ADVERTISEMENT

ಗೌರಿಬಿದನೂರು: ಕೋವಿಡ್‌ 19 ಪ್ರಕರಣಗಳು ಹೆಚ್ಚು, ಅನ್ನಕ್ಕೆ ಕಲ್ಲು ಬೀಳುವ ಆತಂಕ

ತಾಲ್ಲೂಕಿನಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಬದಲಾದ ಪರಸ್ಥಳದ ಜನರ ನೋಟ

ಎ.ಎಸ್.ಜಗನ್ನಾಥ್
Published 11 ಏಪ್ರಿಲ್ 2020, 19:45 IST
Last Updated 11 ಏಪ್ರಿಲ್ 2020, 19:45 IST
ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿಯಲ್ಲಿ ಹಪ್ಪಳ ತಯಾರಿಸುವಲ್ಲಿ ನಿರತರಾದ ದಂಪತಿ. ಪ್ರಜಾವಾಣಿ ಸಂಗ್ರಹ ಚಿತ್ರ.
ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿಯಲ್ಲಿ ಹಪ್ಪಳ ತಯಾರಿಸುವಲ್ಲಿ ನಿರತರಾದ ದಂಪತಿ. ಪ್ರಜಾವಾಣಿ ಸಂಗ್ರಹ ಚಿತ್ರ.   

ಗೌರಿಬಿದನೂರು: ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಾಲ್ಲೂಕುಮಟ್ಟದ ಚಳುವಳಿಯ ಕೇಂದ್ರವಾಗಿದ್ದ ವಿದುರಾಶ್ವತ್ಥ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯನವರ ಕಾರಣದಿಂದಾಗಿ ಆಗಾಗ ರಾಜ್ಯದ ಜನರ ಸ್ಮರಣೆಗೆ ಬರುತ್ತಿದ್ದ ಗೌರಿಬಿದನೂರಿನ ಹೆಸರು ಇಂದು ಕೋವಿಡ್‌–19 ನಿಂದಾಗಿ ರಾಜ್ಯದಲ್ಲಿ ಜನಜನಿತವಾಗುತ್ತಿರುವುದು ತಾಲ್ಲೂಕಿನ ಜನರ ಬದುಕಿನಲ್ಲಿ ತಲ್ಲಣ ಮೂಡಿಸುತ್ತಿದೆ.

ಈ ಹಿಂದೆಲ್ಲ ರಾಜ್ಯದ ವಿವಿಧ ಭಾಗಗಳಿಗೆ ತಾಲ್ಲೂಕಿನ ಜನ ಹೋದಾಗ ವಿದುರಾಶ್ವತ್ಥ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯನವರ ಕಾರಣಕ್ಕೆ ಹೆಮ್ಮೆಯಿಂದ ಗೌರಿಬಿದನೂರಿನ ಬಗ್ಗೆ ಆಡಿಕೊಳ್ಳುತ್ತಿದ್ದ ಮಾತುಗಳ ಜಾಗದಲ್ಲಿ ಇದೀಗ ಭೀತಿಯ ನಿಟ್ಟುಸಿರಿನ ಜತೆಗೆ ತಾಲ್ಲೂಕಿನ ಜನರನ್ನು ಪರಸ್ಥಳದವರು ಸಂಶಯದ ದೃಷ್ಟಿಯಿಂದ ನೋಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ದುಗುಡ ಪ್ರಜ್ಞಾವಂತರ ಜೀವ ಹಿಂಡುತ್ತಿದೆ.

ಕುಡಿಯುವ ನೀರಿನ ಹಾಹಾಕಾರದ ನಡುವೆಯೂ ಸ್ವಾವಲಂಬಿ ಬದುಕು ರೂಪಿಸಿಕೊಂಡು ಬಾಳುತ್ತಿದ್ದ ಜನರಿಗೆ ಸದ್ಯ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು, ಮೇಲಿಂದ ಮೇಲೆ ವರದಿಯಾಗುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಇರುಸುಮುರುಸಿಗೆ ಒಳಗಾಗುವ ಸನ್ನಿವೇಶಗಳು ಎದುರಿಸುವ ಅನುಭವಗಳಾಗುತ್ತಿವೆ.

