ADVERTISEMENT

ಬಾಗೇಪಲ್ಲಿ: ಪಾಳುಬಿದ್ದ ವಸತಿ ಗೃಹಗಳು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:33 IST
Last Updated 30 ಸೆಪ್ಟೆಂಬರ್ 2025, 5:33 IST
ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮದ ಚಿತ್ರಾವತಿ ಬ್ಯಾರೇಜ್ ಬಳಿ ನಿರ್ಮಿಸಿರುವ ವಸತಿ ಗೃಹಗಳು ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿವೆ
ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮದ ಚಿತ್ರಾವತಿ ಬ್ಯಾರೇಜ್ ಬಳಿ ನಿರ್ಮಿಸಿರುವ ವಸತಿ ಗೃಹಗಳು ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿವೆ   

ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಗ್ರಾಮದ ಬಳಿಯ ಚಿತ್ರಾವತಿ ಬ್ಯಾರೇಜಿಗೆ ಸಂಚರಿಸುವ ರಸ್ತೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಆ ವಸತಿಗೃಹಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿರುವುದು ಮತ್ತು ಬಳಕೆ ಮಾಡದ ಕಾರಣ ಅವುಗಳು ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. 

ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು, ಬಾಗೇಪಲ್ಲಿ ಹಾಗೂ ಗುಡಿಬಂಡೆ ಪಟ್ಟಣಗಳು ಹಾಗೂ 126 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪರಗೋಡು ಗ್ರಾಮದ ಬಳಿ ಚಿತ್ರಾವತಿ ಬ್ಯಾರೇಜ್ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ–44ರಿಂದ ಬ್ಯಾರೇಜಿಗೆ ಸಂಚರಿಸುವ ಮುಖ್ಯದ್ವಾರದ ಬಳಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.

ವಸತಿ ಗೃಹದ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಮಾಡಲಾಗಿದೆ. ವಸತಿ ಗೃಹದ ನಿರ್ಮಾಣದ ಆರಂಭದಲ್ಲಿ ಕೊಠಡಿಗಳಲ್ಲಿ ಅಡುಗೆ ಕೋಣೆ, ಶೌಚ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಾಗಿಲು, ಕಿಟಕಿ, ವಿದ್ಯುತ್ ಸಂಪರ್ಕ ಹಾಗೂ ಫ್ಯಾನುಗಳನ್ನು ಹಾಕಲಾಗಿತ್ತು. ಕೂರಲು ಕುರ್ಚಿ, ಮಲಗಲು ಮಂಚ, ಅಡುಗೆ ಮಾಡಲು ಪಾತ್ರೆಗಳನ್ನು ಇರಿಸಲಾಗಿತ್ತು. ನಂತರದ ದಿನಗಳಲ್ಲಿ ವಸತಿಗೃಹಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆಡಳಿತ ಮಂಡಳಿಯವರು ಸೂಕ್ತ  ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ಜೊತೆಗೆ ವಸತಿ ಗೃಹಗಳನ್ನು ಪ್ರವಾಸಿಗರ ಬಳಕೆಗೆ ನೀಡಲಿಲ್ಲ.

ADVERTISEMENT

ಇದರಿಂದಾಗಿ ಕೋಣೆಗಳಲ್ಲಿ ಇದ್ದ ವಸ್ತುಗಳು, ಕಿಟಕಿ, ಬಾಗಿಲುಗಳು ಮತ್ತು ಫ್ಯಾನ್‌ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ. ಕೊಠಡಿಗಳ ಒಳಗೆ, ಹೊರಗೆ ಮತ್ತು ಸುತ್ತಮುತ್ತಲೂ ಈಗ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಮದ್ಯವ್ಯಸನಿಗಳು ಮದ್ಯ ಸೇವನೆ ಮಾಡಿ, ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲೇ ಬಿಸಾಕುತ್ತಾರೆ. ಪ್ಲಾಸ್ಟಿಕ್‌ ಕವರ್‌ಗಳು, ಬೀಡಿ, ಸಿಗರೇಟಿನ ತುಂಡುಗಳು, ಹಳೆಯ ಬಟ್ಟೆಗಳು ಎಲ್ಲೆಂದರಲ್ಲಿ ರಾಶಿಯಾಗಿ ಬಿದ್ದಿವೆ. ಕಿಟಕಿ ಮತ್ತು ಬಾಗಿಲುಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದಾರೆ. ಕಟ್ಟಡದ ಕೆಲವು ಕಡೆಗಳಲ್ಲಿ ಗೆದ್ದಲು ಹಿಡಿದಿದೆ. ಕೆಲವರು ಮದ್ಯ ಸೇವನೆ ಮತ್ತೆ ಕೆಲವರು ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ವಸತಿ ಗೃಹಗಳ ಸುತ್ತಲೂ ಕಳೆ ಮತ್ತು ಮುಳ್ಳಿನ ಗಿಡಗಳು ಬೆಳೆದಿವೆ. 

