ADVERTISEMENT

ಬಾಗೇಪಲ್ಲಿಗೆ ಇಲ್ಲ ಖಾಸಗಿ ಬಸ್ ನಿಲ್ದಾಣ: ಪಾದಚಾರಿ ಮಾರ್ಗದಲ್ಲೇ ಬಸ್ ನಿಲುಗಡೆ

ಸಂಚಾರ ದಟ್ಟಣೆ, ಜನರ ಪರದಾಟ

ಪಿ.ಎಸ್.ರಾಜೇಶ್
Published 4 ಆಗಸ್ಟ್ 2025, 7:16 IST
Last Updated 4 ಆಗಸ್ಟ್ 2025, 7:16 IST
ಬಾಗೇಪಲ್ಲಿಯ ಡಿವಿಜಿ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಆಗಿರುವುದು 
ಬಾಗೇಪಲ್ಲಿಯ ಡಿವಿಜಿ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಆಗಿರುವುದು    

ಬಾಗೇಪಲ್ಲಿ: ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣವೇ ಇಲ್ಲ. ಇದರಿಂದಾಗಿ ಪಟ್ಟಣದ ಡಿವಿಜಿ ಮುಖ್ಯರಸ್ತೆ, ಸಾರಿಗೆ ಬಸ್ ನಿಲ್ದಾಣದ ಮುಂಭಾಗದ ಪಾದಚಾರಿ ಮಾರ್ಗದಲ್ಲೇ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಜನಸಾಮಾನ್ಯರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. 

ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್ ನಿಲ್ದಾಣ, ಆಟೊ, ಕಾರು, ಟ್ಯಾಕ್ಸಿಗಳ ನಿಲ್ದಾಣ, ಮಾರುಕಟ್ಟೆ, ಶೌಚಾಲಯ, ನೀರು, ಆಸ್ಪತ್ರೆ, ಶಾಲೆ, ಉದ್ಯಾನವನ, ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಕಲ್ಪಿಸುವುದು ಪುರಸಭೆ ಜವಾಬ್ದಾರಿ. ಆದರೆ, ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ಗಳ ನಿರ್ಮಾಣಕ್ಕೆ ನಿವೇಶನ ಗುರುತಿಸಿಲ್ಲ.  

ಬಾಗೇಪಲ್ಲಿ ಪಟ್ಟಣ ಪಂಚಾಯಿತಿ ಆಗಿದ್ದಾಗ ಸಿವಿಲ್ ನ್ಯಾಯಾಲಯದ ಮುಂದೆ ಖಾಸಗಿ ಬಸ್ ನಿಲ್ದಾಣ ಮಾಡುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಾಗಿತ್ತು. ಆದರೆ, ಬಸ್ ನಿಲ್ದಾಣದಿಂದ ನ್ಯಾಯಾಲಯದ ಕಲಾಪಗಳಿಗೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಖಾಸಗಿ ಬಸ್ ನಿಲ್ದಾಣ ಮಾಡಲಿಲ್ಲ. ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಪಟ್ಟಣದ ಕೊರ್ಲಕುಂಟೆ ಬಳಿ ಇರುವ ಪುರಸಭೆ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ಮಾಡಲು ಮುಂದಾಗಿದ್ದರು. ಆದರೆ, ಅವರು ಚುನಾವಣೆಯಲ್ಲಿ ಸೋಲು ಕಂಡ ಕಾರಣ, ಖಾಸಗಿ ಬಸ್ ನಿಲ್ದಾಣ ವಿಚಾರವು ನನೆಗುದಿಗೆ ಬಿದ್ದಿದೆ. 

