ADVERTISEMENT

ಸಂವಿಧಾನ ಓದುವ ಮೂಲಕ ವಿವಾಹವಾದ ಯುವ ಜೋಡಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 6:59 IST
Last Updated 27 ಮಾರ್ಚ್ 2022, 6:59 IST
ಸಂವಿಧಾನ ಓದುವುದರ ಮೂಲಕ ಬಿ.ಎ.ನರೇಶ್, ಕೆ.ದೀಪ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು
ಸಂವಿಧಾನ ಓದುವುದರ ಮೂಲಕ ಬಿ.ಎ.ನರೇಶ್, ಕೆ.ದೀಪ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು   

ಬಾಗೇಪಲ್ಲಿ: ಸಂವಿಧಾನದ ಪೀಠಿಕೆ ಓದುವ ಮುಖಾಂತರ ಶಿಕ್ಷಕರಾದ ತಾಲ್ಲೂಕಿನ ಕೆ. ದೀಪಾ ಹಾಗೂ ಬಿ.ಎ. ನರೇಶ ವೈವಾಹಿಕ ಜೀವನಕ್ಕೆ ಶನಿವಾರ ಪಾದಾರ್ಪಣೆ ಮಾಡಿದರು. ಸಾಂಸ್ಕೃತಿಕ ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಸಂವಿಧಾನ ಪೀಠಿಕೆಯನ್ನು ಓದಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಕ್ರಾಸ್‌ನ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ಮಿಟ್ಟೇಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ದೀಪ ಮೂಲತಃ ದೇವನಹಳ್ಳಿ ತಾಲ್ಲೂಕಿನ ಸಿ.ಎನ್. ಹೊಸೂರು ಗ್ರಾಮದವರು. ಬಿ.ಎ.ನರೇಶ ಗುಡಿಬಂಡೆ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದವರಾಗಿದ್ದು, ಮಂಡಿಕಲ್ಲು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

‘ಸಂವಿಧಾನ ದೇಶದ ಮಹಾಗ್ರಂಥವಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಆದರ್ಶಗಳು ನಮಗೆ ಪ್ರೇರಣೆಯಾಗಿದೆ. ಆದ್ದರಿಂದ ಶಾಸ್ತ್ರೋಕ್ತವಾಗಿ ಮದುವೆ ಆಗುವುದಕ್ಕಿಂತ, ಸಂವಿಧಾನ ಓದುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ನಮಗೆ ಸಂತಸ ತಂದಿದೆ’ ಎಂದು ನವದಂಪತಿ ಕೆ.ದೀಪ ಹಾಗು ಬಿ.ಎ.ನರೇಶ್ ತಿಳಿಸಿದರು.

ADVERTISEMENT

ಸಾಂಸ್ಕೃತಿಕ ಚಿಂತಕ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ‘ಮಾನವತ್ವ, ಶಾಂತಿ–ಸಹಬಾಳ್ವೆ ಹಾಗೂ ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಲ್ಲಿ ಈ ದಂಪತಿ ಮಾದರಿಯಾಗಿದ್ದಾರೆ. ಆಡಂಬರ ವಿವಾಹಗಳಿಗಿಂತ ಸರಳ ವಿವಾಹಗಳು ಸಮಾಜಕ್ಕೆ ಮುಖ್ಯವಾಗಿದೆ’ ಎಂದು ಆಶಿಸಿದರು.

ಸ್ವಾತಂತ್ರ್ಯ ಹೋರಾಟಗಾರರ, ಮಹನೀಯರ ಕನ್ನಡ ಪುಸ್ತಕಗಳನ್ನುನೂತನ ದಂಪತಿಗಳಿಗೆ ಉಡುಗೊರೆಯಾಗಿ ನೀಡಲಾಯಿತು. ಬೌದ್ಧ ಬಿಕ್ಖು ಡಾ.ಕಲ್ಯಾಣಸಿರಿ ಭಂತೇಜಿ, ಪ್ರಗತಿಪರ ವೈದ್ಯ ಡಾ.ಅನಿಲ್ ಕುಮಾರ್ ಆವುಲಪ್ಪ, ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ, ಶಿಕ್ಷಕ ಎಚ್.ಆರ್. ಸುಬ್ರಮಣ್ಯಂ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ವಿವಾಹಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.