ADVERTISEMENT

ಕ್ರೀಡಾಂಗಣ; ಆಟಕ್ಕುಂಟು ಲೆಕ್ಕಕ್ಕಿಲ್ಲ

ಮೂಲಸೌಲಭ್ಯಗಳಿಲ್ಲದೆ ಬಳಲುತ್ತಿದೆ ಬಾಗೇಪಲ್ಲಿ ತಾಲ್ಲೂಕು ಕ್ರೀಡಾಂಗಣ

ಪಿ.ಎಸ್.ರಾಜೇಶ್
Published 27 ಸೆಪ್ಟೆಂಬರ್ 2021, 6:57 IST
Last Updated 27 ಸೆಪ್ಟೆಂಬರ್ 2021, 6:57 IST
ಸ್ಪಂದನಾ
ಸ್ಪಂದನಾ   

ಬಾಗೇಪಲ್ಲಿ: ಮಳೆ ಬಂದರೆ ಕೆರೆಯಂತೆ ನಿಲ್ಲುವ ನೀರು, ಎಲ್ಲೆಂದರಲ್ಲಿ ಬಿದ್ದಿರುವ ಕಸ, ಬಿಡಾಡಿ ದನಗಳು, ಹಂದಿಗಳ ಆವಾಸವಾಗಿರುವ ತಾಣ....ಇದು ಇಲ್ಲಿನ ತಾಲ್ಲೂಕು ಕೇಂದ್ರದಲ್ಲಿನ ಕ್ರೀಡಾಂಗಣದ ಕಥೆ.

ಕ್ರೀಡಾಂಗಣವು ತಗ್ಗಿನ ಪ್ರದೇಶದಲ್ಲಿ ಇದೆ. ಮಳೆ ನೀರು ಸಂಗ್ರಹ ಆಗುತ್ತದೆ. ವಾಯುವಿಹಾರಿಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಸೂಕ್ತ ನಿರ್ವಹಣೆ ಕೊರತೆಯಿಂದ ಕ್ರೀಡಾಂಗಣವು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ಸ್ಥಿತಿಯಲ್ಲಿದೆ. ಪಟ್ಟಣದ ಒಂದನೇ ವಾರ್ಡ್‍ನಲ್ಲಿರುವ ಅಂಬೇಡ್ಕರ್ ವಸತಿ ನಿಲಯದ ಬಳಿಯೇ ಕ್ರೀಡಾಂಗಣವಿದೆ.

ಮಾಜಿ ‌ಶಾಸಕ ಎನ್.ಸಂಪಂಗಿ ರಾಜ್ಯ ಕ್ರೀಡಾ ಪರಿಷತ್ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಕ್ರೀಡಾಂಗಣ ನಿರ್ಮಿಸಲಾಯಿತು. ನಂತರ ವಿವಿಧ ಹಂತಗಳಲ್ಲಿ ಅಭಿವೃದ್ಧಿಕೈಗೊಂಡಿದ್ದರು. ಹೀಗಿದ್ದರೂ ಕ್ರೀಡಾಪಟುಗಳಿಗೆ ಕ್ರೀಡಾಂಗಣ ಉಪಯೋಗಕ್ಕೆ ಇಲ್ಲ ಎನ್ನುವಂತೆ ಆಗಿದೆ.

ADVERTISEMENT

ಅವ್ಯವಸ್ಥೆಗಳು ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ತೊಂದರೆಯನ್ನು ಉಂಟು ಮಾಡಿವೆ. ಕ್ರೀಡಾಂಗಣದಲ್ಲಿನ ಕೆಲವು ಕಡೆಗಳಲ್ಲಿ ಕಳೆ ಮತ್ತು ಮುಳ್ಳಿನ ಗಿಡಗಳನ್ನು ತೆರವು ಮಾಡಿಸಬೇಕು. ಪ್ರತ್ಯೇಕ ಶೌಚಾಲಯ ಮಾಡಿದರೂ, ನೀರಿನ ವ್ಯವಸ್ಥೆ ಇಲ್ಲ. ಮಳೆ ಬಂದರೆ ಕ್ರೀಡಾಂಗಣ ಕೆಸರುಗದ್ದೆ ಆಗುತ್ತದೆ. ‌‌ವಾಯುವಿಹಾರಿಗಳು, ಕ್ರೀಡಾಪಟುಗಳು ನಡೆಯಲು, ಅಭ್ಯಾಸ ಮಾಡಲು ಆಗುವುದಿಲ್ಲ. ನೀರಿನ ತೇವಕ್ಕೆ ಜಾರಿ ಬೀಳುವರು. ಕ್ರೀಡಾಂಗಣಕ್ಕೆ ಮೇಲ್ವಿಚಾರಕರು ಸಹ ಇಲ್ಲ.