ADVERTISEMENT

ಪಟ್ಟಣಕ್ಕೆ ಆಂಧ್ರಪ್ರದೇಶದ ಕದಿರಿ, ಅನಂತಪುರ ಸೇರಿದಂತೆ ತಾಲ್ಲೂಕಿನ ಚೇಳೂರು, ಬಿಳ್ಳೂರು, ಚಾಕವೇಲು, ಗೂಳೂರು, ಚಿಂತಾಮಣಿ, ಕೋಲಾರ ಕಡೆಗಳಿಂದ 48ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ, ಸೂಕ್ತ ಬಸ್ ನಿಲ್ದಾಣವೇ ಇಲ್ಲದಿರುವುದು ಪ್ರಯಾಣಿಕರು ಮತ್ತು ಪಾದಚಾರಿಗಳ ನಿದ್ದೆಗೆಡಿಸಿದೆ. ಬಸ್ ನಿಲ್ದಾಣ ಇಲ್ಲದಿರುವುದರಿಂದ ಪ್ರಯಾಣಿಕರು ಅಂಗಡಿಗಳ ಮುಂದೆಯೇ ಬಸ್‌ಗಳಿಗಾಗಿ ಗಂಟೆಗಟ್ಟಲೇ ಕಾಯಬೇಕಿದೆ. ಕೂರಲು, ನಿಲ್ಲಲು ಜಾಗ ಇಲ್ಲ. ಇದೇ ಜಾಗದಲ್ಲಿ ಬೀದಿಬದಿ ವ್ಯಾಪಾರಸ್ಥರು ತಳ್ಳುವ ಬಂಡಿಗಳನ್ನು ಇಟ್ಟಿದ್ದಾರೆ. ದ್ವಿಚಕ್ರ ವಾಹನಗಳು ಸೇರಿದಂತೆ ಕಾರುಗಳು, ಆಟೊಗಳು ನಿಂತಿರುತ್ತವೆ. ಅಂಗಡಿಗಳ ಮುಂದೆ ನಿಲ್ಲಲು ಸ್ಥಳಾವಕಾಶವೇ ಇರುವುದಿಲ್ಲ. ಅಂಗಡಿಗಳ ಮುಂದೆ ನಿಲ್ಲಬೇಡಿ ಎಂದು ಮಾಲೀಕರು ಗದರುತ್ತಾರೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಪ್ರಯಾಸ ಪಡುವಂತಾಗಿದೆ. 

ಖಾಸಗಿ ಬಸ್‌ಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಪಾದಚಾರಿಗಳು ರಸ್ತೆ ಮಧ್ಯೆ ನಡೆದು ಹೋಗುವ ಅನಿವಾರ್ಯತೆ ಎದುರಾಗಿದ್ದು, ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಆತಂಕವಿದೆ ಎನ್ನುತ್ತಾರೆ ಕೆಲವು ಪಾದಚಾರಿಗಳು. 

‘ಚಿಂತಾಮಣಿ, ಚಿಕ್ಕಬಳ್ಳಾಪುರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಖಾಸಗಿ ಬಸ್‍ಗಳಿಗೆ ಸ್ಥಳೀಯ ಆಡಳಿತವು ಪ್ರತ್ಯೇಕ ನಿಲ್ದಾಣ ಮಾಡಿದೆ. ಆದರೆ ಪಟ್ಟಣದ ಪುರಸಭೆಯು ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‍ಗಳ ನಿಲ್ದಾಣ ಮಾಡಿಲ್ಲ. ಈ ಬಗ್ಗೆ ಪುರಸಭೆ ಆಡಳಿತದ ಅಧಿಕಾರಿಗಳು, ಆಡಳಿತ ಮಂಡಳಿ, ಶಾಸಕರು ಗಮನ ಹರಿಸಬೇಕು’ ಎಂದು ಖಾಸಗಿ ಬಸ್ ಮಾಲೀಕ ನಿಜಾಮುದ್ದೀನ್ ಮನವಿ ಮಾಡಿದ್ದಾರೆ.

‘ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಖಾಸಗಿ ಬಸ್‌ಗಳ ಮಾಲೀಕರು ಮತ್ತು ಜನರಿಂದ ಮನವಿ ಬಂದರೆ, ಈ ಬಗ್ಗೆ ಆಡಳಿತ ಸಭೆಯಲ್ಲಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.

