
ಬಾಗೇಪಲ್ಲಿ: ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಮೇಲೆ ತಾಲ್ಲೂಕಿನ ಜನರು ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.
ತಾಲ್ಲೂಕಿನ ರೈತರು ಅತಿಹೆಚ್ಚಾಗಿ ಬೆಳೆಯುವ ಬೆಳೆಗಳಿಗೆ ತರಕಾರಿ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕಿದೆ. ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕಿದೆ. ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಹೀಗಾಗಿ, ಈ ಎಲ್ಲ ವಲಯಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಸಿಗಲಿದೆ ಎಂಬ ಆಕಾಂಕ್ಷೆಯಲ್ಲಿದ್ದಾರೆ ತಾಲ್ಲೂಕಿನ ಜನರು.
ಡಾ.ಎಂ. ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲ್ಲೂಕು ಆಗಿರುವ ಬಾಗೇಪಲ್ಲಿಯಲ್ಲಿ ನದಿನಾಲೆಗಳು ಇಲ್ಲ. ಅಂತರ್ಜಲ ಮಟ್ಟ ಕುಸಿತದಿಂದ ತಾಲ್ಲೂಕಿನಲ್ಲಿ 1,500 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ತಾಲ್ಲೂಕಿನ ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ಭೂಮಿಗಳು ಇದೀಗ ಬಂಜರು ಭೂಮಿಗಳಾಗಿವೆ. ಇದರಿಂದ ಕೃಷಿ ಕೂಲಿಕಾರ್ಮಿಕರು ಮತ್ತು ಪದವಿ, ಐಟಿಐ ಮಾಡಿದ ಯುವಕ, ಯುವತಿಯರು ಗುಳೆ ಹೊರಟಿದ್ದಾರೆ.
ತೆರೆದ ಬಾವಿ, ಕೊಳವೆಬಾವಿಗಳ ನೆರವಿನಿಂದ ತಾಲ್ಲೂಕಿನ ರೈತರು ಅತಿ ಹೆಚ್ಚಾಗಿ ಟೊಮೆಟೊ ಸೇರಿ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ. ಹೀಗಾಗಿ ಕೃಷಿ, ತರಕಾರಿ ಬೆಳೆಗಳಿಗೆ ಸಂಸ್ಕರಣ ಘಟಕ ಆರಂಭಿಸಿದರೆ, ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಸಣ್ಣ ಮತ್ತು ಬೃಹತ್ ಮಟ್ಟದ ಕೈಗಾರಿಕೆಗಳು ಸ್ಥಾಪನೆ ಮಾಡಿದರೆ, ಯುವಕ, ಯುವತಿಯರಿಗೆ ಉದ್ಯೋಗವಕಾಶಗಳು ಸಿಗಲಿವೆ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.
ಪಟ್ಟಣದ ಜನಸಂಖ್ಯೆ ಹೆಚ್ಚಳ ಆಗಿದೆ. ಸುತ್ತಮುತ್ತಲಿನ ರಾಮಸ್ವಾಮಿಪಲ್ಲಿ, ಪಾತಬಾಗೇಪಲ್ಲಿ, ಪೋತೇಪಲ್ಲಿ, ಗೌನಪಲ್ಲಿ, ಯಗವಬಂಡ್ಲಕೆರೆ, ಹೊಸಹುಡ್ಯ, ಘಂಟಂವಾರಿಪಲ್ಲಿ, ಕೊತ್ತಪಲ್ಲಿ, ಭೂವೆನ್ನಲ ತಾಂಡ ಹಾಗೂ ಇತರ ಗ್ರಾಮಗಳನ್ನು ಸೇರಿಸಿ, ಪುರಸಭೆಯಿಂದ ನಗರಸಭೆಗೆ ಮೇಲ್ದೆರ್ಜೆಗೆ ಏರಿಸಬೇಕು. 15 ವರ್ಷಗಳ ಹಿಂದೆ ಆರಂಭವಾದ ಒಳಚರಂಡಿ ಕಾಮಗಾರಿಗೆ ಅನುದಾನ ಮೀಸಲಿಡಬೇಕು. ಕಾಮಗಾರಿ ಮುಗಿಸಿ, ಜನರ ಬಳಕೆಗೆ ಮುಕ್ತಗೊಳಿಸಬೇಕು. ಚಿತ್ರಾವತಿ ಬಳಿ ಟೊಮೆಟೊ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು. ಡಾ.ಎಚ್.ಎನ್. ಉದ್ಯಾನವನ, ರೆಡ್ಡಿ ಕೆರೆ, ಇಕೊ ಉದ್ಯಾನಗಳ ನಿರ್ವಹಣೆಗೆ ಸರ್ಕಾರ ಅನುದಾನ ಕಲ್ಪಿಸಬೇಕು.
ಗ್ರಾಮಗಳು ಮತ್ತು ತಾಂಡಾಗಳಲ್ಲಿ ರಸ್ತೆ, ಕುಡಿಯುವ ನೀರು ಕಲ್ಪಿಸಬೇಕು. 50ಕ್ಕೂ ಹೆಚ್ಚು ಇರುವ ಯೋಗ್ಯವಲ್ಲದ ಸರ್ಕಾರಿ ವಾಹನಗಳನ್ನು ದುರಸ್ತಿ ಮಾಡಿಸಬೇಕು. ಗ್ರಾಮಗಳು ಮತ್ತು ಮಂತ್ರಾಲಯ, ಕದಿರಿ, ಕಡಪ, ಹೈದರಾಬಾದ್, ಪುಟ್ಟಪರ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ತಾಲ್ಲೂಕಿನ ಕೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಕಾಲದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯ ಸೌಕರ್ಯ ಮತ್ತು ಐದು ಆ್ಯಂಬುಲೆನ್ಸ್‌ಗಳನ್ನು ನೀಡಬೇಕು. ಜೊತೆಗೆ ತಾಲ್ಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ಜನರು.