ಕ್ರೀಡಾಪಟುಗಳಿಗೆ ಕ್ರೀಡಾಂಗಣ ಉಪಯೋಗವಾಗಲಿ ಎಂದು ಕಾಮಗಾರಿಗಳನ್ನು ಮಾಡಿದೆಯೊ? ಅಥವಾ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಉಪಯೋಗವಾಗಲಿ ಎಂದು ಕ್ರೀಡಾಂಗಣ ನಿರ್ಮಿಸಲಾಗಿದೆಯೊ ಎಂದು ಕ್ರೀಡಾಪಟುಗಳು ದೂರುವರು.

ಮೈದಾನವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿಲ್ಲ. ಮೈದಾನ ಸಮತಟ್ಟಿಲ್ಲ. ತಡೆಗೋಡೆ ಸೇರಿದಂತೆ ವಿವಿಧ ತುಂಡು ಕಾಮಗಾರಿಗಳನ್ನು ಮಾಡಿದರೂ ಕಳಪೆ ಆಗಿವೆ. ಈ ಹಿಂದೆ ಕ್ರೀಡಾಂಗಣದಲ್ಲಿ ಮಾಡಿಸಿದ ಎರಡು ಪೆವಿಲಿಯನ್‌ಗಳ ಮೆಟ್ಟಿಲುಗಳು ಕುಸಿಯುವ ಹಂತದಲ್ಲಿವೆ.

ಮೇಲ್ನೋಟಕ್ಕೆ ಯುವಜನ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಂಗಣವನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ ಎನ್ನುವುದು ಎದ್ದು ಕಾಣುತ್ತದೆ. ಕ್ರೀಡಾಂಗಣ ಪಕ್ಕದಲ್ಲಿಯೇ ರಾಜಕಾಲುವೆ ಇದೆ. ಕಾಲುವೆಗಳು ಶಿಥಿಲವಾಗಿವೆ. ಇದರಿಂದ ಮಳೆ ಹಾಗೂ ಚರಂಡಿ ನೀರು ಕ್ರೀಡಾಂಗಣಕ್ಕೆ ಹರಿದುಬರುತ್ತಿದೆ.

ಮಳೆ ಬಂದರೆ ಕ್ರೀಡಾಂಗಣ ಕೆರೆಯಂತೆ ಆಗುತ್ತದೆ. ಇಳಿಜಾರಿನ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ. ಕ್ರೀಡಾಂಗಣಕ್ಕೆ ಹೋಗಲು ಸಮರ್ಪಕ ರಸ್ತೆ ಸಹ ಇಲ್ಲ.

ಕ್ರೀಡಾಂಗಣದ ಮುಖ್ಯದ್ವಾರದ ಗೇಟ್‍ನಲ್ಲಿ ಸಿಮೆಂಟ್ ಪದರಗಳು ಉದುರುತ್ತಿವೆ. ಗೇಟ್ ಉರುಳಿಬೀಳುವ ಹಂತದಲ್ಲಿದೆ. ಚಿಕ್ಕ ಗೇಟ್ ನಿತ್ಯ ತೆರೆದಿರುವುದರಿಂದ ಸೂಕ್ತ ಭದ್ರತೆ, ನಿರ್ವಹಣೆ ಕೊರತೆ ಇದೆ. ಕ್ರೀಡಾಂಗಣದಲ್ಲಿ ಕುರಿ, ಮೇಕೆ, ಹಂದಿಗಳು ಓಡಾಡುತ್ತಿವೆ. ಕೆಲ ಹುಡುಗರು ಗುಂಪು ಕಟ್ಟಿಕೊಂಡು ಕ್ರೀಡಾಂಗಣದಲ್ಲಿಯೇ ಮೋಜು ಮಾಡುವರು.

ಕ್ರೀಡಾಂಗಣದ ಮುಂದೆ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದ್ದಾರೆ. ಚರಂಡಿಯಲ್ಲಿ ಕಸ, ತ್ಯಾಜ್ಯ ತುಂಬಿದೆ. ಕಸದ ರಾಶಿಗಳು ಎಲ್ಲೆಂದರಲ್ಲಿ ಹಾಕಿರುವುದರಿಂದ ಬೀದಿನಾಯಿಗಳು, ಹಂದಿಗಳು ಆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಕ್ರೀಡಾಂಗಣಕ್ಕೆ ಬರುವ ವಾಯುವಿಹಾರಿಗಳಿಗೆ, ಜನರಿಗೆ ದುರ್ನಾತ ಅಡರುತ್ತಿದೆ.

ಕ್ರೀಡಾಂಗಣದಲ್ಲಿ ವಾಲಿಬಾಲ್ ಅಂಕಣ ಬಿಟ್ಟರೆ ಕೊಕ್ಕೊ, ಕಬ್ಬಡಿ, ಎತ್ತರ, ಶಟಲ್ ಬ್ಯಾಡ್ಮಿಂಟನ್ ಅಂಕಣ ಇಲ್ಲ. ಅವೈಜ್ಞಾನಿಕ ರೀತಿಯಲ್ಲಿ ಟ್ರ್ಯಾಕ್ ನಿರ್ಮಿಸಿರುವುದರಿಂದ ಅಭ್ಯಾಸಕ್ಕೂ ತೊಂದರೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.