ADVERTISEMENT

ಬಾಗೇಪಲ್ಲಿಯಲ್ಲಿ ಗುಂಡಿಗಳ ಕಾರುಬಾರು: ವಾಹನ ಸವಾರರಿಗೆ ತೊಂದರೆ

ಪಿ.ಎಸ್.ರಾಜೇಶ್
Published 13 ಅಕ್ಟೋಬರ್ 2025, 6:22 IST
Last Updated 13 ಅಕ್ಟೋಬರ್ 2025, 6:22 IST
ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತದ ರಸ್ತೆಯಲ್ಲಿ ಬಿದ್ದಿರುವ ಗುಂಡಿ 
ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತದ ರಸ್ತೆಯಲ್ಲಿ ಬಿದ್ದಿರುವ ಗುಂಡಿ    

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆಗಳು ಗುಂಡಿ  ಬಿದ್ದಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಿಂದ ನ್ಯಾಷನಲ್ ಕಾಲೇಜಿನವರಿಗೆ 100 ಅಡಿ ವಿಶಾಲದ ಡಿವಿಜಿ ಮುಖ್ಯರಸ್ತೆಯಲ್ಲಿ ಎರಡೂ ಕಡೆ ರಸ್ತೆ ಕಾಣದೇ ಗುಂಡಿಗಳೇ ಬಿದ್ದಿವೆ. ಟಿ.ಬಿ ಕ್ರಾಸ್‌ನಲ್ಲಿ ಪಟ್ಟಣಕ್ಕೆ ಮತ್ತು ಬೆಂಗಳೂರು ಮಾರ್ಗದ ತಿರುವಿನಲ್ಲಿ ಮಳೆ ನೀರು ಕೆರೆಯಂತಾಗಿದೆ. ಗುಂಡಿಗಳಲ್ಲಿ ಕೆಮ್ಮಣ್ಣಿನ ನೀರು ಸಂಗ್ರಹ ಆಗಿದೆ. ಇದರಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಪುರಸಭಾ ವ್ಯಾಪ್ತಿಯ ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನ ಮುಖ್ಯರಸ್ತೆಯಲ್ಲಿ ಗುಂಡಿಗಳದೇ ಕಾರುಬಾರು. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಪಟ್ಟಣದಲ್ಲಿ ಗುಂಡಿ ಇಲ್ಲದ ರಸ್ತೆಯೇ ಇಲ್ಲದಂತಾಗಿದೆ. ಅನೇಕ ಮಂದಿ ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗಳು ಮಾಡಿಕೊಂಡಿರುವ ಅನೇಕ ಘಟನೆಗಳು ನಡೆದಿವೆ.

ADVERTISEMENT

ಪಟ್ಟಣದ ಡಾ.ಎಚ್.ಎನ್.ವೃತ್ತ, ಕೊತ್ತಪಲ್ಲಿ ರಸ್ತೆಯ ಮಸೀದಿಯ ಮುಂದೆ, ಕುಂಬಾರಪೇಟೆ, ಆವುಲಮಂದೆ ರಸ್ತೆಗಳು ಸೇರಿದಂತೆ ಬೀದಿಗಳಲ್ಲಿ ಗುಂಡಿಗಳದೇ ಕಾರುಬಾರಾಗಿದೆ. ಬೃಹತ್ ಗಾತ್ರದ ವಾಹನ ಸಂಚಾರದಿಂದ ಗುಂಡಿಗಳು ಹೆಚ್ಚಾಗಿದೆ. ರಸ್ತೆಯೆಲ್ಲಾ ಜಲ್ಲಿ, ಕಲ್ಲುಗಳಿಂದ ಕೂಡಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಡಾ.ಎಚ್.ಎನ್.ವೃತ್ತದ ಗೂಳೂರು ಕಡೆಗೆ ತಿರುವಿನ ರಸ್ತೆಯಲ್ಲಿ ಬೃಹತ್ ಗುಂಡಿ ಬಿದ್ದಿದೆ. ಮಳೆ ಹಾಗೂ ಚರಂಡಿ ನೀರು ಸಂಗ್ರಹವಾಗಿದೆ. ರಾತ್ರಿ ವೇಳೆ ಗುಂಡಿ ಕಾಣದೆ ಅಪಘಾತಗಳು ಸಂಭವಿಸಿವೆ. ಗೂಳೂರು ರಸ್ತೆಯಲ್ಲಿನ ಹುಬ್ಬುಗಳ ಪಕ್ಕದಲ್ಲಿ ಗುಂಡಿ ಬಿದ್ದಿವೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಮಾತ್ರವಲ್ಲದೆ ವಾರ್ಡ್‍ನ ಬೀದಿಗಳಲ್ಲಿ ಪೈಪ್‌ ರಿಪೇರಿಗೆ ಅಗೆದಿರುವ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಅಧ್ವಾನವಾಗಿದೆ. ರಸ್ತೆಯಲ್ಲಿ ಅಡಿ ಅಡಿಗೂ ಗುಂಡಿಮಯವಾಗಿದೆ. ಪಟ್ಟಣದ 7ನೇ ವಾರ್ಡ್‍ನ ಹಳೆ ಭಾರತಿ ಶಾಲೆ ರಸ್ತೆಯಲ್ಲಿ ಪೈಪ್‌ ರಿಪೇರಿಗೆ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದ ಹಿನ್ನೆಲೆ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ.

