ADVERTISEMENT

ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ಬಿ.ಎನ್. ಬಚ್ಚೇಗೌಡ ವಿದಾಯ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲು ಕಾರಣರಾದ ನಾಯಕ

ಡಿ.ಎಂ.ಕುರ್ಕೆ ಪ್ರಶಾಂತ
Published 23 ಆಗಸ್ಟ್ 2023, 5:49 IST
Last Updated 23 ಆಗಸ್ಟ್ 2023, 5:49 IST
2019ರ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಮಯದಲ್ಲಿ ಬೆಂಬಲಿಗರೊಂದಿಗೆ ವಿಜಯದ ಚಿಹ್ನೆ ತೋರಿಸಿದ ಬಿ.ಎನ್.ಬಚ್ಚೇಗೌಡ (ಸಂಗ್ರಹ ಚಿತ್ರ)
2019ರ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಮಯದಲ್ಲಿ ಬೆಂಬಲಿಗರೊಂದಿಗೆ ವಿಜಯದ ಚಿಹ್ನೆ ತೋರಿಸಿದ ಬಿ.ಎನ್.ಬಚ್ಚೇಗೌಡ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿಸಿದ ಕೀರ್ತಿ ಬಿ.ಎನ್.ಬಚ್ಚೇಗೌಡ ಅವರಿಗೆ ಸಲ್ಲುತ್ತದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಮ್ಮದೇ ಆದ ರಾಜಕೀಯ ಹಿಡಿತ ಹೊಂದಿರುವ ಬಚ್ಚೇಗೌಡರು ಐದು ದಶಕಗಳ ಸುದೀರ್ಘ ಚುನಾವಣಾ ರಾಜಕಾರಣಕ್ಕೆ ವಿರಾಮ ನೀಡಿದ್ದಾರೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕಾರಣದಲ್ಲಿರುವೆ ಎನ್ನುವ ಮೂಲಕ ಸಕ್ರಿಯ ರಾಜಕಾರಣದಿಂದ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಬಚ್ಚೇಗೌಡರು ಪಾಲ್ಗೊಳ್ಳುತ್ತಿರಲಿಲ್ಲ. 

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ ಬಿ.ಎನ್.ಬಚ್ಚೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು. ಬಿ.ಎನ್.ಬಚ್ಚೇಗೌಡ ಅವರು 4,15,280 ಮತಗಳನ್ನು ಪಡೆದು ಕೇವಲ 9,520 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ADVERTISEMENT

2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದ ಅವರು 7,45,912 ಮತಗಳನ್ನು ಪಡೆದರು. 1,82,110 ಮತಗಳ ಅಂತರದಿಂದ ವೀರಪ್ಪ ಮೊಯಿಲಿ ಅವರನ್ನು ಪರಾಭವಗೊಳಿಸಿದರು.

ಬಚ್ಚೇಗೌಡ ಅವರ ರಾಜಕೀಯ ಕರ್ಮಭೂಮಿ ಹೊಸಕೋಟೆ ವಿಧಾನಸಭಾ ಕ್ಷೇತ್ರ. 1978ರ ಚುನಾವಣೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದ ಮೂಲಕ ಬಚ್ಚೇಗೌಡರು ವಿಧಾನಸಭೆಗೆ ಆಯ್ಕೆ ಆದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1985, 1994, 1999 ಮತ್ತು 2008ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. ಸಚಿವರಾಗಿಯೂ ಗೌಡರು ಕೆಲಸ ಮಾಡಿದ್ದಾರೆ. ಜನತಾ ಪಕ್ಷದಲ್ಲಿ ಸುದೀರ್ಘ ಅವಧಿಯಲ್ಲಿ ಗುರುತಿಸಿಕೊಂಡಿದ್ದ ಅವರು 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾದರು. ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಈ ಕಾರಣದಿಂದ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಬಚ್ಚೇಗೌಡರು ವರ್ಚಸ್ಸು ಹೊಂದಿದ್ದರು. 

ಪಕ್ಷ, ಕ್ಷೇತ್ರದಿಂದ ಅಂತರ: ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಬಚ್ಚೇಗೌಡ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿರಲಿಲ್ಲ. ವಯಸ್ಸಿನ ಕಾರಣದಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಚ್ಚೇಗೌಡರು ಸ್ಪರ್ಧಿಸುವುದಿಲ್ಲ. ಈ ಕಾರಣದಿಂದ ಸಕ್ರಿಯವಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. 

ಆದರೆ ಬಚ್ಚೇಗೌಡ ಅವರು ಮಾತ್ರ ಬಹಿರಂಗವಾಗಿ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿರಲಿಲ್ಲ. ಆದರೆ ಮಂಗಳವಾರ ನಗರದಲ್ಲಿ ಮಾತನಾಡಿದ ಅವರು ಚುನಾವಣಾ ರಾಜಕಾರಣಕ್ಕೆ ವಿದಾಯದ ಮಾತುಗಳನ್ನಾಡಿದ್ದಾರೆ. 

2022ರ ನವೆಂಬರ್ 30ರಂದು ದಿಶಾ ಸಮಿತಿ ಸಭೆ ನಡೆಸಿದ್ದರು. ಆ ನಂತರ ಇಲ್ಲಿಯವರೆಗೂ ಒಂದೂ ಸಭೆಯನ್ನು ಬಚ್ಚೇಗೌಡರು ನಡೆಸಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಲಿಲ್ಲ. ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಪ್ರಚಾರಕ್ಕೆ ಬಂದರೂ ವೇದಿಕೆ ಹಂಚಿಕೊಳ್ಳಲಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಪ್ರಚಾರ ನಡೆಸಲಿಲ್ಲ. ಹೀಗೆ ಪಕ್ಷದ ವೇದಿಕೆಗಳಿಂದ ದೂರ ಸರಿದಿದ್ದರು.

ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇರಲಿಲ್ಲ. ಈ ಮಾತು ಬಿಜೆಪಿ ಹಾಗೂ ಬಚ್ಚೇಗೌಡ ಅವರ ಆಪ್ತರಿಂದಲೇ ಕೇಳಿ ಬರುತ್ತಿತ್ತು. ಆದರೆ ‘ಚುನಾವಣಾ ರಾಜಕಾರಣಕ್ಕೆ ವಿದಾಯ’ ಎನ್ನುವ ಮಾತುಗಳನ್ನು ಇಲ್ಲಿಯವರೆಗೂ ಅವರು ಬಹಿರಂಗವಾಗಿ ಘೋಷಿಸಿರಲಿಲ್ಲ. ಈಗ ‘ವಿರಾಮ’ ಎನ್ನುವ ಮೂಲಕ ಚುನಾವಣಾ ಶಸ್ತ್ರಗಳನ್ನು ಬಚ್ಚೇಗೌಡರು ಕೆಳಗೆ ಇಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.