
ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ‘ಶಾಸಕ ಸ್ಥಾನ ಅಸಿಂಧು’ ಎನ್ನುವ ಹೈಕೋರ್ಟ್ ಆದೇಶದಿಂದ ತೊಡಕಾಗಿದೆ. ಸಚಿವನಾಗಲೇಬೇಕು ಎನ್ನುವ ಅವರ ಹೋರಾಟಕ್ಕೆ ಇದರಿಂದ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ.
ರಾಜ್ಯದ ಗಡಿಭಾಗ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಸುಬ್ಬಾರೆಡ್ಡಿ ನಂತರ ಕಾಂಗ್ರೆಸ್ ಸೇರಿದರು. 2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಜಿಲ್ಲೆಯಲ್ಲಿ ಅವರು ಕಾಂಗ್ರೆಸ್‌ನ ಹಿರಿಯ ಶಾಸಕ ಎನಿಸಿದ್ದಾರೆ.
2023ರ ಗೆಲುವಿನ ನಂತರ ಸುಬ್ಬಾರೆಡ್ಡಿ ಅವರು ಸಚಿವ ಸ್ಥಾನಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಸಿ.ಮುನಿರಾಜು ಹೂಡುತ್ತಿದ್ದ ಬಾಣಗಳಿಗೆ ಪ್ರತ್ಯಸ್ತ್ರ ಹೂಡುವಲ್ಲೇ ಹೆಚ್ಚು ಸಮಯ ಕಳೆದಿದ್ದಾರೆ. ಈ ಕಾರಣದಿಂದ ಸುಬ್ಬಾರೆಡ್ಡಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ.
ಸುಬ್ಬಾರೆಡ್ಡಿ ಅವರಿಗೆ 2024ರ ಜನವರಿಯಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಯಿತು. ‘ಸಚಿವ ಸ್ಥಾನದ ಹೊರತು ಯಾವುದೇ ನಿಗಮದ ಅಧ್ಯಕ್ಷ ಸ್ಥಾನ ಬೇಡವೇ ಬೇಡ’ ಎಂದು ಸ್ಪಷ್ಟವಾಗಿ ನಿರಾಕರಿಸಿದರು. ಸಚಿವ ಸ್ಥಾನದ ಬಗ್ಗೆ ಅಷ್ಟೊಂದು ನಿರೀಕ್ಷೆ ಅವರಲ್ಲಿತ್ತು.
ಈ ವೇಳೆ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಬರೆದ ಸುದೀರ್ಘ ಪತ್ರವೊಂದು ಸಚಿವ ಸ್ಥಾನದ ಆಕಾಂಕ್ಷಿಗಳ ಕುರಿತು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ನಡೆದ ಆಪರೇಷನ್ ಕಮಲದ ವೇಳೆ ಸುಬ್ಬಾರೆಡ್ಡಿ ಅವರಿಗೂ ಗಾಳ ಹಾಕಲಾಗಿತ್ತು. ಆದರೆ ಅವರು ಕಾಂಗ್ರೆಸ್‌ನಲ್ಲಿಯೇ ಉಳಿದರು. ಸಚಿವ ಸ್ಥಾನದ ಹಕ್ಕು ಪ್ರತಿಪಾದನೆ ವೇಳೆ ಈ ‘ಆಪರೇಷನ್’ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳ ಉಲ್ಲಂಘನೆ ಪ್ರಕರಣದಲ್ಲಿ 2025ರ ಜುಲೈನಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಮನೆ, ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು.
‘ವಿದೇಶಗಳಲ್ಲಿ ನನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ, ವ್ಯವಹಾರ ಇರುವುದನ್ನು ಸಾಬೀತುಪಡಿಸಿದರೆ ನನ್ನ ಆಸ್ತಿಗಳನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ’ ಎಂದು ಸುಬ್ಬಾರೆಡ್ಡಿ ಸವಾಲು ಹಾಕಿದ್ದರು. ಈ ದಾಳಿ ರಾಜಕೀಯ ಪಿತೂರಿ ಎಂದು ತಮ್ಮ ಪ್ರತಿಸ್ಪರ್ಧಿ ಸಿ.ಮುನಿರಾಜು ಅವರತ್ತ ಬೆರಳು ತೋರಿದ್ದರು.
ಎಸ್.ಎನ್. ಸುಬ್ಬಾರೆಡ್ಡಿ ಮತ್ತು ಸಿ.ಮುನಿರಾಜು ರಾಜಕೀಯ ಕಾದಾಟ ಹೈಕೋರ್ಟ್ ಮೆಟ್ಟಿಲೇರಿತ್ತು.
ಸಂಭ್ರಮದ ನಡುವೆ ಸೂತಕ
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷ ಸ್ಥಾನ ಚುನಾವಣೆ ಸೋಮವಾರ ನಡೆಯಿತು. ಪಟ್ಟು ಹಿಡಿದು ತಮ್ಮ ಬೆಂಬಲಿಗ ಹಾಗೂ ಬಾಗೇಪಲ್ಲಿ ಕ್ಷೇತ್ರದ ನಿರ್ದೇಶಕ ಮಂಜುನಾಥ ರೆಡ್ಡಿ ಅವರನ್ನು ಸುಬ್ಬಾರೆಡ್ಡಿ ಅಧ್ಯಕ್ಷರನ್ನಾಗಿ ಮಾಡಿದರು. ಅಧ್ಯಕ್ಷರ ಆಯ್ಕೆಯ ವಿಜಯೋತ್ಸವದಲ್ಲಿ ಮತ್ತು ನಂದಿ ಜಾತ್ರೆಯಲ್ಲಿ ಶಾಸಕರು ಪಾಲ್ಗೊಳ್ಳಬೇಕಿತ್ತು. ಚಿಮುಲ್ ಅಧ್ಯಕ್ಷ ಆಯ್ಕೆ ಸಂಬಂಧ ಚಿಕ್ಕಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಅವರು ‘ತುರ್ತು’ ಎಂದು ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದರು.
‘ಚುನಾವಣೆ ನಂತರ ತೆರಿಗೆ ಪಾವತಿ’
ತೆರಿಗೆ ವಂಚನೆಯ ಮೂಲಕ ಸರ್ಕಾರಕ್ಕೆ ಸುಬ್ಬಾರೆಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದರು. ಜನರಿಗೆ ತಪ್ಪು ಮಾಹಿತಿ ನೀಡಿದ್ದರು. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ನ್ಯಾಯಮೂರ್ತಿ ಅವರು ನಮ್ಮ ಅರ್ಜಿ ಪುರಸ್ಕರಿಸಿ ಈ ತೀರ್ಪು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಚುನಾವಣೆಯ ನಂತರ ತೆರಿಗೆ ಪಾವತಿಸಿದರು. ತಕ್ಷಣವೇ ನಾನು ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಸುಬ್ಬಾರೆಡ್ಡಿ ಈಗ ಶಾಸಕರಲ್ಲ. ನನಗೆ 63 ಸಾವಿರ ಮತಗಳನ್ನು ನೀಡಿದ ಬಾಗೇಪಲ್ಲಿ ಕ್ಷೇತ್ರದ ಜನರ ಗೆಲುವು ಇದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.