ADVERTISEMENT

ಬಾಬು ಆತ್ಮಹತ್ಯೆ | ನಿಷ್ಪಕ್ಷಪಾತ ತನಿಖೆ: ಸಚಿವ ಡಾ.ಎಂ.ಸಿ. ಸುಧಾಕರ್

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಖಚಿತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:26 IST
Last Updated 10 ಆಗಸ್ಟ್ 2025, 2:26 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಚಿಂತಾಮಣಿ: ಜಿಲ್ಲಾ ಪಂಚಾಯಿತಿ ಮುಖ್ಯಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣ ಪ್ರಕರಣದ ತನಿಖೆಯನ್ನು ಯಾವುದೇ ಹಸ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಭರವಸೆ ನೀಡಿದರು. 

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಆತ್ಮಹತ್ಯೆ ಮಾಡಿಕೊಂ‍‍ಡ ಬಾಬು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು, ಸುಮಾರು ₹30–₹40 ಲಕ್ಷ ವಂಚನೆಗೆ ಒಳಗಾಗಿದ್ದಾರೆ. ಬಾಬು ಯಾರು ಎಂಬುದು ನಮಗೆ ಗೊತ್ತಿಲ್ಲ. ಬಾಬು ಆತ್ಮಹತ್ಯೆಗೆ ಮುಂಚೆ ಬರೆದಿದ್ದು ಎನ್ನಲಾದ ಡೆತ್‌ನೋಟ್ ಸೃಷ್ಟಿ ಮಾಡಲಾಗಿದೆಯೊ ಗೊತ್ತಿಲ್ಲ’ ಎಂದರು.

ಡೆತ್‌ನೋಟ್‌ನಲ್ಲಿ ಮೂರ್ನಾಲ್ಕು ಬಾರಿ ಸಂಸದರ ಹೆಸರು ಬರೆಯಲಾಗಿದೆ. ಮೊದಲ ಹೆಸರು ಅವರದೇ ಇದೆ. ವಿವರಣೆ ನೀಡುವಾಗಲೂ, ಸಂಸದರ ಹೆಸರು ಉಲ್ಲೇಖವಾಗಿದೆ. ನೇರವಾಗಿ ಸಂಸದ ಡಾ.ಕೆ. ಸುಧಾಕರ್ ಅವರ ವಿರುದ್ಧವೇ ಆರೋಪ ಮಾಡಲಾಗಿದೆ. ಇದು ಹೇಗೆ ರಾಜಕೀಯ ಪ್ರೇರಿತವಾಗುತ್ತದೆ ಎಂದು ಪ್ರಶ್ನಿಸಿದರು. 

ADVERTISEMENT

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊನ್ನಣ್ಣ ಅವರ ಮೇಲೆ ಬಿಜೆಪಿಗರು ಏನೆಲ್ಲಾ ಹೋರಾಟ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ಪೋಸ್ಟರ್ ಹಾಕಿದ್ದರು. ಪೊಲೀಸರಿಗೆ ದೂರು ನೀಡಲಾಗಿತ್ತು. ಬೇರೆಯವರ ವಿರುದ್ಧ ಆಪಾದನೆ ಬಂದಾಗ, ರಾಜಕೀಯ ಪ್ರೇರಿತವಾಗದು. ಆದರೆ, ಬಿಜೆಪಿಗರ ಮೇಲೆ ಆರೋಪ ಬಂದರೆ, ರಾಜಕೀಯ ಪ್ರೇರಿತವಾಗುತ್ತದೆ. ಇದು ಕೀಳುಮಟ್ಟದ ಮನಸ್ಥಿತಿ ತೋರಿಸುತ್ತದೆ ಎಂದರು. 

‘ಸುಖಾಸುಮ್ಮನೇ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಬಾಬು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ವಂಚನೆಗೆ ತುತ್ತಾಗಿರುವ ಪರಿಶಿಷ್ಟ ಸಮುದಾಯದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೈತಿಕತೆ ಇದ್ದರೆ, ಅವರು ಕಾಂಗ್ರೆಸ್ ನಾಯಕರ ವಿಚಾರದಲ್ಲಿ ನಡೆದುಕೊಂಡಂತೆ ಈ ಪ್ರಕರಣದಲ್ಲೂ ನಡೆದುಕೊಳ್ಳಲಿ. ರಾಜಕೀಯ ಹಗೆತನ ತೀರಿಸಿಕೊಳ್ಳಲು ಕೀಳುಮಟ್ಟದ ರಾಜಕೀಯಕ್ಕೆ ನಾವು ಇಳಿಯುವುದಿಲ್ಲ’ ಎಂದರು.

ಸಂಸದ ಸುಧಾಕರ್ ಮತ್ತು ಅವರ ಶಿಷ್ಯರು ಏನೇನು ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗುತ್ತೆ. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಅಧಿಕಾರದಲ್ಲಿದ್ದಾಗ ಸಾಮಾನ್ಯ ನಾಗರಿಕರು, ಮುಖಂಡರು ಮತ್ತು ಮಾಧ್ಯಮದವರ ಮೇಲೆ ಹೇಗೆ ಗಧಾಪ್ರಹಾರ ನಡೆಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.