‘ಚಿತ್ರಾವತಿ ಬ್ಯಾರೇಜ್ ನೀರು ಹಾಗೂ ಪಕ್ಕದ ಕೆರೆಯು ತುಂಬಿ ಕೋಡಿ ಹರಿಯುತ್ತಿದೆ. ಚಿತ್ರಾವತಿ ಬ್ಯಾರೇಜ್ ಪಕ್ಕದಲ್ಲಿ ಪ್ರವಾಸಿ ತಾಣ ಮಾಡಬೇಕು. ಚಿತ್ರಾವತಿ ಉದ್ಯಾನವನ, ಕಾರಂಜಿ, ಪ್ರಾಣಿ, ಪಕ್ಷಿಗಳ ಸಂಗ್ರಹಾಲಯ, ಪ್ರಾಚ್ಯ ವಸ್ತುಗಳ ಕೇಂದ್ರಗಳನ್ನು ನಿರ್ಮಿಸಬೇಕು’ ಎಂದು ಪಟ್ಟಣದ ಹಿರಿಯ ನಾಗರಿಕ ಎಚ್.ಎ.ರಾಮಲಿಂಗಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಮಿಷನ್ ಪಡೆಯುತ್ತಾರೆ. ನಂತರ ಅಧಿಕಾರಿಗಳು ಕಟ್ಟಡವನ್ನು ಸೂಕ್ತವಾಗಿ ನಿರ್ವಹಣೆ ಮಾಡಲ್ಲ
ರಾಮಲಿಂಗಪ್ಪ ಸ್ವರ್ಣಗೌರಿ ಫೌಂಡೇಷನ್ ಅಧ್ಯಕ್ಷ
ಚಿತ್ರಾವತಿ ಬ್ಯಾರೇಜ್ ಬಳಿಯ ವಸತಿ ಗೃಹಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗುವುದು. ಕಳೆ ಮುಳ್ಳಿನ ಗಿಡಗಳನ್ನು ಕೂಡಲೇ ತೆರವು ಮಾಡಲಾಗುವುದು
ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ 

ಸೂಕ್ತ ರೀತಿ ನಿರ್ವಹಣೆ ಕೊರತೆ

‘ಚಿತ್ರಾವತಿ ಬ್ಯಾರೇಜ್ ಬಳಿಯ ವಸತಿಗೃಹಗಳ ಉದ್ಘಾಟನೆ ಮಾಡುವಾಗ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ ಆ ನಂತರದಲ್ಲಿ ಪುರಸಭೆ ಅಧಿಕಾರಿಗಳು ವಸತಿ ಗೃಹಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಿಲ್ಲ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಉಳಿದುಕೊಳ್ಳಲು ವಸತಿ ಗೃಹಗಳನ್ನು ನೀಡಲು ಮುಂದಾಗಲಿಲ್ಲ. ಇದರಿಂದಾಗಿ ವಸತಿ ಗೃಹಗಳು ನಿರುಪಯುಕ್ತವಾದವು. ಆ ಬಳಿಕ ಗೃಹಗಳು ಹಾಳು ಕೊಂಪೆಯಾಗಿವೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಆಡಳಿತ ಮಂಡಳಿಯು ಸೂಕ್ತ ನಿರ್ವಹಣೆ ಮಾಡಬೇಕು’ ಎಂದು ಪರಗೋಡು ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಗೋಪಾಲಕೃಷ್ಣ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.