
ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಇದುವರೆಗೂ ಪಲ್ಸ್ ಪೋಲಿಯೊ ಅಭಿಯಾನವು ಶೇ 99.8 ರಷ್ಟು ಗುರಿ ಮುಟ್ಟಿದೆ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ-1, ಪ್ರಾಥಮಿಕ ಆರೋಗ್ಯ ಕೇಂದ್ರಗಳು-9 ಹಾಗೂ 384 ಅಂಗನವಾಡಿ ಕೇಂದ್ರಗಳಲ್ಲಿ 5 ವರ್ಷದೊಳಗಿನ ಮಕ್ಕಲಿಗೆ ಪೋಲಿಯೊ ಹಾಕುವ ಅಭಿಯಾನ ನಡೆಯಿತು.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ತಳಿರು ತೋರಣ ಹಾಗೂ ಹೂವುಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಪೋಲಿಯೊ ಅಭಿಯಾನಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಚಾಲನೆ ನೀಡಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಹಾಗೂ ಮುಖ್ಯರಸ್ತೆಯಲ್ಲಿ ಸಂಚರಿಸುವ 5 ವರ್ಷದ ಒಳಗಿನ ಮಕ್ಕಳಿಗೆ ಆರೋಗ್ಯ ಸಿಬ್ಬಂದಿ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಗುರುತಿಸಿ ಪೋಲಿಯೊ ಹನಿ ಹಾಕಿದರು.
ಪಟ್ಟಣದ ವಾಲ್ಮೀಕಿ ದೇವಸ್ಥಾನ, ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಮಕ್ಕಳಿಗೆ ಪೋಲಿಯೊ ಹಾಕಿಸುವಂತೆ ಜಾಗೃತಿ ಮೂಡಿಸಲು ಡಂಗುರ ಬಾರಿಸಲಾಯಿತು.
ಆರೋಗ್ಯ, ಆಶಾ, ಅಂಗನವಾಡಿಯವರು ಸೋಮವಾರ ಪಟ್ಟಣದಲ್ಲಿ ವಾರ್ಡ್‍ವಾರು, ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪೋಲಿಯೊ ಲಸಿಕೆ ಹಾಕಿಸದ ಮಕ್ಕಳಿಗೆ ಲಸಿಕೆ ಹಾಕಿದರು.
ಪಟ್ಟಣದಲ್ಲಿ 5 ವರ್ಷದೊಳಗಿನ 2,640 ಮಕ್ಕಳಿದ್ದು, ಶೇ 99.8ರಷ್ಟು ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.