ADVERTISEMENT

ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಪ್ರಸ್ತುತ 12ಕ್ಕೆ ಏರಿಕೆಯಾಗಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದ್ದು ಒಂದೆಡೆಯಾದರೆ, ಹೊಟ್ಟೆಪಾಡಿಗಾಗಿ ನೆರೆ ಜಿಲ್ಲೆಗಳ ಗ್ರಾಹಕರನ್ನು ಅವಲಂಬಿಸಿದ ಜನರಿಗೆ, ವಿವಿಧ ವೃತ್ತಿಗಳನ್ನು ಮಾಡುತ್ತಿರುವವರ ತಮ್ಮ ಅನ್ನಕ್ಕೆ ಕಲ್ಲು ಬೀಳುವ ಬೇಗುದಿ ಶುರುವಾಗಿದೆ.

ತಾಲ್ಲೂಕಿನಲ್ಲಿ ಬೆಳೆದ ತರಕಾರಿ, ಹಣ್ಣು, ರೇಷ್ಮೆ, ಹಾಲಿನ ಜತೆಗೆ ಹಪ್ಪಳ, ಸಂಡಿಗೆ, ಮಸಾಲೆ ಪುಡಿಗಳಂತಹ ಗೃಹ ಕೈಗಾರಿಕೆ ಉತ್ಪನ್ನಗಳ ಮಾರಾಟದ ಮೇಲೆ ಕೊರೊನಾ ಕರಿನೆರಳು ಬೀಳಲು ಆರಂಭಿಸಿದೆ ಎನ್ನುವ ಮಾತುಗಳು ತಾಲ್ಲೂಕಿನ ಜನರಲ್ಲಿ ವ್ಯಕ್ತವಾಗುತ್ತಿವೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿನ ಯುವಕರು ಮನೆಯಲ್ಲಿ ನಿತ್ಯ ಹಪ್ಪಳ, ಸಂಡಿಗೆ, ಮಸಾಲೆ ಪದಾರ್ಥಗಳನ್ನು ತಯಾರಿಸಿ ಅವುಗಳನ್ನು ನಗರ ಪ್ರದೇಶಗಳಲ್ಲಿ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಅದೇ ರೀತಿ ರೈತರು ತಾವು ಬೆಳೆದ ಸೊಪ್ಪು, ತರಕಾರಿಗಳನ್ನು ನೆರೆಹೊರೆಯ ಜಿಲ್ಲೆಗಳಿಗೂ ಹೋಗಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ನೆರೆ ಹೊರೆಯ ಮಾರುಕಟ್ಟೆಗಳಲ್ಲಿ ಗೌರಿಬಿದನೂರಿನ ಮಾಲು ಎಂದರೆ ಸಾಕು ಗ್ರಾಹಕರು ಖರೀದಿಗೆ ತುಸು ಯೋಚಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಆದಷ್ಟು ಬೇಗ ಮಹಾಮಾರಿ ಕೊರೊನಾ ಸೋಂಕಿನಿಂದ ತಾಲ್ಲೂಕನ್ನು ಮುಕ್ತಗೊಳಿಸಿ, ಮೊದಲಿನಂತೆ ಜನರು ನೆಮ್ಮದಿಯಿಂದ ಮುಕ್ತವಾಗಿ ಬದುಕುವಂತಹ ವಾತಾವರಣ ಕಲ್ಪಿಸಲು ಸರ್ಕಾರ ಆದ್ಯತೆ ಮೆರೆಗೆ ತಾಲ್ಲೂಕಿನತ್ತ ಗಮನ ಹರಿಸಬೇಕು. ಇಲ್ಲದೆ ಹೋದರೆ ಸ್ಥಳೀಯ ಜನರ ಬದುಕು, ಸಂಬಂಧಗಳ ಮೇಲೆ ಕೋವಿಡ್ ಮಾಯದ ಗಾಯ ಮಾಡಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.