ಗುಮ್ಮನಾಯಕನಪಾಳ್ಯದ ಕೋಟೆ, ಚೋಳರ ಕಾಲದ ಪಂಚಲಿಂಗೇಶ್ವರ, ಜಡಲ ಭೈರವೇಶ್ವರ, ಐತಿಹಾಸಿಕ ಗಡಿದಂ ಲಕ್ಷ್ಮಿವೆಂಕಟರಮಣ ಕ್ಷೇತ್ರ, ಸೂಫಿ ಸಂತರಾದ ಹುಸೇನು ಷಾ ವಲಿ ದರ್ಗಾ, ಕಲ್ಲಿಪಲ್ಲಿ ಆದಿನಾರಾಯಣಸ್ವಾಮಿ ಮಠ ಸೇರಿದಂತೆ ವಿವಿಧ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹಣ ಮೀಸಲಿಡಬೇಕಿದೆ.
ಗಡಿ ಮತ್ತು ಹಿಂದುಳಿದ ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಕೈಗಾರಿಕಾ ಪ್ರದೇಶಗಳು ರೈಲ್ವೆ ಸಂಚಾರಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕುಚನ್ನರಾಯಪ್ಪ ಸಂಚಾಕ ಕೆಪಿಆರ್‌ಎಸ್
ಚಿತ್ರಾವತಿ ವಂಡಮಾನ್ ನದಿಗಳ ನೀರಿನಸ್ಸಿ ಮುಚ್ಚಿಹೋಗಿರುವ ಕಾಲುವೆ ರಾಜಕಾಲುವೆಗಳನ್ನು ದುರಸ್ತಿ ಮಾಡಿಸಬೇಕು. ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಗಳನ್ನು ಘೋಷಿಸಬೇಕುಕೃಷ್ಣಪ್ಪ ಪಟ್ಟಣದ ನಿವಾಸಿ
ಗಂಟ್ಲಮಲ್ಲಮ್ಮ ಕಣಿವೆ ಅಭಿವೃದ್ಧಿಗೆ ಸರ್ಕಾರವು ಈಗಾಗಲೇ ₹200 ಕೋಟಿ ಅನುದಾನ ನೀಡಿದೆ. ಶಾಶ್ವತ ನೀರಾವರಿ ಕೈಗಾರಿಕೆ ತಾಂಡಾ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇನೆಎಸ್.ಎನ್. ಸುಬ್ಬಾರೆಡ್ಡಿ ಶಾಸಕ
ಡೈಕ್ ಚೆಕ್‌ಡ್ಯಾಂ ನಿರ್ಮಾಣಕ್ಕೆ ಆದ್ಯತೆ ಚಿತ್ರಾವತಿ ವಂಡಮಾನ್ ನದಿಗಳಲ್ಲಿ ನೀರು ಹರಿದರೂ ತಾಲ್ಲೂಕಿನ ರೈತರಿಗೆ ಉಪಯೋಗ ಆಗಿಲ್ಲ. ನೀರು ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ಹರಿಯಲಿದೆ. ಇದರಿಂದ ಈ ನೀರು ಹಿಡಿದಿಟ್ಟುಕೊಳ್ಳುವ ಡೈಕ್‍ಗಳು ಚೆಕ್ ಡ್ಯಾಂಗಳು ಕಾಲುವೆಗಳು ರಾಜಕಾಲುವೆಗಳ ಪುನಃಶ್ಚೇತನ ಆಗಬೇಕು ಎಂಬುದು ಈ ಭಾಗದ ಜನರ ಕೂಗು. ಎಚ್.ಎನ್. ವ್ಯಾಲಿಯಿಂದ 2 ಹಂತದಲ್ಲಿ ಶುದ್ಧೀಕರಿಸಿದ ನೀರು ತಾಲ್ಲೂಕಿನ 28 ಕೆರೆಗಳಿಗೆ ತುಂಬಿಸಲಾಗಿದೆ. ಆದರೆ ಈ ನೀರು ಕೃಷಿ ಬಳಕೆ ಕುಡಿಯಲು ಯೋಗ್ಯವಲ್ಲ. ಶಾಶ್ವತ ನೀರಾವರಿ ಇಲ್ಲದೆ ಕೃಷಿಗೆ ಮತ್ತು ಜನ ಜಾನುವಾರುಗಳಿಗೆ ಹಾಹಾಕಾರ ಉಂಟಾಗಿದೆ. ಶಾಶ್ವತ ನೀರಾವರಿಗಾಗಿ ಡಾ.ಪರಮಶಿವಯ್ಯ ವರದಿ ಜಾರಿ ಆಗಬೇಕು ಮತ್ತು ಕೃಷ್ಣಾ ನದಿಯ ಬಿ ಸ್ಕೀಂನ ಬಚಾವತ್ ಆಯೋಗದಂತೆ ಜಿಲ್ಲೆಗೆ ನೀರಿನ ಪಾಲು ಸಿಗಲು ಸರ್ಕಾರ ವಿಶೇಷ ಯೋಜನೆಗಳ ಪ್ಯಾಕೆಜ್ ಘೋಷಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.