ಪಟ್ಟಣದ ಸಿವಿಲ್ ನ್ಯಾಯಾಲಯದಿಂದ, ನ್ಯಾಷನಲ್ ಕಾಲೇಜಿನವರಿಗೆ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ, ಖಾಸಗಿ ಬಸ್ ನಿಲ್ದಾಣ ಮಾಡಲು ಸೂಕ್ತವಾದ ಜಾಗ ಇಲ್ಲ. ಪುರಸಭೆಯಿಂದ ಡಿಸಿಸಿ ಬ್ಯಾಂಕಿನ ಪಕ್ಕದಲ್ಲಿ ಅವೈಜ್ಞಾನಿಕವಾಗಿ, ಗಾಳಿ ಬೆಳಕು ಇಲ್ಲದೇ ನಿರ್ಮಿಸಿದ ಮಳಿಗೆಗಳು ಹೂವು, ಹಣ್ಣು ವ್ಯಾಪಾರಸ್ಥರಿಗೆ ಬಳಕೆ ಆಗಿಲ್ಲ. ಸಂತೇಮೈದಾನದಲ್ಲಿ ಸಾಕಷ್ಟು ಪುರಸಭೆ ಜಾಗ ಇದೆ. ಆದರೆ ಪಟ್ಟಣದ ಹೊರಗೆ ಇದೆ. ಪ್ರಯಾಣಿಕರು ಹೋಗಿ ಬರಲು ತೊಂದರೆ ಇದೆ. ಇದರಿಂದ ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿನ ಪುರಸಭೆಯ ಜಾಗದಲ್ಲಿ ಖಾಸಗಿ ಬಸ್ ಗಳ ನಿಲ್ದಾಣ ಮಾಡಿ, ಅನುಕೂಲ ಮಾಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಡಿವಿಜಿ ಮುಖ್ಯರಸ್ತೆಯ ಪಾದಚಾರಿ ರಸ್ತೆಯಲ್ಲಿ ಖಾಸಗಿ ಬಸ್‍ಗಳು ನಿಲ್ಲುತ್ತವೆ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ. ಮಹಿಳೆಯರು ಮಕ್ಕಳು ವೃದ್ಧರು ನಡು ರಸ್ತೆಯಲ್ಲಿ ಪ್ರಾಣ ಭಯದಲ್ಲಿ ಸಂಚರಿಸುವಂತಾಗಿದೆ. 
ಮಂಜುಳಮ್ಮ ಮಹಿಳೆ
ಡಿವಿಜಿ ಮುಖ್ಯರಸ್ತೆಯ ಖಾಸಗಿ ಬಸ್‍ಗಳು ನಿಲ್ಲುವ ಜಾಗದಲ್ಲಿ ತಂಗುದಾಣ ಮಾಡಿಲ್ಲ. ಶೌಚಾಲಯಗಳು ಇಲ್ಲ. ಬಸ್ ಬರುವವರೆಗೆ ಕುಳಿತುಕೊಳ್ಳಲು ಜಾಗವೇ ಇಲ್ಲ. ರಸ್ತೆಯಲ್ಲೇ ಗಂಟೆಗಟ್ಟಲೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ.
ವಾಣಿ ಕಾಲೇಜು ವಿದ್ಯಾರ್ಥಿನಿ

ಪ್ರಯಾಣಿಕರಿಗೆ ತೊಂದರೆ:

ತಾಲ್ಲೂಕು ಕೇಂದ್ರದಲ್ಲಿ ಬಸ್ ನಿಲ್ದಾಣ ಶೌಚಾಲಯ ರಸ್ತೆ ತಂಗುದಾಣ ಮತ್ತು ಉದ್ಯಾನಗಳಿಗೆ ನಿವೇಶನ ಮೀಸಲಿಡುವುದು ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ ಎಂದು ಸರ್ಕಾರದ ಸುತ್ತೋಲೆಯಲ್ಲಿದೆ. ಆದರೆ ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ ಸ್ಥಾಪನೆ ಮಾಡಲು ಜಾಗ ಇಲ್ಲ. ಇದರಿಂದ ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ.  ನಾಗಭೂಷಣ ನಾಯಕ್ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.