ADVERTISEMENT

ದಲ್ಲಾಳಿ, ಏಜೆಂಟರನ್ನು ದೂರವಿಡಿ

ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:54 IST
Last Updated 2 ಮಾರ್ಚ್ 2021, 4:54 IST
ಚಿಂತಾಮಣಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು
ಚಿಂತಾಮಣಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು   

ಚಿಂತಾಮಣಿ: ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ ಇಲಾಖೆಗಳಲ್ಲಿ ದಲ್ಲಾಳಿಗಳು ಹಾಗೂ ಏಜೆಂಟರ ಹಾವಳಿಯನ್ನು ತಡೆಗಟ್ಟಿ, ನೈಜ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ಎಂ.ಕೃಷ್ಣಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿದ ಅವರು, ‘ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಗಳು ಇದ್ದರೂ ಅಧಿಕಾರಿಗಳು ಸೂಕ್ತ ಪ್ರಚಾರ ನೀಡುತ್ತಿಲ್ಲ. ರೈತರಿಗೆ ಅವುಗಳ ಮಾಹಿತಿಯೇ ದೊರೆಯುವು
ದಿಲ್ಲ. ಸದಾ ಕಚೇರಿಗಳ ಸುತ್ತಮುತ್ತಲು ತಿರುಗಾಡುವ ದಲ್ಲಾಳಿಗಳು ಲಾಭ ಮಾಡಿ
ಕೊಳ್ಳುತ್ತಿದ್ದಾರೆ. ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿಯನ್ನು ಅಧಿಕಾರಿಗಳು ನೀಡದಿರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ’ ಎಂದರು.

‘ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಕಾಗೆ, ಗುಬ್ಬಚ್ಚಿ ಕಥೆಗಳನ್ನು ಹೇಳಲು ಬರಬೇಡಿ. ತಮ್ಮ ತಮ್ಮ ಇಲಾಖೆಗಳ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ವಿವಿಧ ಯೋಜನೆಗಳಲ್ಲಿ ಮಂಜೂರಾದ ಅನುದಾನ, ಫಲಾನುಭವಿಗಳ ಆಯ್ಕೆ, ಮಂಜೂರಾದ ಸೌಲಭ್ಯಗಳ ವಿತರಣೆ ಮತ್ತಿತರ ಎಲ್ಲ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು’ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.

ADVERTISEMENT

ದೊಡ್ಡ ಬೊಮ್ಮನಹಳ್ಳಿ ಮರಗಳ ಕಡಿತದ ಬಗ್ಗೆ ಮೊಕದ್ದಮೆ ದಾಖಲಿ
ಸಿರುವುದರ ಕುರಿತು ಪರೋಕ್ಷವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಅಲ್ಲಿ ಮಾತ್ರ ಕೇಸು ಮಾಡಿದ್ದೀರಿ. ಪಣಸಚೌಡನಹಳ್ಳಿ- ವಿಶ್ವನಾಥಪುರದ ರಸ್ತೆಯಲ್ಲಿ ಎಷ್ಟು ಮರಗಳನ್ನು ಕಡಿದಿದ್ದಾರೆ. ಅಲ್ಲಿ ಏಕೆ ಕೇಸು ದಾಖಲಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. 67,383 ಬಿಪಿಎಲ್ ಕಾರ್ಡ್‌ಗಳನ್ನು ಪರಿಶೀಲಿಸಿ ಶ್ರೀಮಂತರು ಇದ್ದರೆ ತಕ್ಷಣ ರದ್ದು ಗೊಳಿಸಿರಿ’ ಎಂದು ಶಾಸಕರು ಹೇಳಿದರು.

ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸ
ಬೇಕು. ಬೇಸಿಗೆಯ ಸಮಸ್ಯೆಯನ್ನು ಪರಿಹರಿಸಲು ಈಗಿನಿಂದಲೇ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೊರೊನಾ ಪೂರ್ವದಲ್ಲಿದ್ದ ಎಲ್ಲ ಸಂಚಾರ ಮಾರ್ಗಗಳಲ್ಲೂ ಬಸ್‌ಗಳ ಸಂಚಾರ ಆರಂಭಿಸಬೇಕು. ಬೆಳಿಗ್ಗೆ ಮತ್ತು ಮಧ್ಯಾಹ್ನದ ನಂತರ ವಿದ್ಯಾರ್ಥಿಗಳ ಸಂಚಾರದ ಸಮಯದಲ್ಲಿ ಸಮರ್ಪಕವಾಗಿ ಬಸ್‌ಗಳನ್ನು ಓಡಿಸಬೇಕು. ಲಾಭದಾಯಕ್ಕಾಗಿ ಸಂಸ್ಥೆ ಎಂಬಂತೆ ವರ್ತಿಸದೆ ಸಾರ್ವಜನಿಕರ ಸೇವೆಗಾಗಿ ಇರುವ ಸಂಸ್ಥೆ ಎಂದು ಅರಿತುಕೊಳ್ಳಬೇಕು ಎಂದರು.

ತಹಶೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಸೇರಿದಂತೆ ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.