 6ರ ಮುನ್ಸಿಪಲ್ ಬಡಾವಣೆಯ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿರುವ ನಗರಸಭೆ ಆಸ್ತಿಸಂಖ್ಯೆ: 1478, 41*28 ಅಡಿಗಳ ಮೂಲೆ ನಿವೇಶನವನ್ನು ಪೌರಾಯುಕ್ತ ಮನ್ಸೂರ್ ಅಲಿ ಕೇವಲ ₹26,268 ಪಾವತಿಸಿ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ. ಈ ನಿವೇಶನ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.
ನಿವೇಶನ ಪರಭಾರೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವಂತಹ ವಿಷಯಗಳ ಅಂತಿಮ ವಿಷಯವನ್ನಾಗಿ ಸೇರಿಸಿ, ನಗರಸಭಾ ಮಾಜಿ ಸದಸ್ಯ ಜಿ.ಮುನಿಕೃಷ್ಣಪ್ಪ ಎಂಬುವರ ಹೆಸರಿಗೆ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ.
ಈ ಬಗ್ಗೆ ಈ ಅವಧಿಯ ಅಧ್ಯಕ್ಷ ಎ.ಗಜೇಂದ್ರ ಅವರನ್ನು ವಿಚಾರಿಸಲಾಗಿ ‘ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಭೆಯಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಇದು ಪೌರಾಯುಕ್ತ ಮನ್ಸೂರ್ ಅಲಿ ಅವರ ಕೈವಾಡ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಸದಸ್ಯರನ್ನು ವಿಚಾರಿಸಿದಾಗ ಸಭೆ ಅಥವಾ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಲ್ಲ ಸದಸ್ಯರು ಹಾಗೂ ಅಧ್ಯಕ್ಷರ ವಿಚಾರಣೆ ನಡೆಸಲು ತಮ್ಮಲ್ಲಿ ಕೋರುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ನಿವೇಶನ ಪಡೆಯಲು ಈ ಹಿಂದೆ ಕೆಲವರು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯ ಸಾರ್ವಜನಿಕ ಪ್ರಕಟಣೆ ಸಹ ಹೊರಡಿಸಿತ್ತು.
ಈ ಸ್ವತ್ತು 1988-89ನೇ ಸಾಲಿನ ಅಸೆಸ್‍ಮೆಂಟ್ ಪುಸ್ತಕದಲ್ಲಿ 30*40 ಅಡಿ ಅಳತೆಯ ನಿವೇಶನಕ್ಕೆ ಕೆಲವು ವ್ಯಕ್ತಿಗಳ ಹೆಸರನ್ನು ಅಕ್ರಮವಾಗಿ ನಮೂದಿಸಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಈ ಸ್ವತ್ತಿನ ಹಕ್ಕುಳ್ಳವರು (ಕ್ಲೈಮ್‍ದಾರರು) ಯಾರಾದರೂ ಇದ್ದರೆ, ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ದಾಖಲಾತಿ ಸಲ್ಲಿಸಲು ಮತ್ತು ಈ ಅವಧಿ ಮುಗಿದ ಮೇಲೆ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳಾಗಲೀ ಈ ಸ್ವತ್ತಿನ ಬಗ್ಗೆ ಹಕ್ಕುದಾರರು ಎಂದು ಪ್ರತಿಪಾದಿಸಿದರೆ ಪರಿಗಣಿಸುವುದಿಲ್ಲ ಎಂಬ ಅಂಶದೊಂದಿಗೆ ಪ್ರಕಟಣೆ ಸಹ ಹೊರಡಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಹಿಂದಿನ ಪತ್ರಿಕಾ ಪ್ರಕಟಣೆಯನ್ನೂ ಅಡಕಗೊಳಿಸಿದ್ದಾರೆ.
ತದನಂತರ ಯಾರೂ ದಾಖಲೆಗಳನ್ನು ಕಾಲಾವಧಿಯಲ್ಲಿ ಸಲ್ಲಿಸದ ಕಾರಣ ನಗರಸಭೆಯಿಂದ ‘ಇದು ನಗರಸಭೆ ಆಸ್ತಿ’ ಎಂದು ನಾಮಫಲಕ ಅಳವಡಿಸಲಾಗಿದೆ. ಇಂದಿಗೂ ನಾಮಫಲಕ ಹಾಗೆಯೇ ಇದೆ.
ಈ ಬಡಾವಣೆಯು 50 ವರ್ಷಗಳ ಹಿಂದಿನ ಬಡಾವಣೆಯಾಗಿದೆ. ಮುನಿಸಿಫಲ್ ಬಡಾವಣೆ ಎಂದು ನಾಮಕರಣವಾಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರತಿಷ್ಠಿತ ಬಡಾವಣೆ ಆಗಿರುತ್ತದೆ. ಸದರಿ ಮೂಲೆ ನಿವೇಶನದ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಅಂದಾಜು ₹70 ಲಕ್ಷಕ್ಕೂ ಹೆಚ್ಚಿಗೆ ಇರುತ್ತದೆ. ಆದರೆ ಈ ಪರಭಾರೆ ವ್ಯವಹಾರದಲ್ಲಿ ಪೌರಾಯುಕ್ತರು ಅವ್ಯವಹಾರ ಮಾಡಿರಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿವೇಶನ ಮಂಜೂರಾತಿಯನ್ನು ರದ್ದುಗೊಳಿಸಬೇಕು ಎಂದು ಅಮೀರ್ ಮಹಮದ್ ಸಾಧಿಕ್ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.