ಗೌರಿಬಿದನೂರು: ನಗರದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಮುಂಭಾಗದಲ್ಲಿ ಸಿಐಟಿಯು ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಕಪ್ಪುಪಟ್ಟಿ ಧರಿಸಿ, ಕಪ್ಪುದಿನ ಆಚರಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಅಂಗನವಾಡಿ ನೌಕರರ ಅಖಿಲ ಭಾರತ ಫೆಡರೇಶನ್ ವತಿಯಿಂದ ದೇಶದಾದ್ಯoತ ಕಪ್ಪು ದಿನ ಆಚರಿಸಲಾಗುತ್ತಿದೆ. ಅಂಗನವಾಡಿಗಳಲ್ಲಿ 6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ರಕ್ತಹೀನತೆ ಕಡಿಮೆ ಮಾಡಲು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಎಫ್ಆರ್‌ಎಸ್ ಯೋಜನೆಯಿಂದ ಫಲಾನುಭವಿಯ ಮುಖಚಿತ್ರ ಸೆರೆ ಹಿಡಿದು ಅಪ್ಲೋಡ್ ಮಾಡಲು ಸಮಸ್ಯೆಯಾಗುತ್ತಿದೆ ಎಂದರು.
ಇಲಾಖೆಗೆ ಅಪ್ಲೋಡ್ ಮಾಡುವಾಗ ಕೆಲವು ಫಲಾನುಭವಿಗಳ ಮುಖಚಿತ್ರ ಸರಿಯಾಗಿ ಸೆರೆ ಹಿಡಿಯಲಾಗುವುದಿಲ್ಲ. ಮಕ್ಕಳ ಆಧಾರ್ ಕಾರ್ಡ್ ಇರುವುದಿಲ್ಲ. ಕೆಲವು ಫಲಾನುಭವಿಗಳ ಬಳಿ ಫೋನ್ ನಂಬರ್ ಇರುವುದಿಲ್ಲ. ಕೆಲವರಿಗೆ ಒಟಿಪಿ ಹೇಳಲು ಬರುವುದಿಲ್ಲ. ಸರ್ವರ್ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಫಲಾನುಭವಿಗಳು ಆಹಾರ ಪದಾರ್ಥಗಳಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ಹೀಗಾಗಿ, ಎಫ್ಆರ್‌ಎಸ್ ಅನ್ನು ರದ್ದುಪಡಿಸಿ, ಹಳೆಯ ಯೋಜನೆ ಐಎಸ್‌ಡಿಎಸ್ ಯೋಜನೆಯನ್ನೇ ಮುಂದುವರೆಸಬೇಕು. ಅಂಗನವಾಡಿ ಕಾರ್ಯಕರ್ತಯರಿಗೆ ಉದ್ಯೋಗ ಭದ್ರತೆ ಮತ್ತು ಉತ್ತಮ ವೇತನ ನೀಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಅಂಗನವಾಡಿ ಜಿಲ್ಲಾ ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ, ಆನೂಡಿ ನಾಗರಾಜ್, ಜಯಮಂಗಳ, ಸರಸ್ವತಮ್ಮ, ನಾಗರತ್ನಮ್ಮ, ಸುಗುಣಮ್ಮ, ವಿಜಯ ಬಾಯಿ, ರಾಮಲಕ್ಷ್ಮಮ್ಮ, ರಾಧಮ್ಮ, ಗಂಗ ರತ್ನಮ್ಮ, ಶಾಮಲಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.