ADVERTISEMENT

ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

ಪಿ.ಎಸ್.ರಾಜೇಶ್
Published 20 ಅಕ್ಟೋಬರ್ 2025, 4:22 IST
Last Updated 20 ಅಕ್ಟೋಬರ್ 2025, 4:22 IST
ಬಾಗೇಪಲ್ಲಿ ಡಿವಿಜಿ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಣ್ಣಿನ ದೀಪಗಳ ವ್ಯಾಪಾರ ನಡೆಯಿತು
ಬಾಗೇಪಲ್ಲಿ ಡಿವಿಜಿ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಣ್ಣಿನ ದೀಪಗಳ ವ್ಯಾಪಾರ ನಡೆಯಿತು   

ಬಾಗೇಪಲ್ಲಿ: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಸಾಲುಗಟ್ಟಿದ್ದರು.

ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ನೋಮುದಾರಗಳು, ಅಡಿಕೆ, ಮೊರ ಸೇರಿದಂತೆ ದಿನಸಿ ಸಾಮಾನುಗಳ ವ್ಯಾಪಾರ ನಡೆಯಿತು. ವಸ್ತುಗಳನ್ನು ಖರೀದಿ ಮಾಡಲು ಅಂಗಡಿ, ತಳ್ಳುವ ಬಂಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.

ಮುಖ್ಯರಸ್ತೆಯಲ್ಲಿ ಜನರ ಹಾಗೂ ವಾಹನ ಸಂಚಾರ ಹೆಚ್ಚಾಗಿತ್ತು. ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಜನಜಂಗುಳಿಯಿಂದ ಕೂಡಿತ್ತು. ದ್ವಿಚಕ್ರ ವಾಹನಗಳ, ಕಾರು ಪಾರ್ಕಿಂಗ್ ಮಾಡಲು ಚಾಲಕರು ಪರದಾಡಿದರು.

ADVERTISEMENT

ಕುಂಬಾರಪೇಟೆ, ಭಜನೆಮಂದಿರ, ಸಂತೆಮೈದಾನ ರಸ್ತೆಗಳಲ್ಲಿ ತಳ್ಳುವ ಬಂಡಿಗಳಲ್ಲಿ, ಪಾದಚಾರಿ ರಸ್ತೆಗಳಲ್ಲಿ ಬಾಳೆಹಣ್ಣು, ಸೇಬು, ದ್ರಾಕ್ಷಿ, ದಾಳಿಂಬೆ, ಮೊಸಂಬಿ ಸೇರಿದಂತೆ ಗುಲಾಬಿ, ಬಟನ್ಸ್, ಚೆಂಡುಮಲ್ಲಿಗೆ, ಸೇವಂತಿಗೆ ಹೂವು ಹಾಗೂ ಬಣ್ಣ ಬಣ್ಣದ ನೋಮುದಾರ ಮಾರಾಟ ನಡೆಯಿತು.

ಮಣ್ಣಿನ ದೀಪಗಳ ವ್ಯಾಪಾರವು ಹೆಚ್ಚಾಗಿ ನಡೆಯಿತು. ಬಸ್ ನಿಲ್ದಾಣದ ಮುಂದೆ, ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿ ಮೊರಗಳನ್ನು ಮಹಿಳೆಯರು ಖರೀದಿ ಮಾಡಿದರು. ಪಟ್ಟಣದ ಸಗಟು ಹಾಗೂ ಚಿಲ್ಲರೆ ವ್ಯಾಪಾರ ಅಂಗಡಿಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ ಸೇರಿದಂತೆ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು, ಮಕ್ಕಳು, ಯುವಜನರು ಹೊಸಬಟ್ಟೆ ಖರೀದಿ ಮಾಡಿದರು.

ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ಗುಣಮಟ್ಟದ ಆಧಾರದಲ್ಲಿ ಅಕ್ಕಿ ₹70 ರಿಂದ ₹120, ಬೆಲ್ಲ ₹100, ಅಚ್ಚುಬೆಲ್ಲ ₹150, ಎಣ್ಣೆ ₹150 ರಿಂದ ₹180, ಬಾಳೆಹಣ್ಣು 1 ಡಜನ್‌ಗೆ ₹60 ರಿಂದ ₹80, ಸೇಬು ಪ್ರತಿ ಕೆ.ಜಿಗೆ ₹160, ಮೊಸಂಬಿ ₹180, ದ್ರಾಕ್ಷಿ ₹100, ಏಲಕ್ಕಿಬಾಳೆ ₹100, ದಾಳಿಂಬೆ ₹160ಕ್ಕೆ ಮಾರಾಟವಾಯಿತು. ಕೆ.ಜಿ ಮಲ್ಲಿಗೆ ₹800, ಕನಕಾಂಬರ ₹1200, ಬಟನ್ಸ್ ₹80, ಚೆಂಡುಮಲ್ಲಿಗೆ ₹30ಕ್ಕೆ ಮಾರಾಟ ನಡೆಯಿತು. ಟೊಮೋಟೊ ಸೇರಿದಂತೆ ತರಕಾರಿ ಬೆಲೆ ಏರಿಕೆ ಇತ್ತು.

ಪಟಾಕಿ ಮಾರಾಟ ಜೋರು: ಪಟ್ಟಣದ ಹೊರವಲಯದ ಮಿನಿಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಕೇವಲ ಹಸಿರು ಪಟಾಕಿಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. 15ಕ್ಕೂ ಹೆಚ್ಚು ಪಟಾಕಿ ಮಳಿಗೆಗಳಲ್ಲಿ ಮಾರಾಟ ನಡೆಯಿತು.

ಸಣ್ಣ ಬಾಕ್ಸ್ ₹700 ರಿಂದ ದೊಡ್ಡ ಬಾಕ್ಸ್ ₹4 ಸಾವಿರದವರೆಗೆ ಪಟಾಕಿಗಳ ಮಾರಾಟ ನಡೆಯಿತು. ಮಳಿಗೆಗಳ ಮುಂದೆ ಪಟಾಕಿ ದರ ಕಡಿಮೆ ಮಾಡುವಂತೆ ಚೌಕಾಶಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದಿತು. 

ಮಣ್ಣಿನ ಹಣತೆ ಖರೀದಿ ಜೋರು: ವಿಭಿನ್ನ ಶೈಲಿಯ ಮಣ್ಣಿನ ದೀಪಗಳಿಗೆ ಬಲು ಬೇಡಿಕೆ ಇತ್ತು. ಸಣ್ಣ 3 ಮಣ್ಣಿನ ದೀಪಗಳಿಗೆ ₹10ರಿಂದ ₹30ರವರೆಗೆ ಹಾಗೂ ವಿಭಿನ್ನ ಮಣ್ಣಿನ ದೀಪಗಳು ₹40 ರಿಂದ ₹50ಕ್ಕೆ ಮಾರಾಟ ನಡೆಯಿತು.

ದೀಪಾವಳಿ ದಿನಗಳಲ್ಲಿ ಮಾತ್ರ ಮಣ್ಣಿನ ದೀಪಗಳಿಗೆ ಬೇಡಿಕೆ ಇದೆ. ಮಣ್ಣಿನಿಂದ ಸಣ್ಣ, ಮಧ್ಯಮ, ದೊಡ್ಡ ಹಾಗೂ ವಿಭಿನ್ನಶೈಲಿಯ ಮಣ್ಣಿನ ದೀಪಗಳನ್ನು ತಯಾರಿಸುತ್ತೇವೆ. ಸಣ್ಣ ಹಾಗೂ ಬಣ್ಣ ಬಣ್ಣದ ಮಣ್ಣಿನ ದೀಪಗಳನ್ನು ಮಹಿಳೆಯರು ಹೆಚ್ಚಾಗಿ ಖರೀದಿಸಿದ್ದಾರೆ ಎಂದು ಮಣ್ಣಿನ ದೀಪ ತಯಾರಕ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೋಮುದಾರ ಖರೀದಿ ಮಾಡುತ್ತಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.