ಡಾ.ಎಚ್.ಎನ್.ವೃತ್ತದಿಂದ ಗೂಳೂರು ಕಡೆಗೆ ಸಂಚರಿಸುವ ರಸ್ತೆಯಲ್ಲಿ ಗುಂಡಿ
ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್‍ನ ಹಳೆ ಭಾರತಿ ಶಾಲೆಯ ರಸ್ತೆಯಲ್ಲಿರುವ ಗುಂಡಿ
ಗುಂಡಿ ಮುಚ್ಚುವಂತೆ ಕ್ರಮ ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆ ಕಾಮಗಾರಿ ಚರಂಡಿ ಸ್ವಚ್ಛತೆಗೆ ಗುಂಡಿಗಳನ್ನು ಅಗೆಯಬೇಕಾಗಿದೆ. ನಂತರ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಗುವುದು.
ಎಂ.ಶ್ರೀನಿವಾಸ್ ಮುಖ್ಯಾಧಿಕಾರಿ
ಕೆಸರು ಗುಂಡಿಗಳ ಮೇಲೆ ಸಂಚಾರ ಹೊರವಲಯದ ಟಿ.ಬಿ.ಕ್ರಾಸ್‍ನಲ್ಲಿ ಅವೈಜ್ಞಾನಿಕ ರಸ್ತೆ ಮಾಡಲಾಗಿದೆ. ಚರಂಡಿ ನಿರ್ಮಾಣ ಮಾಡಿಲ್ಲ. ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ. ಕಲುಷಿತ ಹಾಗೂ ಮಳೆ ನೀರು ಗುಂಡಿಗಳಲ್ಲಿ ಸಂಗ್ರಹವಾಗಿದ್ದು ಕೆಸರು ನೀರಿನ ಗುಂಡಿಗಳ ಮೇಲೆ ಸವಾರರು ಸಂಚರಿಸುವಂತಾಗಿದೆ.
ಮಹೇಶ್ ಟಿ.ಬಿ.ಕ್ರಾಸ್ ನಿವಾಸಿ
ಸಮರ್ಕಪವಾಗಿ ಗುಂಡಿ ಮುಚ್ಚಿಲ್ಲ ಉತ್ತಮ ರಸ್ತೆಗಳು ಗುಂಡಿ ಬಿದ್ದಿವೆ. ಪುರಸಭೆಯವರು ರಿಪೇರಿಗೆ ಗುಂಡಿ ಅಗೆದವರು ಸಮರ್ಪಕವಾಗಿ ಮುಚ್ಚುವುದಿಲ್ಲ.  ಕಲ್ಲು ಮಣ್ಣು ಹಾಕಿ ತುಂಬಿಸಲ್ಲ. ಒಂದು ಕಡೆ ಎತ್ತರ ಮತ್ತೊಂದು ಕಡೆ ಗುಂಡಿ ಬಿದ್ದಿವೆ.
ಜಿ.ಕೃಷ್ಣಪ್ಪ 7ನೇ ವಾರ್ಡ್ ಪುರಸಭೆ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.